Vande Bharat Express: ಬೆಂಗಳೂರು-ಹೈದರಾಬಾದ್ ರೈಲು, ಈ ನಿಲ್ದಾಣದ ಪ್ರಯಾಣಿಕರಿಗೆ ಗುಡ್ ನ್ಯೂಸ್
ಬೆಂಗಳೂರು: ರಾಜಧಾನಿ ಬೆಂಗಳೂರಿನ ಯಶವಂತಪುರ ಮತ್ತು ಹೈದರಾಬಾದ್'ನ ಕಾಚಿಗುಡ ನಡುವೆ ಆಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20703/20704) ಸಂಚಾರ ಸೇವೆ ನೀಡುತ್ತಿದೆ. ಈ ರೈಲಿನಿಂದ ಸಾವಿರಾರು ಪ್ರಯಾಣಿಕರಿಗೆ ಪ್ರಯೋಜನ ಪಡೆಯುತ್ತಿದ್ದಾರೆ. ಅತ್ಯಾಧುನಿಕ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲು ಇನ್ನು ಮುಂದೆ ಆಂಧ್ರಪ್ರದೇಶದ ಹಿಂದೂಪುರ ನಿಲ್ದಾಣದಲ್ಲಿಯೂ ನಿಲುಗಡೆಯಾಗಲಿದೆ.
ಡಿಸೆಂಬರ್ 27 ರಿಂದ ಹಿಂದೂಪುರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆ ನೀಡಲು ನೈಋತ್ಯ ರೈಲ್ವೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಮೂಲಕ ಹಿಂದೂಪುರ ಜನತೆಯ ಬಹುದಿನಗಳ ಬೇಡಿಕೆ ಈಡೇರಿದಂತಾಗುತ್ತದೆ. ಇದೇ ಶನಿವಾರದಂದು ಜಾರಿಗೆ ಬರುವಂತೆ ಎರಡು ನಿಮಿಷಗಳ ಪ್ರಾಯೋಗಿಕ ನಿಲುಗಡೆಗೆ ಅನುಮೋದನೆ ನೀಡಲಾಗಿದೆ. ಈ ರೈಲಿನ ವೇಳಾಪಟ್ಟಿ ವಿವರ, ಆಗಮನ ಮತ್ತು ನಿರ್ಗಮನ ಮಾಹಿತಿ ಇಲ್ಲಿದೆ.

ಹಿಂದೂಪುರ ನಿಲ್ದಾಣದಲ್ಲಿ ಈ ರೈಲಿನ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿ ನೋಡುವುದಾದರೆ, ಯಶವಂತಪುರದಿಂದ ಬರುವ ಕಾಚೆಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲ (20703) ಹಿಂದೂಪುರಕ್ಕೆ ಮಧ್ಯಾಹ್ನ 12:08 ಗಂಟೆಗೆ ತಲುಪಿ, 12:10 ಗಂಟೆಗೆ ಅಲ್ಲಿಂದ ಪುನಃ ಸಂಚಾರ ಆರಂಭಿಸುತ್ತದೆ. ಮರಳಿ ಅದೇ ಮಾರ್ಗದಲ್ಲಿ ಬರುವ ಯಶವಂತಪುರ-ಕಾಚೆಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20704) ಹಿಂದೂಪುರಕ್ಕೆ ಮಧ್ಯಾಹ್ನ 03:48 ಗಂಟೆಗೆ ಆಗಮಿಸಿ, 03:50 ಗಂಟೆಗೆ ತನ್ನ ಪ್ರಯಾಣ ಮುಂದುವರಿಸುತ್ತದೆ.
ಈ ಹೊಸ ನಿಲುಗಡೆಯು ಹಿಂದೂಪುರ ಭಾಗದ ಪ್ರಯಾಣಿಕರಿಗೆ ವೇಗದ ಮತ್ತು ಸುಸಜ್ಜಿತ ಪ್ರಯಾಣದ ಸೌಲಭ್ಯವನ್ನು ಒದಗಿಸುತ್ತದೆ. ಈ ಭಾಗದ ರೈಲು ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಬೆಂಗಳೂರಿನತ್ತ ಬರುವ ಆ ಭಾಗದ ಜನರಿಗೆ ವೇಗದ ರೈಲು ಸೇವೆ ಸಿಕ್ಕಂತಾಗಿದೆ.
ಬೆಂಗಳೂರು-ಕರಾವಳಿ ಮಾರ್ಗದಲ್ಲಿ ವಂದೇ ಭಾರತ್ ರೈಲು
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್‌ಡಿ ಕುಮಾರಸ್ವಾಮಿ ಅವರು ನೆನ್ನೆ ಮಂಗಳವಾರ ಭಾರತೀಯ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದರು. ಬೆಂಗಳೂರು-ಗೋವಾದ ಮಡಗಾಂವ್ ಮಾರ್ಗದಲ್ಲಿ "ವಂದೇ ಭಾರತ್ ಎಕ್ಸ್ ಪ್ರೆಸ್" ರೈಲು ಸೇವೆ ಆರಂಭಿಸುವಂತೆ ರೈಲ್ವೆ ಸಚಿವರಿಗೆ ಪತ್ರ ಮುಖೇನ ಮನವಿ ಮಾಡಿದರು.
ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಆರಂಭಿಸಿದರೆ ರಾಜಧಾನಿ ಬೆಂಗಳೂರಿನಿಂದ ಹಾಸನ- ಮಂಗಳೂರು ಜಂಕ್ಷನ್- ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್ ವರೆಗೆ ಅತಿವೇಗದ ವಂದೇ ಭಾರತ್ ರೈಲು ಸೇವೆ ಪ್ರಯಾಣಿಕರಿಗೆ ಸಿಕ್ಕಂತಾಗುತ್ತದೆ. ಪ್ರವಾಸೋದ್ಯಮಕ್ಕೆ ಉತ್ತೇಜನವು ದೊರೆಯುತ್ತದೆ. ಕರಾವಳಿ ಭಾಗದ ಜನರಿಗೆ ಉತ್ತಮ ಸಾರಿಗೆ ಸೇವೆ ಲಭ್ಯವಾಗುತ್ತದೆ ಎಂದು ಮಾರ್ಗ ತೆರೆಯುವುದರ ಪ್ರಯೋಜನ ಬಗ್ಗೆ ಸಚಿವರಿಗೆ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಇದಕ್ಕೆ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.












Click it and Unblock the Notifications