BMTC ಬಸ್‌ನಲ್ಲಿ ಪರ್ಸ್ ಕಳೆದುಕೊಂಡಿದ್ದ ವಿದ್ಯಾರ್ಥಿಗೆ ಕಾದಿತ್ತು ಅಚ್ಚರಿ: ನಿರ್ವಾಹಕನ ಪ್ರಾಮಾಣಿಕತೆಗೆ ನೆಟ್ಟಿಗರ ಸಲಾಂ

ಬೆಂಗಳೂರು: ಬೆಂಗಳೂರಿನಂತಹ ಮಹಾನಗರಗಳಲ್ಲಿ ಮೊಬೈಲ್‌, ಪರ್ಸ್‌, ಹೀಗೆ ಇನ್ನಿತರ ವಸ್ತುಗಳನ್ನ ಕಳೆದುಕೊಳ್ಳುವುದು, ಕಳವಾಗುವುದು ಸಾಮಾನ್ಯ. ಆದರೆ, ಕಳೆದುಹೋದ ಈ ವಸ್ತುಗಳನ್ನಾ ಮರಳಿ ಸಿಗುವುದು ಮಾತ್ರ ತುಂಬ ಕಡಿಮೆ. ಆದರೆ ಬಿಎಂಟಿಸಿ ಬಸ್‌ನಲ್ಲಿ ಪರ್ಸ್ ಕಳೆದುಕೊಂಡಿದ್ದ ಕಾಲೇಜು ವಿದ್ಯಾರ್ಥಿಯೊಬ್ಬರಿಗೆ ನಿರ್ವಾಹಕರೊಬ್ಬರು ಅದನ್ನ ಸುರಕ್ಷಿತವಾಗಿ ಹಿಂದಿರುಗಿಸಿದ ಅಪರೂಪದ ಘಟನೆಯೊಂದು ಸಿಲಿಕಾನ್‌ ಸಿಟಿ ಬೆಂಗಳುರಲ್ಲಿ ನಡೆದಿದೆ.

ಈ ಕುರಿತು ವಿದ್ಯಾರ್ಥಿ ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ. ನಿರ್ವಾಹಕನ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

Bengaluru

ಉಲ್ಲಾಳ ಸ್ಯಾಟಲೈಟ್ ಟೌನ್ ಡಿಪೋ ಬಸ್‌ನಲ್ಲಿ ನಡೆದ ಘಟನೆ

ಕಾಲೇಜು ವಿದ್ಯಾರ್ಥಿಯೊಬ್ಬರು ಉಲ್ಲಾಳ ಸ್ಯಾಟಲೈಟ್ ಟೌನ್ ಡಿಪೋಗೆ ತೆರಳುವ 234A ಮಾರ್ಗದ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕವಾಗಿ ತಮ್ಮ ಪರ್ಸ್ ಕಳೆದುಕೊಂಡಿದ್ದರು. ಮರುದಿನ ಬೆಳಗ್ಗೆನೇ ತಮ್ಮ ಪರ್ಸ್ ನಾಪತ್ತೆಯಾಗಿರುವ ವಿಚಾರ ಅವರಿಗೆ ತಿಳಿದಿದೆ. "ನಾನೊಬ್ಬ ಕಾಲೇಜು ವಿದ್ಯಾರ್ಥಿ. ಆ ಪರ್ಸ್‌ನಲ್ಲಿ ನನ್ನ ಬಸ್ ಪಾಸ್, ಮೆಟ್ರೋ ಕಾರ್ಡ್ ಹಾಗೂ ಸ್ವಲ್ಪ ಹಣ ಮಾತ್ರ ಇತ್ತು," ಎಂದು ವಿದ್ಯಾರ್ಥಿ ಬರೆದುಕೊಂಡಿದ್ದಾರೆ. ಕಳೆದುಹೋದ ಪರ್ಸ್ ಹುಡುಕಬೇಕೆಂದು ಅದೇ ದಿನ ಮಧ್ಯಾಹ್ನ ಡಿಪೋಗೆ ಭೇಟಿ ನೀಡಿದ ಅವರು, ಯಾರಾದರೂ ಪರ್ಸ್ ತಂದುಕೊಟ್ಟಿದ್ದಾರೆಯೇ ಎಂದು ಅಲ್ಲಿನ ಟೈಮ್‌ಕೀಪರ್ ಕಚೇರಿಯಲ್ಲಿ ವಿಚಾರಿಸಿದ್ದಾರೆ.

ಪ್ರಾಮಾಣಿಕ ಬಿಎಂಟಿಸಿ ನಿರ್ವಾಹಕನ ಕಾರ್ಯಕ್ಕೆ ಮೆಚ್ಚುಗೆ

ವಿದ್ಯಾರ್ಥಿ ಕಚೇರಿಯಲ್ಲಿ ವಿಚಾರಿಸುತ್ತಿದ್ದಾಗ, ಅಚ್ಚರಿ ಎಂಬಂತೆ ಅಲ್ಲಿದ್ದ ಬಸ್ ನಿರ್ವಾಹಕರೊಬ್ಬರು ವಿದ್ಯಾರ್ಥಿಯ ಮುಖವನ್ನ ಗುರುತಿಸಿ, ಅವರ ಹೆಸರಿಡಿದು ಕರೆದಿದ್ದಾರೆ. ಆ ಪರ್ಸ್ ನಿರ್ವಾಹಕರಿಗೆ ಸಿಕ್ಕಿದ್ದು, ಅದನ್ನು ಅವರು ತಮ್ಮ ಬಳಿಯೇ ಸುರಕ್ಷಿತವಾಗಿ ಇಟ್ಟುಕೊಂಡಿದ್ದರು. "ನಿಮ್ಮನ್ನು ಸಂಪರ್ಕಿಸಲು ನನ್ನ ಬಳಿ ಯಾವುದೇ ಮಾಹಿತಿ ಇರಲಿಲ್ಲ. ಒಂದು ವೇಳೆ ನೀವು ಬಾರದೇ ಇದ್ದಿದ್ದರೆ, ಮರುದಿನ ಮುಖ್ಯ ಡಿಪೋದಲ್ಲಿ ನಿಮ್ಮ ಸಂಪರ್ಕ ವಿವರಗಳನ್ನ ಹುಡುಕಲು ಅಥವಾ ನಿಮ್ಮ ಬಸ್ ಪಾಸ್ ಆಧಾರದ ಮೇಲೆ ನಿಮ್ಮ ಕಾಲೇಜಿಗೆ ಭೇಟಿ ನೀಡಿ ಪರ್ಸ್ ಒಪ್ಪಿಸಲು ನಿರ್ಧರಿಸಿದ್ದೆ" ಎಂದು ಆ ಬಿಎಂಟಿಸಿ ನಿರ್ವಾಹಕ ತಿಳಿಸಿದ್ದಾರೆ. ಈ ಮಾತು ಕೇಳಿ ವಿದ್ಯಾರ್ಥಿ ಭಾವುಕರಾಗಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಈ ಘಟನೆಯನ್ನ ವಿದ್ಯಾರ್ಥಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಸಹ ಪ್ರಯಾಣಿಕರಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. "ನೀವು ಎಂದಾದರೂ ಬಿಎಂಟಿಸಿ ಬಸ್‌ನಲ್ಲಿ ಏನನ್ನಾದರೂ ಕಳೆದುಕೊಂಡರೆ, ಆ ಮಾರ್ಗದ ಮುಖ್ಯ ಡಿಪೋದಲ್ಲಿರುವ ಟೈಮ್‌ಕೀಪರ್ ಅಥವಾ ಸ್ಟೇಷನ್ ಮಾಸ್ಟರ್ ಅವರನ್ನ ಭೇಟಿಯಾಗಿ. ಬಿಎಂಟಿಸಿ ಸಿಬ್ಬಂದಿ ಮತ್ತು ನಿರ್ವಾಹಕರು ನಿಜಕ್ಕೂ ತುಂಬಾ ಸಹಕಾರಿಯಾಗಿದ್ದಾರೆ" ಎಂದು ಅವರು ಬರೆದಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅನೇಕ ನೆಟ್ಟಿಗರು ಬಿಎಂಟಿಸಿ ಸಿಬ್ಬಂದಿಯ ಈ ಗುಣವನ್ನ ಕೊಂಡಾಡಿದ್ದಾರೆ. "ಆ ನಿರ್ವಾಹಕ ನಿಜಕ್ಕೂ ಕರುಣಾಮಯಿ" ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು 2019ರಲ್ಲಿ ಬಸ್‌ನಲ್ಲಿ ಕಳೆದುಹೋಗಿದ್ದ ತಮ್ಮ ಒನ್‌ಪ್ಲಸ್ ಫೋನ್ ಮರಳಿ ಸಿಕ್ಕಿದ್ದನ್ನ ನೆನಪಿಸಿಕೊಂಡಿದ್ದಾರೆ. ಆದರೆ, ಎಲ್ಲರಿಗೂ ಇಂತಹ ಒಳ್ಳೆಯ ಅನುಭವಗಳಾಗಿಲ್ಲ. ಕೆಲವರು ತಮಗೆ ಸಹಾಯ ಸಿಗದ, ಆಟೋ ಚಾಲಕರಿಗೆ ಹಣ ಕೊಟ್ಟು ಕಳೆದುಹೋದ ವಸ್ತುಗಳನ್ನ ಪಡೆದ ಕಹಿ ಅನುಭವಗಳನ್ನ ಸಹ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+