ಬೆಂಗಳೂರು ಕೆರೆಗೆ ತ್ಯಾಜ್ಯ ನೀರು ಬಿಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ರಾಮಲಿಂಗಾ ರೆಡ್ಡಿ
ಬೆಂಗಳೂರು: ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ನೀರು ಮತ್ತು ಒಳಚರಂಡಿ ನೀರು ಯಾವುದೇ ಕಾರಣಕ್ಕೆ ಕೆರೆ, ಹಳ್ಳ ಅಥವಾ ನೈಸರ್ಗಿಕ ಜಲಮೂಲಗಳಿಗೆ ಸೇರಬಾರದು. ಇದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಅವಕಾಶ ಮಾಡಿಕೊಡಬಾರದು. ಜೊತೆಗೆ ಸ್ಥಳೀಯ ಸಂಸ್ಥೆಗಳು, ಕೈಗಾರಿಕೆ, ಜನವಸತಿ ಪ್ರದೇಶಗಳಿಂದಲೂ ಕೊಳಚೆ ನೀರನ್ನು ಕೆರೆ ಬಿಡಲಾಗುತ್ತಿದ್ದು, ಅವರ ವಿರುದ್ಧ ಮುಲ್ಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದರು. ಈ ಸಂಬಂಧ ಮೇಲ್ವಿಚಾರಣಾ ತಂಡಗಳನ್ನೂ ರಚಿಸಲಾಗುವುದು ಎಂದು ಹೇಳಿದ್ದಾರೆ.
ಚಂದಾಪುರ ಕೆರೆಗೆ ನೆನ್ನೆ ರಾಮಲಿಂಗಾರೆಡ್ಡಿ ಅವರು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಶಿವಣ್ಣ ಅವರೊಂದಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ರಾಮಕೃಷ್ಣಾಪುರ, ಹೆನ್ನಾಗರ, ಹೀಲಲಿಗೆ ಮತ್ತು ಮುತ್ತಾನಲ್ಲೂರು ಕೆರೆಗಳಿಗೆ ಭೇಟಿ ನೀಡಿ, ಅಲ್ಲಿನ ಮಾಲಿನ್ಯ ಪರಿಸ್ಥಿತಿಯ ಮಾಹಿತಿ ಪಡೆದರು.

ಎಲೆಕ್ಟ್ರಾನಿಕ್ ಸಿಟಿ, ಜಿಗಣಿ ಹಾಗೂ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಿಂದ ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ನೀರು ಹಾಗೂ ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ಪ್ರದೇಶಗಳಿಂದ ಸಂಸ್ಕರಿಸದ ಒಳಚರಂಡಿ ನೀರು ಸ್ಥಳೀಯ ಜಲಮೂಲಗಳಿಗೆ ಸೇರುತ್ತಿರುವ ಬಗ್ಗೆ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಸಚಿವರು ಸ್ಥಳಕ್ಕೆ ದೌಡಾಯಿಸಿದರು.
ಜಲಮಾಲಿನ್ಯ ವಿರುದ್ಧ ಕಠಿಣ ಕ್ರಮಕ್ಕೆ ನಿರ್ದೇಶನ
ಮಾಲಿನ್ಯದಿಂದ ಕೆರೆಗಳ ಸ್ಥಿತಿ ಹದಗೆಡುತ್ತಿದ್ದು, ಇದರಿಂದ ಸ್ಥಳೀಯ ಜನರು ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕೈಗಾರಿಕೆಗಳಿಂದ ಸಂಸ್ಕರಿಸದ ನೀರು, ಒಳಚರಂಡಿ ನೀರು ಯಾವುದೇ ಕೆರೆ, ಹಳ್ಳ ಅಥವಾ ನೈಸರ್ಗಿಕ ಜಲಮೂಲಗಳಿಗೆ ಸೇರುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ತಡೆಯಬೇಕು. ಜಲಮೂಲಗಳಿಗೆ ಕೊಳಚೆ ನೀರು ಹರಿಸುವವರು, ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. NGT ನಿರ್ದೇಶನಗಳು ಹಾಗೂ ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ನೀರು ಸಂಸ್ಕರಣಾ ಘಟಕಗಳ ಪರಿಶೀಲನೆ
ಕೈಗಾರಿಕಾ ಹಾಗೂ ವಸತಿ ಪ್ರದೇಶಗಳಿಂದ ಬರುವ ತ್ಯಾಜ್ಯ ನೀರನ್ನು ಸಂಸ್ಕರಿಸಲು ನಿರ್ಮಿಸಲಾಗುತ್ತಿರುವ ನಾಲ್ಕು ಪ್ರಮುಖ ನೀರು ಸಂಸ್ಕರಣಾ ಘಟಕಗಳ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು. ಈ ಸಂಸ್ಕರಣಾ ಘಟಕಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅವುಗಳನ್ನು ಕಾರ್ಯಾಚರಣೆಗೆ ತರಲು ಸ್ಪಷ್ಟವಾದ ಸಮಯಬದ್ಧ ಕಾರ್ಯಯೋಜನೆ ರೂಪಿಸಿ ಜಾರಿಗೆ ತರುವಂತೆ ನಗರಸಭೆ ಮತ್ತು ಮಾಲಿನ್ಯ ಮಂಡಳಿಗೆ ತಿಳಿಸಿದರು.
ನಿರಂತರ ಮೇಲ್ವಿಚಾರಣೆ
ಈ ಭಾಗದ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಜಿಗಣಿ ಹಾಗೂ ಅತ್ತಿಬೆಲೆ ಪ್ರದೇಶಗಳ ಕೈಗಾರಿಕಾ ತ್ಯಾಜ್ಯ ನೀರು ಹೊರಹಾಕುವ ಸ್ಥಳಗಳ ಮೇಲೆ ನಿರಂತರ ಮೇಲ್ವಿಚಾರಣೆ ಮಾಡಬೇಕು. ಇಲ್ಲಿ ಮಾಲಿನ್ಯಗೊಂಡ ಕೆರೆಗಳನ್ನು ಪುನರುಜ್ಜೀವನಗೊಳಿಸಲು ಹಾಗೂ ಮುಂದಿನ ದಿನಗಳಲ್ಲಿ ಅವುಗಳಿಗೆ ಯಾವುದೇ ರೀತಿಯ ಮಾಲಿನ್ಯ ಸೇರುವುದನ್ನು ತಡೆಯಲು ಸರ್ಕಾರ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದರು.
ಕೆರೆಗಳು ಮತ್ತು ಜಲಮೂಲಗಳು ಪರಿಸರಕ್ಕೆ ಮಾತ್ರವಲ್ಲದೆ, ಜನರ ಜೀವನ ಮತ್ತು ಆರೋಗ್ಯಕ್ಕೂ ಮುಖ್ಯ. ಕೈಗಾರಿಕೆಗಳು, ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ನೀರನ್ನು ಸರಿಯಾಗಿ ಸಂಸ್ಕರಿಸಿದ ನಂತರವೇ ಹೊರಹಾಕಬೇಕು. ಪರಿಸರ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.
ವಿಶೇಷ ಮೇಲ್ವಿಚಾರಣಾ ತಂಡ ರಚನೆ
ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಜಿಗಣಿ ಹಾಗೂ ಅತ್ತಿಬೆಲೆ ಪ್ರದೇಶಗಳಲ್ಲಿ ಕೈಗಾರಿಕಾ ತ್ಯಾಜ್ಯ ನೀರು ಹೊರಹಾಕುವ ಸ್ಥಳಗಳನ್ನು ನಿಯಮಿತವಾಗಿ ಪರಿಶೀಲಿಸಲು ಹಾಗೂ ಪರಿಸರ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು KSPCB ವತಿಯಿಂದ ವಿಶೇಷ ಮೇಲ್ವಿಚಾರಣಾ ತಂಡಗಳನ್ನು ರಚಿಸಲಾಗುವುದು ಎಂದು ಸಚಿವರು ಹೇಳಿದರು. ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಸಚಿವರು ಅವರ ಸಮಸ್ಯೆ ಆಲಿಸಿ, ಪರಿಹಾರದ ಭರವಸೆ ಕೊಟ್ಟರು.


Click it and Unblock the Notifications
