ತಿಂಗಳಿಗೆ ಬರೋಬ್ಬರಿ 15 ಲಕ್ಷ ರೂ. ಷೇರುಮಾರುಕಟ್ಟೆ ಹೂಡಿಕೆ ಮಾಡುತ್ತಿರುವ ಬೆಂಗಳೂರು ಟೆಕ್ಕಿ: Viral Post ಅಸಲಿಯತ್ತೇನು?
ಬೆಂಗಳೂರು: ಸ್ಟಾರ್ಟ್ಅಪ್ ಸಂಸ್ಥಾಪಕರೊಬ್ಬರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಡಿದ ಪೋಸ್ಟ್ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಾವು ಪ್ರತಿ ತಿಂಗಳು ಷೇರುಮಾರುಕಟ್ಟೆಯಲ್ಲಿ 5 ರಿಂದ 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡುವುದಾಗಿ 'ಇಂಡಸ್‌ಬಿಟ್' (Indusbit) ಸಂಸ್ಥೆಯ ಸಂಸ್ಥಾಪಕ ಶೋಭಿತ್ ಬಕ್ಲಿವಾಲ್ ಹೇಳಿಕೊಂಡಿದ್ದರು. ಅವರ ಈ ಪೋಸ್ಟ್ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದ್ದು, ಕೊನೆಗೆ ತಮ್ಮ ಆದಾಯದ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಹೂಡಿಕೆಯ ಹಿಂದಿನ ಅಸಲಿಯತ್ತು
ಶೋಭಿತ್ ಅವರು ತಮ್ಮ ಪೋಸ್ಟ್‌ನಲ್ಲಿ ತಲೆಮಾರುಗಳ ನಡುವಿನ ಆಲೋಚನಾ ಕ್ರಮದ ವ್ಯತ್ಯಾಸವನ್ನು ಎತ್ತಿತೋರಿಸಿದ್ದರು. "ನಾನು ಪ್ರತಿ ತಿಂಗಳು ಷೇರುಮಾರುಕಟ್ಟೆಯಲ್ಲಿ 5 ರಿಂದ 15 ಲಕ್ಷ ರೂಪಾಯಿ ಹೂಡಿಕೆ ಮಾಡುತ್ತೇನೆ, ಆಗ ಯಾರೊಬ್ಬರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ನಾನು 7 ಲಕ್ಷ ರೂಪಾಯಿ ಕೊಟ್ಟು ಹೊಸ ಕಾರು ಖರೀದಿಸಿದಾಗ, ನನ್ನ ತಾಯಿ ಆ ಕಾರಿಗೆ ಪೂಜೆ ಮಾಡಿಸಿ, ಕುಟುಂಬದವರಿಗೆಲ್ಲಾ ಸಿಹಿ ಹಂಚಿ, ಫೋಟೋಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು" ಎಂದು ಬರೆದುಕೊಂಡಿದ್ದರು.

ದೀರ್ಘಕಾಲೀನ ಹೂಡಿಕೆಯು ಭವಿಷ್ಯಕ್ಕೆ ಹೆಚ್ಚು ಲಾಭದಾಯಕವಾಗಿದ್ದರೂ, ಅದು ತಾಯಿಯಲ್ಲಿ ಯಾವುದೇ ಭಾವನಾತ್ಮಕ ಪ್ರತಿಕ್ರಿಯೆಯನ್ನು ಮೂಡಿಸಲಿಲ್ಲ ಎಂಬುದನ್ನು ಹೇಳುವುದು ಶೋಭಿತ್ ಅವರ ಪ್ರಮುಖ ಉದ್ದೇಶವಾಗಿತ್ತು. ಆದರೆ, ನೆಟ್ಟಿಗರು ಗಮನಹರಿಸಿದ್ದು ಮಾತ್ರ ಅವರು ಪ್ರತಿ ತಿಂಗಳು ಹೂಡಿಕೆ ಮಾಡುತ್ತಿದ್ದ '15 ಲಕ್ಷ ರೂ.' ಮೊತ್ತದ ಮೇಲೆ!
ವೈರಲ್ ಆದ ಪೋಸ್ಟ್ ಮತ್ತು ಟೆಕ್ಕಿಯ ಸ್ಪಷ್ಟನೆ
ಈ ಪೋಸ್ಟ್ ಅನ್ನು ಉಲ್ಲೇಖಿಸಿದ ಉದ್ಯಮಿ ರವಿ ಹಂಡಾ, "ಬೆಂಗಳೂರಿನ ಟೆಕ್ಕಿಯೊಬ್ಬ ತಿಂಗಳಿಗೆ 15 ಲಕ್ಷ ಉಳಿತಾಯ ಮಾಡುತ್ತಾನೆ. ಹೌದು ತಿಂಗಳಿಗೆ! ಆದರೂ ಎಐಯಿಂದ ಉದ್ಯೋಗ ಕಡಿತವಾಗುತ್ತಿದೆ ಎಂದು ನೀವು ಹೇಳುತ್ತೀರಿ" ಎಂದು ವ್ಯಂಗ್ಯವಾಡಿದ್ದರು. ಈ ಚರ್ಚೆ ಮಿತಿಮೀರುತ್ತಿದ್ದಂತೆ ಎಚ್ಚೆತ್ತ ಶೋಭಿತ್ ತಕ್ಷಣವೇ ಸ್ಪಷ್ಟನೆ ನೀಡಿದ್ದಾರೆ. "ನನಗೆ ಅಷ್ಟೊಂದು ಆದಾಯವಿಲ್ಲ. ನನ್ನ ಬಳಿ ಹೆಚ್ಚಿನ ಮೊತ್ತದ ಡೆಟ್ ಫಂಡ್‌ಗಳಿದ್ದವು (Debt funds), ಅವುಗಳನ್ನು ಇದೀಗ ನಾನು ಈಕ್ವಿಟಿಗಳನ್ನು ಖರೀದಿಸಲು ಬದಲಾಯಿಸುತ್ತಿದ್ದೇನೆ ಅಷ್ಟೇ" ಎಂದು ತಿಳಿಸಿದ್ದಾರೆ. ಯಾವ ರೀತಿಯ ಡೆಟ್ ಫಂಡ್ ಹೊಂದಿದ್ದೀರಿ ಎಂಬ ಪ್ರಶ್ನೆಗೆ ಅವರು, ದ್ರವ ನಿಧಿಗಳು ಅಥವಾ 'ಲಿಕ್ವಿಡ್ ಫಂಡ್ಸ್' (Liquid funds) ಎಂದು ಉತ್ತರಿಸಿದ್ದಾರೆ.
I buy 5-15L worth of equities a month. Mom is not interested.
— Shobhit Bakliwal (@shobhitic) April 26, 2026
I buy a car worth 7L. Mom wants me to do a pooja, host a feast, call relatives into the city, dress up and click photos 😅
ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆಗಳು
ಈ ಪೋಸ್ಟ್‌ಗೆ ನೆಟ್ಟಿಗರಿಂದ ಬಗೆಬಗೆಯ ಕಾಮೆಂಟ್‌ಗಳು ಬಂದಿವೆ. "ಇದು ಹಣದ ವಿಚಾರಕ್ಕಿಂತ ಮೌಲ್ಯಗಳಿಗೆ ಸಂಬಂಧಿಸಿದ್ದು. ನೀವು ಸೈಲೆಂಟ್ ಆಗಿ ಸಂಪತ್ತು ಗಳಿಸುತ್ತಿದ್ದೀರಿ, ಆದರೆ ನಿಮ್ಮ ತಾಯಿ ಜೀವನವನ್ನು ಸಂಭ್ರಮಿಸುತ್ತಿದ್ದಾರೆ" ಎಂದು ಓರ್ವ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಚಿನ್ನ ಖರೀದಿಸಿ ನೋಡಿ, ನಿಮ್ಮ ತಾಯಿ ಖಂಡಿತಾ ಖುಷಿ ಪಡುತ್ತಾರೆ" ಎಂದು ಸಲಹೆ ನೀಡಿದ್ದಾರೆ. "ನೀವು ಯಾರನ್ನಾದರೂ 'ಬಾ ನನ್ನ ಇಂಡೆಕ್ಸ್ ಫಂಡ್‌ನಲ್ಲಿ ಕೂತುಕೋ' ಎಂದು ಕರೆಯಲು ಸಾಧ್ಯವಿಲ್ಲವಲ್ಲ" ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
ಒಟ್ಟಿನಲ್ಲಿ, ಸಿಲಿಕಾನ್ ಸಿಟಿಯ ಯುವ ಉದ್ಯಮಿಯೊಬ್ಬರ ಈ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿರುವುದಂತೂ ಸುಳ್ಳಲ್ಲ.












Click it and Unblock the Notifications