Inspiring Story: ಕೇವಲ 10 ರೂಪಾಯಿಗೆ ಪೇಪರ್ ಬ್ಯಾಗ್; ಬೆಂಗಳೂರಿನ 10 ವರ್ಷದೊಳಗಿನ ಮಕ್ಕಳಿಂದ ಅದ್ಭುತ ಸ್ಟಾರ್ಟ್ಅಪ್!
ಒಂದು ಉದ್ಯಮವನ್ನ ಶುರು ಮಾಡಬೇಕು ಎಂದರೆ ಲಕ್ಷಾಂತರ ರೂಪಾಯಿ ಬಂಡವಾಳ, ಹೂಡಿಕೆದಾರರು ಮತ್ತು ದೊಡ್ಡ ತಂಡ ಬೇಕು ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಬೆಂಗಳೂರಿನ 10 ವರ್ಷದೊಳಗಿನ ಮೂವರು ಪುಟಾಣಿಗಳು ಈ ಮಾತನ್ನ ಸುಳ್ಳು ಎಂದು ಸಾಬೀತು ಮಾಡಿದ್ದಾರೆ.
ಹೌದು, ನಚಿಕೇತ್, ಶಾರದಾ ಮತ್ತು ಸಮುದ್ಯತ ಎಂಬ ಮೂವರು ಮಕ್ಕಳು ಸೇರಿ ಇಕೋ ವಾಲಾ ಬೆಂಗಳೂರು ಎಂಬ ವಿನೂತನ ಪರಿಸರ ಸ್ನೇಹಿ ಅಭಿಯಾನವನ್ನ ಶುರು ಮಾಡಿದ್ದಾರೆ. ಗಮ್ (ಅಂಟು) ಮತ್ತು ಕತ್ತರಿ ಇಲ್ಲದೆ ಕೇವಲ ಕೈಯಿಂದಲೇ ಪೇಪರ್ ಬ್ಯಾಗ್‌ಗಳನ್ನ ತಯಾರಿಸುವ ಮೂಲಕ ಈ ಮಕ್ಕಳು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಬೆಂಗಳೂರು ಮಕ್ಕಳ ಸ್ಟಾರ್ಟ್ಅಪ್: ಶಾಲೆಯ ಪಾಠದಿಂದ ಶುರುವಾದ ಉದ್ಯಮ
ಈ ಮಕ್ಕಳ ವಯಸ್ಸು ಇನ್ನೂ ಹತ್ತು ದಾಟಿಲ್ಲ ನೋಡಿ. ಇವರ ಬಳಿ ಹಣ ಕೊಡಲು ಯಾರೂ ಹೂಡಿಕೆದಾರರಿಲ್ಲ. ಆದರೂ ಇವರ ಬ್ಯುಸಿನೆಸ್ ಕೇವಲ 10 ರೂಪಾಯಿಗಳ ಮಾಸಿಕ ಚಂದಾದಾರಿಕೆಯ ಮೇಲೆ ಯಶಸ್ವಿಯಾಗಿ ನಡೆಯುತ್ತಿದೆ.
ಶಾಲೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಕಲಿತ ಪಾಠವೊಂದು, ಇಂದು ಅವರ ನೆರೆಹೊರೆಯಲ್ಲಿ ಒಂದು ಸಣ್ಣ ಉದ್ಯಮವಾಗಿ ಮಾರ್ಪಟ್ಟಿದೆ. ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳನ್ನ ಅರಿತ ಈ ಮಕ್ಕಳು, ಅದಕ್ಕೆ ಪರ್ಯಾಯವಾಗಿ ಏನಾದರೂ ಮಾಡಬೇಕು ಎಂದು ಯೋಚಿಸಿ ಈ ಹೆಜ್ಜೆ ಇಟ್ಟಿದ್ದಾರೆ.
ಕೇವಲ ಕಾಗದವನ್ನ ಮಡಚುವ ಮೂಲಕ, ಯಾವುದೇ ಅಂಟು ಅಥವಾ ಕತ್ತರಿಯ ಸಹಾಯವಿಲ್ಲದೆ ಸುಂದರವಾದ ಮತ್ತು ಗಟ್ಟಿಮುಟ್ಟಾದ ಕೈಯಿಂದ ಮಾಡಿದ ಪೇಪರ್ ಬ್ಯಾಗ್‌ಗಳು ಇವರ ಕೈಯಲ್ಲಿ ರೆಡಿಯಾಗಿವೆ.
ಕೈಯಿಂದ ಮಾಡಿದ ಪೇಪರ್ ಬ್ಯಾಗ್‌ಗಳು: ಕೇವಲ 10 ರೂ.ಗೆ ಲಭ್ಯ
ಈ ಪುಟಾಣಿಗಳ ಬ್ಯುಸಿನೆಸ್ ಮಾಡೆಲ್ ತುಂಬಾ ಸರಳ ಮತ್ತು ಆಕರ್ಷಕವಾಗಿದೆ. ತಿಂಗಳಿಗೆ ಕೇವಲ 10 ರೂಪಾಯಿ ಪಾವತಿಸಿದರೆ ಸಾಕು, ಗ್ರಾಹಕರಿಗೆ ತಿಂಗಳಿಗೆ ಒಟ್ಟು 8 ಪೇಪರ್ ಬ್ಯಾಗ್‌ಗಳನ್ನ ನೀಡಲಾಗುತ್ತದೆ. ಅಂದರೆ ಪ್ರತಿ ಭಾನುವಾರ 2 ಬ್ಯಾಗ್‌ಗಳನ್ನ ಗ್ರಾಹಕರ ಮನೆ ಬಾಗಿಲಿಗೆ ಡೆಲಿವರಿ ಮಾಡಲಾಗುತ್ತದೆ.
ಇಷ್ಟೇ ಅಲ್ಲದೆ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಸ್ಟಮ್ ಆರ್ಡರ್‌ಗಳನ್ನ ಸಹ ಇವರು ತೆಗೆದುಕೊಳ್ಳುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಆಟವಾಡುತ್ತಲೇ ಇವರು ಈ ಬ್ಯಾಗ್‌ಗಳನ್ನ ತಯಾರಿಸುತ್ತಾರೆ. ಇದು ಅವರಲ್ಲಿರುವ ಸಮಯ ಪ್ರಜ್ಞೆ ಮತ್ತು ಬದ್ಧತೆಯನ್ನ ಎತ್ತಿತೋರಿಸುತ್ತದೆ.
ಪ್ಲಾಸ್ಟಿಕ್ ಮುಕ್ತ ಅಭಿಯಾನ: ಪರಿಸರ ಸಂರಕ್ಷಣೆಗೆ ಉಚಿತ ಸ್ಯಾಂಪಲ್
ಜನರು ಪ್ಲಾಸ್ಟಿಕ್ ಕವರ್‌ಗಳನ್ನ ಬಿಟ್ಟು ಕಾಗದದ ಚೀಲಗಳನ್ನ ಬಳಸಲು ಪ್ರೋತ್ಸಾಹಿಸುವ ಉದ್ದೇಶದಿಂದ, ಈ ಮಕ್ಕಳು ತಮ್ಮ ನೆರೆಹೊರೆಯವರಿಗೆ ಉಚಿತ ಸ್ಯಾಂಪಲ್‌ಗಳನ್ನ ಸಹ ನೀಡುತ್ತಿದ್ದಾರೆ. ಇದು ಕೇವಲ ಕಾಗದದ ಚೀಲಗಳನ್ನ ಮಾರಾಟ ಮಾಡುವ ವ್ಯಾಪಾರವಲ್ಲ. ಇದೊಂದು ಪ್ಲಾಸ್ಟಿಕ್ ಮುಕ್ತ ಅಭಿಯಾನ.
ಸಮಾಜದಲ್ಲಿದ್ದ ದೊಡ್ಡ ಸಮಸ್ಯೆಯೊಂದನ್ನ ಗುರುತಿಸಿ, ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ಈ ಮಕ್ಕಳು ಯಶಸ್ವಿಯಾಗಿದ್ದಾರೆ. ಉದ್ಯಮಶೀಲತೆ ಎಂದರೆ ಕೇವಲ ಹಣ ಸಂಪಾದಿಸುವುದಲ್ಲ, ಬದಲಾಗಿ ಸೃಜನಶೀಲತೆ, ಟೀಮ್‌ವರ್ಕ್, ಗ್ರಾಹಕರ ಸೇವೆ ಮತ್ತು ಸುಸ್ಥಿರತೆಯ ಪಾಠವನ್ನ ಈ ಎಳೆಯ ವಯಸ್ಸಿನಲ್ಲೇ ಇವರು ಕಲಿಯುತ್ತಿದ್ದಾರೆ.
ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಮತ್ತು ವಿಡಿಯೋ ಗೇಮ್‌ಗಳಿಗೆ ಅಂಟಿಕೊಂಡಿರುವಾಗ, ಇಕೋ ವಾಲಾ ತಂಡದ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಣ್ಣ ವಯಸ್ಸಿನಲ್ಲೇ ಪರಿಸರದ ಮೇಲಿನ ಇವರ ಕಾಳಜಿ, ಮುಂದಿನ ಪೀಳಿಗೆಗೆ ಮಾದರಿಯಾಗಿದೆ.
ಸಮಸ್ಯೆಗಳ ಬಗ್ಗೆ ಕೇವಲ ಮಾತನಾಡದೆ, ಕಾರ್ಯರೂಪಕ್ಕೆ ತಂದ ಇವರ ಮನೋಭಾವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ದೊಡ್ಡ ಬದಲಾವಣೆ ತರಲು ದೊಡ್ಡ ಐಡಿಯಾ, ದೊಡ್ಡ ಬಂಡವಾಳ ಅಥವಾ ದೊಡ್ಡ ತಂಡವೇ ಬೇಕೆಂದಿಲ್ಲ, ಒಂದು ಸಣ್ಣ ಹೆಜ್ಜೆ ಇಟ್ಟರೆ ಸಾಕು ಎಂಬುದನ್ನ ಈ ಮಕ್ಕಳು ಜಗತ್ತಿಗೆ ಸಾರಿದ್ದಾರೆ.


Click it and Unblock the Notifications
