ಆನೇಕಲ್‌ನಲ್ಲಿ ಚಿರತೆ ಸೆರೆಗಾಗಿ ಹರಸಾಹಸ: ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಮೂವರ ಮೇಲೆ ಚಿರತೆ ದಾಳಿ!
ಬೆಂಗಳೂರು ನವೆಂಬರ್ 1: ಬೆಂಗಳೂರಿನ ಆನೇಕಲ್ ಭಾಗದ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಹಿಡಿಯಲು ಮುಂದಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿದೆ. ನಿನ್ನೆ ರಾತ್ರಿ 11 ಗಂಟೆಗೆ ಆನೇಕಲ್‌ನ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿತ್ತು.
ಕೂಡ್ಲಿ ಬಳಿಯ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಚಿರತೆ ಕಾಪೌಂಡ್ ಹಾರಿ ಹೋಗಿರುವುದು ಕಂಡುಬಂದಿತ್ತು. ಸ್ಥಳೀಯರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಅರಣ್ಯ ಅಧಿಕಾರಿಗಳಿಗೆ ನೀಡಿದ್ದರು. ಕೆಲ ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ಹೊರಬರುತ್ತಿದ್ದ್ ಚಿರತೆ ಸ್ಥಳೀಯರ ನಿದ್ದೆಗೆಡಿಸಿತ್ತು.

ಹೀಗಾಗಿ ಚಿರತೆ ಸೆರೆಗಾಗಿ ಥರ್ಮಲ್ ಡ್ರೋನ್ ಮೂಲಕ ಅಧಿಕಾರಿಗಳು ಕಾರ್ಯಚರಣೆ ನಡೆಸಿದ ವೇಳೆ ಮೂವರ ಮೇಲೆ ಚಿರತೆ ದಾಳಿ ಮಾಡಿದೆ. ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡದಲ್ಲಿದ್ದ ಅರವಿಳಿಕೆ ತಜ್ಞರಾದ ಡಾ. ಕಿರಣ್ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದ್ದು ಅವರ ಕತ್ತಿಗೆ ಭಾಗದಲ್ಲಿ ಗಾಯವಾಗಿದೆ. ಸದ್ಯಕ್ಕೆಕಿರಣ್ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾರ್ಪ್ ಶೂಟರ್ ಒಬ್ಬರ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದೆ. ಇವರು ಚಿರತೆ ಸೆರೆಹಿಡಿಯುವ ತಜ್ಞರ ತಂಡದಲ್ಲಿದ್ದರು. ಮಾತ್ರವಲ್ಲದೆ ಅರಣ್ಯ ಇಲಾಖೆಯ ಮತ್ತೊಬ್ಬ ಸಿಬ್ಬಂದಿಯ ಮೇಲೂ ಚಿರತೆ ದಾಳಿ ನಡೆಸಿದೆ. ಅರವಳಿಕೆಯನ್ನು ನೀಡಿದ್ದಾಗ ಅದು ಮೂರ್ಛೆ ಹೋಗಿತ್ತು. ಆ ಸಂದರ್ಭದಲ್ಲಿ ಅದನ್ನು ಹಿಡಿಯಲು ಹೋದಾಗ ಈ ಅವಗಢ ಸಂಭವಿಸಿದೆ ಎಂದು ಹೇಳಲಾಗಿದೆ.
ಬಯಲು ಪ್ರದೇಶದಲ್ಲಿ ಚಿರತೆ ಹಿಡಿಯುವುದು ಕಷ್ಟಕರವಾಗಿದೆ. ಚಿರತೆ ಸೆರೆ ಹಿಡಿಯುವವರೆಗೂ ಸ್ಥಳೀಯರಿಗೆ ಏಕಾಂಗಿಯಾಗಿ ಓಡಾಡದಂತೆ ಹಾಗೂ ಜಾಗರೂಕರಾಗಿರುವಂತೆ ಮನವಿ ಮಾಡಲಾಗಿದೆ. ಪಾಳು ಬಿದ್ದ ಕಟ್ಟಡದ ಬಳಿ ಚಿರತೆ ಕಾಪೌಂಡ್ ಹಾರಿರುವುದು ಗಮನದಲ್ಲಿಟ್ಟುಕೊಂಡು ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಶೋಧಕಾರ್ಯ ಆರಂಭಿಸಿದ್ದರು.
ಚಿರತೆ ಸೆರೆಗಾಗಿ ಎಂಟು ಜನರ ನುರಿತ ವಿಶೇಷ ತಂಡ ಮೈಸೂರಿನಿಂದ ಬೆಂಗಳೂರಿಗೆ ಬಂದಿದೆ. ಹುಣಸೂರು ವನ್ಯಜೀವಿ ವಿಭಾಗ ತಂಡದೊಂದಿಗೆ ವೈದ್ಯರು, ಇನ್ನಿತರ ಅಧಿಕಾರಿಗಳು ಚಿರತೆ ಹಿಡಿಯಲು ಬೇಕಾದ ಅಗತ್ಯ ಸಾಮಾಗ್ರಿಗಳೊಂದಿಗೆ ಶೋಧಕಾರ್ಯ ಶುರುಮಾಡಿದ್ದರು. ಈ ವೇಳೆ ಈ ಘಟನೆ ನಡೆದಿದೆ. ನ. 1ರಂದು ಬೆಳಗ್ಗೆ ಕಟ್ಟಡದೊಳಗೆ ಚಿರತೆಯು ಓಡಾಡುತ್ತಿದ್ದಾಗ ಗುರಿಯಿಟ್ಟು ಅದಕ್ಕೆ ಅರವಳಿಕೆ ಇಂಜೆಕ್ಷನ್ ಅನ್ನು ಶೂಟ್ ಮಾಡಿದ್ದರು. ಲೋ ಡೋಸ್‌ನಿಂದಾಗಿ ಚಿರತೆ ಮೂರ್ಛೆ ಹೋಗದೆ ಸೆರೆ ಹಿಡಿಯಲು ಮುಂದಾದವರ ಮೇಲೆ ದಾಳಿ ಮಾಡಿದೆ.
ಆನೇಕಲ್‌ನ ಕೂಡ್ಲು ಗೇಟ್ ಬಳಿ ಅ.29ರ ರಾತ್ರಿಯಿಂದ ಕಾಣಿಸಿಕೊಂಡಿರುವ ಚಿರತೆ, ಅ. 30ರಂದು ಒಂದು ಅಪಾರ್ಟ್ಮೆಂಟ್‌ನೊಳಕ್ಕೆ ನುಗ್ಗಿತ್ತು. ಫಸ್ಟ್ ಫ್ಲೋರ್‌ವರೆಗೂ ಹೋಗಿ ತಿರುಗಾಟ ನಡೆಸಿದೆ. ಕೂಡ್ಲು ಗೇಟ್ ಬಳಿಯ ಸಲಾರ್ ಪುರಿಯ ಸತ್ವ ಕ್ಯಾಡೆನ್ಜಾ ಅಪಾರ್ಟ್‌ಮೆಂಟ್‌ನೊಳಗೆ ಕಾಣಿಸಿಕೊಂಡ ಚಿರತೆ ಪಾರ್ಕಿಂಗ್ ಲಾಟ್‌ನಿಂದ ಪ್ರವೇಶಿಸಿ ಮೊದಲ ಮಹಡಿಯವರೆಗೆ ಸಂಚಾರ ನಡೆಸಿದೆ. ಸೋಮವಾರ ರಾತ್ರಿ ಕೂಡಾ ಕೂಡ್ಲು ಬಳಿಯ ಐಟಿ ಟೆಕ್ ಪಾರ್ಕ್ ಬಳಿ ಚಿರತೆ ಕಾಣಿಸಿಕೊಂಡಿತ್ತು.
ಆನೇಕಲ್ ನ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿರುವ ಪಾಳು ಕಟ್ಟಡವೊಂದರಲ್ಲಿ ಚಿರತೆ ಸೇರಿಕೊಂಡಿದೆ ಎಂಬ ಮಾಹಿತಿಯನ್ನಾಧರಿಸಿ ಅರಣ್ಯ ಇಲಾಖೆ ಅ. 31ರ ಮಧ್ಯಾಹ್ನದಿಂದಲೇ ಕಾರ್ಯಾಚರಣೆಗೆ ಇಳಿದಿತ್ತು. ಮೈಸೂರಿನಿಂದ ಚಿರತೆ ಸೆರೆ ತಜ್ಞರ ತಂಡವೊಂದು ಆಗಮಿಸಿತ್ತು. ನೆನ್ನೆ ಸಂಜೆ ವೇಳೆಗೆ ಕಾರ್ಯಾಚರಣೆಯನ್ನು ಕೆಲ ಹೊತ್ತು ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ, ನ. 1ರಂದು ಹಿಡಿಯಲು ಮುಂದಾಗಿದ್ದರು.












Click it and Unblock the Notifications