ಕರ್ನಾಟಕ ಚುನಾವಣೆ: ಬೆಂಗಳೂರು ನಗರ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳದ ಗುರಿ, ಜಾಗೃತಿ, ನಾಟಕ ಪ್ರದರ್ಶನ
ಬೆಂಗಳೂರು, ಏಪ್ರಿಲ್ 04: ಬೆಂಗಳೂರು ನಗರ ಜಿಲ್ಲಾ ಚುಣಾವಣಾಧಿಕಾರಿ ವ್ಯಾಪ್ತಿಯಲ್ಲಿ 2023 ರ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಶೇ. 75ಕ್ಕೆ ಏರಿಸುವ ಗುರಿ ಹೊಂದಿದ್ದೇವೆ. ಮತದಾರರ ಸಂಖ್ಯೆಗೆ ಅನುಗುಣವಾಗಿ ಮತದಾನ ಪ್ರಮಾಣ ಹೆಚ್ಚಿಸಲು ತಾವೆಲ್ಲರೂ ಕೈ ಜೋಡಿಸಬೇಕೆಂದು ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೊಮ್ಮನಹಳ್ಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೊಷಣೆಯಾಗುತ್ತಿದ್ದಂತೆ ಬೆಂಗಳೂರಲ್ಲಿ ಬಿಬಿಎಂಪಿಯಿಂದ ಎಲ್ಲ ಎಂಟು ವಲಯಗಳಲ್ಲಿ ಮತದಾನ ಜಾಗೃತಿ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದೇ ವೇಳೆ ಬೊಮ್ಮನಹಳ್ಳಿ ವಲಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (RWAs) ಪದಾಧಿಕಾರಿಗಳ ಜೊತೆಗೆ ಮಂಗಳವಾರ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತುಷಾರ್ ಗಿರಿನಾಥ್ ಅವರು, ಮತದಾನ ಮಾಡುವ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸಂಬಂಧ ಎಲ್ಲರೂ ಮತದಾನದ ಪ್ರಾಮುಖ್ಯತೆಯನ್ನು ಅರಿತು ತಪ್ಪದೆ ಮತ ಚಲಾಯಿಸಬೇಕು ಎಂದು ತಿಳಿಸಿದರು.
ಮತದಾರರ ಸಂಖ್ಯೆಯಷ್ಟು ಮತದಾನ ಪ್ರಮಾಣ ಇಲ್ಲ
ಬೆಂಗಳೂರಲ್ಲಿ ನಗರದಲ್ಲಿ ಒಟ್ಟು 95,13,830 ಲಕ್ಷ ಮತದಾರರು ಇದ್ದಾರೆ. ಹೀಗಿದ್ದರು ಸಹ ಇಲ್ಲಿ ಮತದಾನ ಮಾಡುವ ಪ್ರಮಾಣ ಮಾತ್ರ ತೀರ ಕಡಿಮೆ. ಇರುವ ಮತದಾರರ ಸಂಖ್ಯೆಗೆ ಮತ ಚಲಾಯಿಸುವವರ ಸಂಖ್ಯೆಗೂ ತೀರಾ ವ್ಯತ್ಯಾಸವಿದೆ. ಅದನ್ನು ನಾವೆಲ್ಲರೂ ಸೇರಿ ಬದಲಾಯಿಸಬೇಕಿದೆ ಎಂದು ಕರೆ ನೀಡಿದರು.
ಮತಗಟ್ಟೆಗಳ ಬಳಿಯಿರುವ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಜೊತೆಗೆ 80 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನರು ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ನೀವು ಸಹ ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಮತದಾನದ ಅವಕಾಶ ಕುರಿತು ತಿಳಿಸಿ ಹೇಳಬೇಕು ಎಂದರು.

ಬೆಂಗಳೂರು ನಗರ ವ್ಯಾಪ್ತಿಯಡಿ ಸೇರ್ಪಡೆಯಾದ ಹೊಸ ಮತದಾರರು, ತಿದ್ದುಪಡಿ, ಸ್ಥಳ ಬದಾವಣೆ ಸೇರಿದಂತೆ ಇನ್ನಿತರೆ ಹೊಸ ಮತದಾನ ಗುರುತಿನ ಚೀಟಿಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಆಯಾ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಸಿದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಇನ್ನಿತರೆ ಚುನಾವಣಾ ದೂರುಗಳನ್ನು ಸ್ವೀಕರಿಸಲು ನಿಯಂತ್ರಣಾ ಕೊಠಡಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರುಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.
'ಮತದಾನ ಸಂಕಲ್ಪ' ನಾಟಕ ಪ್ರದರ್ಶನ
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ನಡೆದ ಸಭೆಯಲ್ಲಿ ನಾಟಕ ನಿರ್ದೇಶಕರಾದ ಟಿ.ಎನ್.ಬಾಲಕೃಷ್ಣ ಅವರ ನೇತೃತ್ವದಲ್ಲಿ ಬಿಎಂಟಿಸಿ -ಕೆಎಸ್ಆರ್‌ಟಿಸಿ (BMTC-KSRTC) ಎಂಬ ನಾಟಕ ತಂಡ ಸದಸ್ಯರು 'ಮತದಾನ ಸಂಕಲ್ಪ' ಎಂಬ ಜಾಗೃತಿ ನಾಟಕ ಪ್ರದರ್ಶನ ಮಾಡಿದರು. ಈ ಮೂಲಕ ವಲಯದ ನಿವಾಸಿಗಳಲ್ಲಿ ಮತದಾನ ಜಾಗೃತಿ ಮೂಡಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಸಂಗಪ್ಪ, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ, ವಲಯ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ ಹಾಗೂ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications