ಬೆಂಗಳೂರು: 60 ಸ್ಟಾರ್ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಿಢೀರ್ ದಾಳಿ; ಕೊಳೆತ ತರಕಾರಿ, ಅವಧಿ ಮೀರಿದ ಮಾಂಸ ಪತ್ತೆ!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ ನೋಡಿ. ಹೌದು, ನಗರದ ಪ್ರತಿಷ್ಠಿತ ಫೈವ್‌ಸ್ಟಾರ್ ಹಾಗೂ ತ್ರೀಸ್ಟಾರ್ ಹೋಟೆಲ್‌ಗಳಲ್ಲಿ ಗುಣಮಟ್ಟವಿಲ್ಲದ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಶುಕ್ರವಾರ ನಗರದ 60 ಪ್ರಮುಖ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ನೂರಾರು ಕಿಲೋ ಗ್ರಾಂನಷ್ಟು ಹಳಸಿದ ಮಾಂಸ, ಕೊಳೆತ ತರಕಾರಿ ಹಾಗೂ ಪಾನೀಯಗಳನ್ನ ಜಪ್ತಿ ಮಾಡಿದ್ದಾರೆ.

ನಗರದ ಸ್ಟಾರ್ ಹೋಟೆಲ್‌ಗಳಲ್ಲಿ ಪೂರೈಕೆಯಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಇಲಾಖೆ, ಒಟ್ಟು 30 ವಿಶೇಷ ಅಧಿಕಾರಿಗಳ ತಂಡವನ್ನ ರಚಿಸಿ ಕಾರ್ಯಾಚರಣೆ ನಡೆಸಿದೆ. ವಸಂತನಗರ, ಅರಮನೆ ರಸ್ತೆ, ಕುಮಾರಕೃಪಾ ರಸ್ತೆ, ಯಶವಂತಪುರ, ವೈಟ್‌ಫೀಲ್ಡ್, ಇಂದಿರಾನಗರ ಹಾಗೂ ಕೋರಮಂಗಲ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿರುವ ಐಷಾರಾಮಿ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ಬೆಳಗ್ಗೆಯಿಂದ ಸಂಜೆವರೆಗೆ ನಿರಂತರ ತಪಾಸಣೆ ನಡೆಸಲಾಗಿದೆ.

Bengaluru

35 ಬಗೆಯ ಆಹಾರ ಮಾದರಿಗಳ ಸಂಗ್ರಹ

ಭಾರತೀಯ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಪ್ರಾಧಿಕಾರದ (FSSAI) ನಿಯಮಗಳ ಪ್ರಕಾರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಅನುಮಾನಾಸ್ಪದವಾಗಿದ್ದ ಒಟ್ಟು 35 ಆಹಾರ ಪದಾರ್ಥಗಳ ಮಾದರಿಗಳನ್ನ ಸಂಗ್ರಹಿಸಿ ಹೆಚ್ಚಿನ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕೋಳಿ ಮಾಂಸ, ಕುರಿ-ಮೇಕೆ ಮಾಂಸ, ಮೀನು, ಚಹಾ ಪುಡಿ, ಅಡುಗೆ ಎಣ್ಣೆ, ಅರಿಶಿನ ಹಾಗೂ ಮೆಣಸಿನ ಪುಡಿ, ಟೊಮೆಟೊ ಸಾಸ್, ಚೀಸ್, ನಿಂಬೆ ರಸ, ಹಾಲು, ಶುಂಠಿ ಮತ್ತು ಮಸಾಲೆ ಪದಾರ್ಥಗಳ ಮಾದರಿಗಳನ್ನ ವಶಕ್ಕೆ ಪಡೆಯಲಾಗಿದೆ.

ಪ್ರಯೋಗಾಲಯದ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ಹೋಟೆಲ್‌ಗಳಿಗೆ ನೋಟಿಸ್ ಜಾರಿ

ತಪಾಸಣೆ ವೇಳೆ ಹಲವು ಹೋಟೆಲ್‌ಗಳಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿತ್ತು. ಲೇಬಲ್ ಇಲ್ಲದ ಹಾಗೂ ಬ್ರ್ಯಾಂಡ್ ವಿವರಗಳಿಲ್ಲದ ಉತ್ಪನ್ನಗಳ ಬಳಕೆ, ಅವಧಿ ಮೀರಿದ ಆಹಾರ ಪದಾರ್ಥಗಳ ದಾಸ್ತಾನು, ಫಂಗಸ್ ಬೆಳೆದಿದ್ದ ತರಕಾರಿಗಳ ಬಳಕೆ ಪತ್ತೆಯಾಗಿದೆ. ಜೊತೆಗೆ ಮಾಂಸ ಮತ್ತು ಮೀನುಗಳನ್ನ ಸಮರ್ಪಕವಾಗಿ ಪ್ರತ್ಯೇಕಿಸದೆ ಸರಿಯಾಗಿ ಶೇಖರಣೆ ಮಾಡಿರದೇ ಇರುವುದು ಕಂಡುಬಂದಿದೆ. ಈ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದ್ದು, ನ್ಯಾಯ ನಿರ್ಣಾಯಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಶಿಫಾರಸು ಮಾಡಲಾಗಿದೆ.

ಅಧಿಕಾರಿಗಳ ಸ್ಪಷ್ಟನೆ

ಈ ಭರ್ಜರಿ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ ಆಹಾರ ಸುರಕ್ಷತಾ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್, "ಹೋಟೆಲ್‌ಗಳ ಅಡುಗೆ ಕೋಣೆ, ದಾಸ್ತಾನು ಕೊಠಡಿ ಮತ್ತು ಶುಚಿತ್ವವನ್ನು ಪರಿಶೀಲಿಸಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಇಂದು ಅಂದರೆ ಶನಿವಾರವೂ ಕೂಡ ಹೋಟೆಲ್‌ಗಳ ಸೆಂಟ್ರಲೈಸ್ಡ್ ಕಿಚನ್‌ಗಳಲ್ಲಿ ತಪಾಸಣೆ ಮುಂದುವರಿಯಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, "ಮೇಲ್ನೋಟಕ್ಕೆ ಕೆಲವು ಹೋಟೆಲ್‌ಗಳಲ್ಲಿ ಅವಧಿ ಮೀರಿದ ಹಾಲು ಮತ್ತು ಕೊಳೆತ ತರಕಾರಿಗಳು ಪತ್ತೆಯಾಗಿದ್ದು, ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ. ವಿಶೇಷವೆಂದರೆ, ಕೆಲವು ಹೋಟೆಲ್‌ಗಳಲ್ಲಿ ಡೆನ್ಮಾರ್ಕ್ ಮೂಲದ ಮಾಂಸ ಪತ್ತೆಯಾಗಿದೆ. ಸ್ಥಳೀಯವಾಗಿಯೇ ಉತ್ತಮ ಮಾಂಸ ಲಭ್ಯವಿರುವಾಗ ವಿದೇಶದಿಂದ ತರಿಸಿರುವ ಉದ್ದೇಶವೇನು? ಅದರ ಸಾಗಾಟ, ಬೆಲೆ ಹಾಗೂ ಗುಣಮಟ್ಟದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+