ಬೆಂಗಳೂರು: 'ರಾತ್ರಿ ಬೆಚ್ಚಗಿನ' ವಾತಾವರಣಕ್ಕೆ ಜನ ಹೈರಾಣು: ಕನಿಷ್ಠ ತಾಪಮಾನದಲ್ಲೂ ಭಾರಿ ಏರಿಕೆ, ವಿವರ
ಬೆಂಗಳೂರು, ಏಪ್ರಿಲ್ 04: ರಾಜಧಾನಿ ಬೆಂಗಳೂರು ಅಭೂತಪೂರ್ವ ತಾಪಮಾನದ ಝಳಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಬಿಸಲಿಗೆ ಜನರ ಬೆವರು ಬಸಿಯುತ್ತಿದೆ. ಹಗಲಿನಲ್ಲಿ ತೀವ್ರ ತಾಪಮಾನಕ್ಕೆ ತುತ್ತಾದರೆ, ರಾತ್ರಿಯಿಡಿ ಸೆಕೆಗೆ ಜನರು ಹೈರಾಣಾಗಿದ್ದಾರೆ.
ಬೆಂಗಳೂರಲ್ಲಿ ಗರಿಷ್ಠ ತಾಪಮಾನ ಪ್ರಮಾಣ ಏರುತ್ತಲೆ ಇದೆ. ಇಲ್ಲಿ ಹಗಲು ಹೆಚ್ಚು ಬಿಸಿಲು ಕಂಡು ಬಂದರೆ ರಾತ್ರಿ ಸೃಷ್ಟಿಯಾಗುತ್ತಿರುವ ಝಳಕ್ಕೆ ಬೆಂಗಳೂರಿಗರು ಸುಸ್ತಾಗಿದ್ದಾರೆ. 'ಎಸಿ' ಇಲ್ಲದ ಮನೆಗಳಲ್ಲಿ ಜನರ ಸ್ಥಿತಿ ಹೇಳತೀರದಂತಾಗಿದೆ.

ನಗರದಲ್ಲಿ ಕಳೆದ ಕೆಲವು ದಿನಗಳಲ್ಲಂತೂ ಕನಿಷ್ಠ ತಾಪಮಾನವು ಹೊಸ ಗರಿಷ್ಠ ಮಟ್ಟವನ್ನು ಮುಟ್ಟುತ್ತಿದೆ ಎಂಬುದನ್ನು ಐಎಂಡಿ ತಿಳಿಸಿದೆ.
ಕನಿಷ್ಠ ತಾಪಮಾನ 24.5 °C ಗೆ ಹೆಚ್ಚಳ
ಹವಾಮಾನ ಇಲಾಖೆ ವರದಿ ಪ್ರಕಾರ, ಕಳೆದ ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ದಶಕಗಳ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದರಿಂದ ಇಲ್ಲಿನ ರಾತ್ರಿಗಳು ತಂಪಾಗಿರದೇ ಬೆಚ್ಚಗಿನ ಕಾವು ನೀಡುತ್ತಿವೆ. ಇದು ಸಹ ನಗರವಾಸಿಗಳಿಗೆ ಕಿರಿ ಕಿರಿ ನೀಡುತ್ತಿದೆ. ಏಕೆಂದರೆ ಕನಿಷ್ಠ ತಾಪಮಾನ 24.5 °C ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಹೀಗಾಗಿ ಸಂಜೆ ನಂತರ ಇಲ್ಲವೇ ರಾತ್ರಿ ವಾತಾವರಣದಲ್ಲಿ ತಂಪು, ತೇವ ಗಾಳಿ ಬೀಸುವಿಕೆ ಇಳಿಕೆ ಆಗಿದೆ.
ಬೆಂಗಳೂರಿನಲ್ಲಿ ವಾತಾರಣವೇ ಕೂಲ್ ಆಗಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಸಾಮಾನ್ಯವಾಗಿ ರಾತ್ರಿಗಳು ತಂಪಾಗಿರುತ್ತಿದ್ದವು. ಇದು ಹಗಲಿನಲ್ಲಿ ಹೆಚ್ಚು ತಾಪಮಾನದಿಂದ ಸುಸ್ತಾದವರಿಗೆ ಒಂದು ರಿಲೀಪ್ ನೀಡುತ್ತಿದ್ದವು. ಆದರೆ ಇಂದು ವಾತಾವರಣ ಬದಲಾಗಿದೆ. ರಾತ್ರಿ ತಂಪು ಇಲ್ಲದಾಗಿದೆ. ಈ ಬೆಚ್ಚಗಿನ ಪ್ರವೃತ್ತಿಯ ಬಗ್ಗೆ ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ರಾತ್ರಿ ಬೆಚ್ಚಗಿನ ವಾತಾವರಣ ಸೃಷ್ಟಿ: ಕಿರಿ ಕಿರಿ
ಬೆಂಗಳೂರಿನಲ್ಲಿ ಮಾರ್ಚ್ ತಿಂಗಳಲ್ಲಿ ಒಂದು ಹನಿ ಮಳೆ ಆಗಿಲ್ಲ. ಹಗದು ವಿಪರೀತ ಬಿಸಿಲು ಬೀಳುತ್ತಿದೆ. ಇದೀಗ ರಾತ್ರಿಯ ಕನಿಷ್ಠ ತಾಪಮಾನದಲ್ಲಿ ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿದ್ದನ್ನು ಐಎಂಡಿ ವೀಕ್ಷಣಾಲಯವು ಖಚಿತಪಡಿಸಿದೆ.
ಕನಿಷ್ಠ ಉಷ್ಣಾಂಶವು ವಾಡಿಕೆಗಿಂತಲೂ 3 ರಿಂದ 4 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ದಾಖಲಾಗುತ್ತಿದೆ.

ನಗರದಲ್ಲಿ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಕನಿಷ್ಠ ತಾಪಮಾನ 21-22 ಡಿಗ್ರಿ ಸೆಲ್ಸಿಯಸ್ ಇರಬೇಕಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಬದಲಾದ ವಾತಾವರಣದಲ್ಲಿ ಕಳೆದ ಸೋಮವಾರ ರಾತ್ರಿ 24.5 ಡಿಗ್ರಿ ಸೆಲ್ಸಿಯಸ್ ಸಾರ್ವಕಾಲಿಕ ದಾಖಲೆಯಷ್ಟು ಬಿಸಿ ದಾಖಲಾಗಿದೆ. ಅದೇ ರೀತಿ ಮಂಗಳವಾರ ರಾತ್ರಿ 24 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.
ಸದ್ಯ ವಿಶಾಲ ಆಕಾಶ ಇದೆ. ಮೋಡಗಳು ಇದ್ದರೆ ಅವುಗಳು ಭೂಮಿ ಮತ್ತು ಕಾಂಕ್ರೀಟ್ ಕಟ್ಟಡಗಳಿಂದ ಹೊರಸೂಸುವ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ. ಹಗಲು ಹೊತ್ತು ಬೆಚ್ಚಗಿನ ವಾತಾವರಣ ಕಂಡು ಬಂದರೆ, ರಾತ್ರಿ ವೇಳೆ ಪರಿಸ್ಥಿತಿ ತಂಪಾಗಿರುವಂತೆ ಮಾಡುತ್ತವೆ. ಸದ್ಯ ಮೋಡಗಳು ಇಲ್ಲದ ಕಾರಣ ರಾತ್ರಿಯು ಬೆಚ್ಚಗಿನ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಕೆಲಸ ಕಾರ್ಯ, ಇನ್ನಿತರ ಕಾರಣದಿಂದ ಹಗಲು ಹೊರಗೆ ಓಡಾಡುವ ಜನರಿಗೆ ರಾತ್ರಿ ತಂಪಾಗಿದ್ದರೆ ದೇಹ ತಂಪಾಗಿಸಲು ಸಹಾಯ ಮಾಡುತ್ತದೆ. ಒಳ್ಳೆಯ ನಿದ್ರೆಯಾಗುತ್ತದೆ. ಮರುದಿನ ಲವಲವಿಕೆಯಿಂದ ಮತ್ತೆ ಕೆಲಸ ಕಾರ್ಯಗಳಿಗೆ ಮನುಷ್ಯ ಅಣಿಯಾಗುತ್ತಾರೆ. ಆದರೆ ಇಂದು ಕಂಡು ಬರುತ್ತಿರುವ ಬೆಚ್ಚಗಿನ ರಾತ್ರಿಗಳು ಕಷ್ಟಕರವಾದ ಅನುಭವ ನೀಡುತ್ತಿವೆ. ಹೀಗಾಗಿ ಎಸಿ, ಕೂಲರ್, ಫ್ಯಾನ್‌ಗಳು ಅತ್ಯವಶ್ಯಕ ಎನ್ನುವಂತಾಗಿದೆ. ಇವೆಲ್ಲ ಇದ್ದರೂ ಈ ಕೃತಕ ತಂಪು ಸಹ ಅಷ್ಟಾಗಿ ದೇಹಕ್ಕೆ ಸರಿ ಹೊಂದುವುದಿಲ್ಲ. ಇದು ಸಹ ನಗರವಾಸಿಗಳಿಗೆ ತೊಂದರೆ ಉಂಟು ಮಾಡುತ್ತಿದೆ ಎನ್ನಲಾಗಿದೆ.












Click it and Unblock the Notifications