Bengaluru Garbage Tender: ಬೆಂಗಳೂರು ನಗರದಲ್ಲಿ ಕಸದಲ್ಲೂ ಕಾಸು; ಲೋಕಾಯುಕ್ತಗೆ ಕೊಟ್ಟಾಯ್ತು ಕೇಸು!
ಬೆಂಗಳೂರು: ನಗರದಲ್ಲಿ ಕಸದಲ್ಲೂ ಕಾಸು ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದ್ದು, ಈ ವಿಚಾರವಾಗಿ ಇದೀಗ ಲೋಕಾಯುಕ್ತಗೆ ದೂರು ನೀಡಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನ ಕಸ ಮತ್ತು ತ್ಯಾಜ್ಯ ವರ್ಗಾವಣೆ ಕೇಂದ್ರಗಳ ₹133 ಕೋಟಿ ಟೆಂಡರ್‌ನಲ್ಲಿ ಗಂಭೀರ ಅಕ್ರಮಗಳ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದೇನೆ. ಟೆಂಡರ್ ಪಡೆದಿರುವ ಸಂಸ್ಥೆಯ ಅರ್ಹತೆ, ನಿಗದಿತ ವಹಿವಾಟಿನ ಮಾನದಂಡಗಳ ಪಾಲನೆ ಹಾಗೂ ಸುಮಾರು ₹12.99 ಕೋಟಿ ಹೆಚ್ಚುವರಿ ಭದ್ರತಾ ಠೇವಣಿ ಪಡೆಯದಿರುವ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಆರ್ಥಿಕ ಇಲಾಖೆಯ ಸೂಚನೆಗಳನ್ನು ನಿರ್ಲಕ್ಷಿಸಿ ಟೆಂಡರ್ ಪ್ರಕ್ರಿಯೆ ಮುಂದುವರಿಸಿರುವುದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನ ಕಸದ ಸಮಸ್ಯೆಯ ಹೆಸರಿನಲ್ಲಿ ಸಾರ್ವಜನಿಕ ಹಣದ ಬಳಕೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡಲಾಗದು. ಟೆಂಡರ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಹಣಕ್ಕೆ ಲೆಕ್ಕ ಕೊಡಲೇಬೇಕು. ಸತ್ಯ ಹೊರಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ. ಆರ್. ಅಶೋಕ್ ಅವರು ಲೋಕಾಯುಕ್ತರಿಗೆ ಬರೆದ ಪತ್ರದಲ್ಲಿ ಏನಿದೆ ಎನ್ನುವ ವಿವರ ಮುಂದಿದೆ.
ಕಸದ ಟೆಂಡರ್‌ನಲ್ಲಿ ಅವ್ಯವಹಾರ ಲೋಕಾಯುಕ್ತಗೆ ದೂರು
ಬೆಂಗಳೂರಿನ ಕಸ ಮತ್ತು ತ್ಯಾಜ್ಯ ವರ್ಗಾವಣೆ ಕೇಂದ್ರಗಳ ಟೆಂಡರ್‌ನಲ್ಲಿ ನಡೆದಿರುವ ಗಂಭೀರ ಅಕ್ರಮಗಳ ಕುರಿತು ಲೋಕಾಯುಕ್ತ ತನಿಖೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳೇ, ಬೆಂಗಳೂರು ನಗರದ ಕಸ ವಿಲೇವಾರಿ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದ ಯೋಜನೆಯಲ್ಲಿಯೇ ಗಂಭೀರ ಅಕ್ರಮಗಳು ನಡೆದಿರುವ ಆರೋಪಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಕಸ ಮತ್ತು ತ್ಯಾಜ್ಯ ವರ್ಗಾವಣೆ ಕೇಂದ್ರಗಳಿಗೆ ಸಂಬಂಧಿಸಿದ ಸುಮಾರು 1133 ಕೋಟಿ ಮೊತ್ತದ ಟೆಂಡರ್‌ಗಳನ್ನು ವಹಿಸಿಕೊಟ್ಟಿರುವ ಪ್ರಕ್ರಿಯೆಯಲ್ಲಿ ಅರ್ಹತಾ ಮಾನದಂಡಗಳ ಉಲ್ಲಂಘನ, ಹೆಚ್ಚುವರಿ ಭದ್ರತಾ ಠೇವಣಿ ಪಡೆಯದಿರುವುದು ಹಾಗೂ ಆರ್ಥಿಕ ಇಲಾಖೆಯ ಸೂಚನೆಗಳನ್ನು ನಿರ್ಲಕ್ಷಿಸಿರುವಂತಹ ಗಂಭೀರ ಲೋಪಗಳು ಕಂಡುಬಂದಿವೆ.
ಈ ಕುರಿತು ನಾನು ಈಗಾಗಲೇ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡ ಮಾಡಿ, ಟೆಂಡರ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಸಾರ್ವಜನಿಕರ ಗಮನ ಸೆಳೆದಿದ್ದೇನೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ ಸ್ವತಂತ್ರ ತನಿಖೆಗೆ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಆರ್. ಅಶೋಕ್ ಹೇಳಿದ್ದಾರೆ.
1. ಟೆಂಡರ್ ಅರ್ಹತಾ ಮಾನದಂಡಗಳ ಉಲ್ಲಂಘನೆ
ಕರ್ನಾಟಕ ಸರ್ಕಾರವು 2018ರಲ್ಲಿ ಇಂತಹ ಟೆಂಡರ್‌ಗಳಿಗೆ ವಾರ್ಷಿಕ 110 ಕೋಟಿ ರೂ. ವಹಿವಾಟು ಸೇರಿದಂತೆ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿದೆ. ಆದರೆ, ಟೆಂಡರ್ ಪಡೆದಿರುವ ಮುನಿಯಪ್ಪ ಎಂಟರ್‌ಪ್ರೈಸಸ್ ಸಂಸ್ಥೆಯು 2023-24ನೇ ಸಾಲಿನಲ್ಲಿ ಕೇವಲ 73.34 ಕೋಟಿ ರೂ. ವಹಿವಾಟು ನಡೆಸಿದ ಎಂಬ ಮಾಹಿತಿ ಲಭ್ಯವಾಗಿದೆ.
ಹಿಂದಿನ ವರ್ಷಗಳಲ್ಲಿಯೂ ಸಂಸ್ಥೆಯ ವಹಿವಾಟು ಇದಕ್ಕಿಂತ ಕಡಿಮೆ ಪ್ರಮಾಣದಲ್ಲಿತ್ತು ಎಂದು ತಿಳಿದುಬಂದಿದೆ. ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸದ ಸಂಸ್ಥೆಗೆ ಸುಮಾರು 133 ಕೋಟಿ ರೂ. ಮೊತ್ತದ ಟೆಂಡರ್ ನೀಡಿರುವುದು ಹೇಗೆ, ಸಂಸ್ಥೆಯ ಅರ್ಹತೆ ಮತ್ತು ಜಿಎಸ್‌ಟಿ ನೋಂದಣಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೂ ಟೆಂಡರ್ ಮಂಜೂರು ಮಾಡಿರುವುದಕ್ಕೆ ಕಾರಣವೇನು, ಈ ಎಲ್ಲ ಅಂಶಗಳನ್ನು ತನಿಖೆ ಮೂಲಕ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
2. 112.99 ಕೋಟಿ ಹೆಚ್ಚುವರಿ ಭದ್ರತಾ ಠೇವಣಿ ಪಡೆಯದಿರುವುದು
ಈ ಟೆಂಡರ್ ಪ್ರಕ್ರಿಯೆಯಲ್ಲಿ ಅತ್ಯಂತ ಗಂಭೀರವಾದ ಅಂಶವೆಂದರೆ, ಹೆಚ್ಚುವರಿ ಭದ್ರತಾ ಠೇವಣಿ ಪಡೆಯದಿರುವುದು. ಪ್ಯಾಕೇಜ್-2ರ ಅಂದಾಜು ವೆಚ್ಚ 55.04 ಕೋಟಿ ರೂ. ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸುಮಾರು 76.79 ಕೋಟಿ ರೂ. ಹೆಚ್ಚುವರಿ ಭದ್ರತಾ ಠೇವಣಿ ಪಡೆಯಬೇಕಿತ್ತು. ಪ್ಯಾಕೇಜ್-5ಕ್ಕೆ ಸಂಬಂಧಿಸಿದಂತೆ ಸುಮಾರು 15.99 ಕೋಟಿ ರೂ. ಠೇವಣಿ ಪಡೆಯಬೇಕಿತ್ತು. ಒಟ್ಟಾರೆಯಾಗಿ ಸುಮಾರು 112.99 ಕೋಟಿ ರೂ. ಹೆಚ್ಚುವರಿ ಭದ್ರತಾ ಠೇವಣಿ ಪಡೆಯದಿರುವ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ಆರ್ಥಿಕ ಇಲಾಖೆಯು ಈ ಸಂಬಂಧ ಎಚ್ಚರಿಕೆ ನೀಡಿದ್ದರೂ, 22-05-2026ರಂದು ಲೆಟರ್ ಆಫ್ ಅವಾರ್ಡ್ (LOA) ನೀಡಲಾಗಿದೆ ಎಂಬ ಮಾಹಿತಿ ಇದೆ. ಆರ್ಥಿಕ ಇಲಾಖೆಯ ಸೂಚನೆಗಳನ್ನು ನಿರ್ಲಕ್ಷಿಸಿ, ಯಾವ ಆಧಾರದ ಮೇಲೆ ಕಾರ್ಯಾದೇಶ ನೀಡಲಾಯಿತು? ಸರ್ಕಾರದ ಹಣಕಾಸಿನ ಹಿತಾಸಕ್ತಿಗೆ ಧಕ್ಕೆಯಾಗುವ ಈ ನಿರ್ಧಾರಕ್ಕೆ ಹೊಣೆಗಾರರು ಯಾರು? ಎಂಬುದನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.
3. ಟೆಂಡರ್ ಪಕ್ರಿಯೆಯ ಪಾರದರ್ಶಕತೆ ಮತ್ತು ಅಧಿಕಾರ ದುರುಪಯೋಗ
ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಇತರ ಸಂಸ್ಥೆಗಳ ಅರ್ಹತೆ, ದರಗಳು ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಹೇಗೆ ಮೌಲ್ಯಮಾಪನ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಅರ್ಹ ಸಂಸ್ಥೆಗಳನ್ನು ಕಡೆಗಣಿಸಿ ನಿರ್ದಿಷ್ಟ ಸಂಸ್ಥೆಗೆ ಅನಗತ್ಯ ಅನುಕೂಲ ಕಲ್ಪಿಸಲಾಗಿದೆಯೇ ಎಂಬುದನ್ನು ತನಿಖೆ ಮಾಡಬೇಕು.
ಇದಲ್ಲದೆ, ಒಟ್ಟು 21 ಪ್ಯಾಕೇಜ್‌ಗಳ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವ ಮೊದಲು ತ್ಯಾಜ್ಯ ವರ್ಗಾವಣೆ ಕೇಂದ್ರಗಳಿಗಾಗಿ ಅಗತ್ಯ ಸ್ಥಳಗಳನ್ನು ಗುರುತಿಸಲಾಗಿತ್ತೇ, ಅಗತ್ಯ ಅನುಮತಿಗಳನ್ನು ಪಡೆಯಲಾಗಿತ್ತೇ ಮತ್ತು ಯೋಜನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲಾಗಿತ್ತೇ ಎಂಬುದನ್ನೂ ತನಿಖೆಗೆ ಒಳಪಡಿಸಬೇಕು.
ಈ ಪ್ರಕರಣದಲ್ಲಿ ಯಾವುದೇ ಸಚಿವರು, ಹಿರಿಯ ಅಧಿಕಾರಿಗಳು ಅಥವಾ ಇತರ ವ್ಯಕ್ತಿಗಳ ಪಾತ್ರವಿದ್ದರೆ, ಅವರ ಹುದ್ದೆ ಅಥವಾ ಪ್ರಭಾವವನ್ನು ಪರಿಗಣಿಸದ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಬಾಹಿರವಾಗಿ ಅನುಕೂಲ ಕಲ್ಪಿಸಲಾಗಿದೆಯೇ ಅಥವಾ ಅಕ್ರಮ ಹಣಕಾಸು ವ್ಯವಹಾರ ನಡೆದಿದೆಯೇ ಎಂಬುದನ್ನು ದಾಖಲೆಗಳ ಆಧಾರದ ಮೇಲೆ ಪತ್ತೆಹಚ್ಚಬೇಕು.
ಈ ಹಿನ್ನೆಲೆಯಲ್ಲಿ, ತಮ್ಮಲ್ಲಿ ಕೆಳಕಂಡ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ: ಸುಮಾರು 7133 ಕೋಟಿ ರೂ. ಮೊತ್ತದ ಕಸ ಮತ್ತು ತ್ಯಾಜ್ಯ ವರ್ಗಾವಣೆ ಕೇಂದ್ರಗಳ ಟೆಂಡರ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.


Click it and Unblock the Notifications
