Namma Metro: ಏರ್ಪೋರ್ಟ್ ಮೆಟ್ರೋ ನೀಲಿ ಮಾರ್ಗಕ್ಕೆ ಬರಲಿವೆ 2 ಡ್ರವರ್‍ಲೆಸ್ ರೈಲು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಗೆ ವೇಗ ಸಿಕ್ಕಿದೆ. ಏಕೆಂದರೆ ಈಗಾಗಲೇ ಗುಲಾಬಿ ಮಾರ್ಗ ತೆರೆಯಲು ಸಜ್ಜಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ನೀಲಿ ಮಾರ್ಗಕ್ಕೆ (Blue Line Metro) ಮುಂದಿನ ವಾರಗಳಲ್ಲಿ ಬೆಂಗಳೂರು ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಎರಡು ಡ್ರೈವರ್‍ಲೆಸ್ ಮೆಟ್ರೋ ರೈಲು ಸೆಟ್‌ಗಳನ್ನು ಒದಗಿಸಲಿದೆ.
ವಾಹನ ದಟ್ಟಣೆ ಇರುವ ಬೆಂಗಳೂರು ಹೊರವರ್ತುಲ ರಸ್ತೆಯ ಕೆ.ಆರ್.ಪುರಂ, ಮಹಾದೇವಪುರ, ಎಚ್‌ಎಸ್‌ಆರ್ ಬಡಾವಣೆ, ಬೆಳ್ಳಂದೂರು, ಮಾರತ್ತಹಳ್ಳಿ ಸೇರಿದಂತೆ ಈ ಭಾಗಗಳಲ್ಲಿ ಐಟಿ ಕಂಪನಿಗಳ ಸಂಖ್ಯೆ ಹೆಚ್ಚಿವೆ. ಇದೆಲ್ಲ ಗಮನದಲ್ಲಿಟ್ಟುಕೊಂಡೆ ನಿರ್ಮಿಸಲಾಗುತ್ತಿರುವ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ನೀಲಿ ಮೆಟ್ರೋ ಮಾರ್ಗಕ್ಕಾಗಿ ಎರಡು ಮೆಟ್ರೋ ರೈಲು ಸೆಟ್‌ಗಳು ಶೀಘ್ರವೇ ಬೈಯಪ್ಪನಹಳ್ಳಿ ಡಿಪೋಗೆ ಬರಲಿವೆ.

ಸುಮಾರು 55 ಕಿಲೋ ಮೀಟರ್ ಉದ್ದದ ನೀಲಿ ಮೆಟ್ರೋ ಮಾರ್ಗವು ಎರಡು ಹಂತಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗೆ ಮೊದಲ ಹಂತದಲ್ಲಿ (2ಎ) 18 ಕಿಲೋ ಮೀಟರ್, ಎರಡನೇ ಹಂತದಲ್ಲಿ ಕೆ.ಆರ್.ಪುರಂನಿಂದ ದೇವನಹಳ್ಳಿ ವಿಮಾನ ನಿಲ್ದಾಣವರೆಗೆ ಸುಮಾರು 37 ಕಿಲೋ ಮೀಟರ್ (2ಬಿ) ಯೋಜನೆಯ ಕಾಮಗಾರಿ ನಡೆಯುತ್ತಿದೆ.
ಇದೀಗ ಎರಡು ಸೆಟ್ ರೈಲುಗಳನ್ನು ಬಿಇಎಂಎಲ್ ಮೆಟ್ರೊ ಡಿಪೋಗೆ ಕಳುಹಿಸಲಿದೆ. ರೈಲುಗಳು ಬರುತ್ತಿದ್ದಂತೆ ಲಗೇಜ್ ರ್ಯಾಕ್‌ಗಳೊಂದಿಗೆ ಪರೀಕ್ಷೆಗಳು ಆರಂಭವಾಗಲಿವೆ ಎಂದು ಬಿಎಂಆರ್‍ಸಿಎಲ್ ಮೂಲಗಳು ಮಾಹಿತಿ ನೀಡಿವೆ.
ಐದು ರೈಲುಗಳಿಂದ ಗುಲಾಬಿ ಮಾರ್ಗ ಕಾರ್ಯಾಚರಣೆ
ಮೊದಲ ಹಂತದಲ್ಲಿ ಮುಂದಿನ ಮೇ ತಿಂಗಳಲ್ಲಿ ತೆರೆಯಲಿರುವ ಮೆಟ್ರೋ ಪಿಂಕ್ ಮಾರ್ಗಕ್ಕೆ (Pink Line) ರೈಲು ಬೋಗಿ ಉತ್ಪಾದಕ ಕಂಪನಿ ಬಿಇಎಂಎಲ್ ಈಗಾಗಲೇ ಐದು ರೈಲು ಸೆಟ್ ನೀಡಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಒಟ್ಟು 7.5 ಕಿಲೋ ಮೀಟರ್ ಮಾರ್ಗದಲ್ಲಿ ಸದ್ಯಕ್ಕೆ 5 ರೈಲುಗಳಿಂದ ಕಾಯಾಚರಣೆ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಈ ಸಂಬಂಧ ಪ್ರೊಟೋಟೈಪ್ ಮಾದರಿಯ ಡ್ರೈವರ್‍ಲೆಸ್ ರೈಲುಗಳ ಪ್ರಾಯೋಗಿಕ ಸಂಚಾರ, ಟ್ರ್ಯಾಕ್ ಪರಿಶೀಲನೆ, ರೈಲುಗಳ ತಪಾಸಣೆ, ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ಏಪ್ರಿಲ್ ತಿಂಗಳಲ್ಲಿ ಪರೀಕ್ಷೆಗಳು ಪೂರ್ಣಗೊಳ್ಳುತ್ತಿದ್ದಂತೆ ಮೇ ತಿಂಗಳಲ್ಲಿ ಪಿಂಕ್ ಲೈನ್ ಕಾರ್ಯಾಚರಣೆ ಆರಂಭವಾಗಲಿದೆ. ಕಳೆದ ಶನಿವಾರದಿಂದ ಆರ್‍ಡಿಓಎಸ್ ಅಧಿಕಾರಿಗಳು ಅಂತಿಮ ಪರಿಶೀಲನೆ, ಸುರಕ್ಷತಾ ತಪಾಸಣೆ ಕೈಗೊಂಡಿದ್ದಾರೆ.
ಉಳಿದ 13 ಕಿಲೋ ಮೀಟರ್ ತಾವೆರೆಕರೆಯಿಂದ ನಾಗವಾರವರೆಗಿನ ಪಿಂಕ್ ಲೈನ್ ಮಾರ್ಗವನ್ನು ಎರಡನೇ ಹಂತದಲ್ಲಿ ಇದೇ ಡಿಸೆಂಬರ್ 2026ಕ್ಕೆ ತೆರೆಯಲು ಅಧಿಕಾರಿಗಳು ಸಜ್ಜಾಗಿದೆ.












Click it and Unblock the Notifications