Indira Canteen: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಶೀಘ್ರವೇ ಕಡಿಮೆ ಬೆಲೆಗೆ ತಿಂಡಿ-ಊಟ ಸೌಲಭ್ಯ
ಬೆಂಗಳೂರು, ನವೆಂಬರ್ 17: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಟ್ಯಾಕ್ಸಿ ಚಾಲಕರು, ಮಧ್ಯಮ ವರ್ಗದವರಿಗೆ, ಅಲ್ಲಿನ ಸಿಬ್ಬಂದಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಅದೇನೆಂದರೆ ವಿಮಾನ ನಿಲ್ದಾಣದಲ್ಲಿ ಸಹ ಅತೀ ಕಡಿಮೆ ಬೆಲೆಗೆ ಊಟ-ತಿಂಡಿ ಸೌಲಭ್ಯ ಸಿಗಲಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗಳ ಪೈಕಿ ಇಂದಿರಾ ಕ್ಯಾಂಟೀನ್ ಸಂಖ್ಯೆಗಳನ್ನು ಹೆಚ್ಚಿಸುವುದು ಒಂದಾಗಿದೆ. ಇದೇ ಕಾರಣದಿಂದಲೇ ಹಾಲಿ ಇರುವ 199 ಇಂದಿರಾ ಕ್ಯಾಂಟೀನ್‌ಗಳನ್ನು 250ಕ್ಕೆ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ.

ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ಬೆಂಗಳೂರು ವಿಮಾನ ನಿಲ್ದಾಣದಲ್ಲಿ 02 ಟರ್ಮಿನಲ್ ಗಳಲ್ಲಿ ತಲಾ ಒಂದು ಇಂದಿರಾ ಕ್ಯಾಟೀನ್ ನಿರ್ಮಿಸಲಿದೆ. ನೀವು ಇಲ್ಲಿ ಐದು ರೂಪಾಯಿಗೆ ಉಪಹಾರ ಮತ್ತು ಕೇವಲ ಹತ್ತು ರೂಪಾಯಿಗೆ ಊಟ ಪಡೆಯಬಹುದಾಗಿದೆ.
ಶೀಘ್ರವೇ ಟೆಂಡರ್ ಆಹ್ವಾನ
ಬಿಬಿಎಂಪಿ ವಿಮಾನ ನಿಲ್ದಾಣದ ಆವರಣದಲ್ಲಿ ಎರಡು ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ತಿನಿಸುಗಳ ಕುರಿತ ಟೆಂಡರ್ ಅನ್ನು ಶೀಘ್ರವೇ ಕರೆಯುವ ಸಾಧ್ಯತೆ ಇದೆ. ನಗರದಲ್ಲಿ ಸದ್ಯ 225 ವಾರ್ಡ್‌ಗಳಿದ್ದು, ಬಿಬಿಎಂಪಿ ಪ್ರತಿ ವಾರ್ಡ್‌ಗೆ ಒಂದು ಕ್ಯಾಂಟೀನ್ ಸ್ಥಾಪಿಸಲಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಬಸ್ ನಿಲ್ದಾಣಗಳು ಮತ್ತು ಜನರಲ್ ಆಸ್ಪತ್ರೆಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಇನ್ನೂ 25 ಕ್ಯಾಂಟೀನ್‌ಗಳನ್ನು ಸ್ಥಾಪಿಸಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕ್ಯಾಂಟೀನ್‌ಗಳು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ, ಪೂರೈಸುವುದಲ್ಲದೆ, ಟ್ಯಾಕ್ಸಿ ಮತ್ತು ಬಸ್ ಚಾಲಕರಿಗೆ ಕಡಿಮೆ ಬೆಲೆಯ ಉತ್ತಮ ಆಹಾರ ಪೂರೈಸಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಏರ್‌ಪೋರ್ಟ್‌ನಲ್ಲಿ ದುಬಾರಿ ಆಹಾರ, ಟೀಕೆ
ಬೆಂಗಳೂರು ಏರ್‌ಪೋರ್ಟ್ ಆವರಣದಲ್ಲಿ ದುಬಾರಿ ಬೆಲೆಯ ಆಹಾರ ಪದಾರ್ಥಗಳ ಕುರಿತು ಆಗಾಗ ಟೀಕೆ ವ್ಯಕ್ತವಾಗುತ್ತಲೇ ಇವೆ. ಇದನ್ನು ಗಮನದಲ್ಲಿಟ್ಟುಕೊಂಡು ಜುಲೈನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕ್ಯಾಬ್ ಮತ್ತು ಬಸ್ ಚಾಲಕರು ಮತ್ತು ಸಾರ್ವಜನಿಕರಿಗೆ ಪಾಕೆಟ್ ಸ್ನೇಹಿ ಆಹಾರ ಪೂರೈಕೆ ಮಾಡಲು ಆದ್ಯತೆ ನೀಡಿದ್ದರು. ಈ ಸಂಬಂಧ ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದರು. ಕೆಐಎ ಜೊತೆ ಸಂಪರ್ಕ ಸಾಧಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ನೆರವಿನಿಂದ ಎರಡು ಟರ್ಮಿನಲ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆದಷ್ಟು ಶೀಘ್ರವೇ ತಲೆ ಎತ್ತಲಿವೆ. 199 ಕ್ಯಾಂಟೀನ್‌ಗಳನ್ನು ಸ್ಥಾಪನೆ ಸರ್ಕಾರ ಸೂಚಿಸಿ ಅನುಮೋದಿಸಿತ್ತು. ಅಲ್ಲದೇ ಎಂಟು ಮೊಬೈಲ್ ಕ್ಯಾಂಟೀನ್ ಸೇರಿ 176 ಕ್ಯಾಂಟೀನ್‌ಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ.
ಕೆಲವು ಕ್ಯಾಂಟೀನ್ ನವೀಕರಣ ಕಾರ್ಯ ಪ್ರಗತಿ
ಹೊಸದಾಗಿ 17 ಮೊಬೈಲ್ ಕ್ಯಾಂಟೀನ್‌ಗಳು ನವೀಕರಣ ಮಾಡಲಾಗುತ್ತಿದೆ. ಈ ಕ್ಯಾಂಟೀನ್‌ಗಳ ಸಂಖ್ಯೆಯನ್ನು 250 ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಸದ್ಯ ವಾರ್ಡಗಳನ್ನು 225 ಕ್ಕೆ ಹೆಚ್ಚಿಸುವ ಜೊತೆಗೆ ಪ್ರತಿ ವಾರ್ಡಿಗೆ ಒಂದು ಕ್ಯಾಂಟೀನ್ ಸ್ಥಾಪಿಸುವ ಗುರಿ ಇದೆ. ನಗರದ ಇತರ ಸ್ಥಳಗಳಲ್ಲಿ 25 ಹೆಚ್ಚುವರಿ ಕ್ಯಾಂಟೀನ್‌ಗಳು ಆರಂಭವಾಗಲಿವೆ ಎಂದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.












Click it and Unblock the Notifications