11 ಅಭಿಮಾನಿಗಳ ಸಾವು: ಆರ್‌ಸಿಬಿ ವಿರುದ್ಧ FIR ದಾಖಲು!
RCB: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್ಮೆಂಟ್ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಬೆಂಗಳೂರು ಪೊಲೀಸರು ಗುರುವಾರ ಅಸಹಜ ಸಾವು ಎಂದಷ್ಟೇ ದೂರು ದಾಖಲಿಸಿಕೊಂಡಿದ್ದರು. ಯಾವಾಗ ಒತ್ತಡ ಹೆಚ್ಚಾಗುವುದಕ್ಕೆ ಪ್ರಾರಂಭವಾಯಿತೋ ಆಗ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದೀಗ ಬೆಂಗಳೂರು ಪೊಲೀಸರು ಆರ್‌ಸಿಬಿ ವಿರುದ್ಧ ಮಾತ್ರವಲ್ಲ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್ಮೆಂಟ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಬೆಂಗಳೂರು ಪೊಲೀಸರು ಮೊದಲು ಯುಡಿಆರ್ ಮಾತ್ರ ದಾಖಲಿಸಿಕೊಂಡಿದ್ದರು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಎಫ್‌ಐಆರ್ ದಾಖಲಿಸದೆ ಯುಡಿಆರ್ ದಾಖಲಿಸಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗಿತ್ತು. ಅಂತಿಮವಾಗಿ ಕೊನೆಗೂ ಗುರುವಾರ ಸಂಜೆಯ ವೇಳೆಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಮತ್ತು ಕಾರ್ಯಕ್ರಮ ಆಯೋಜಕರನ್ನು ಹೊಣೆಗಾರರನ್ನಾಗಿ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಅದರಂತೆ ಹಲವರು ವಿರುದ್ಧ ಎಫ್‌ಐಆರ್ ರಿಜಿಸ್ಟ್ರೇಷನ್ ಆಗಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್‌ಸಿಬಿ, ಡಿಎನ್‌ಎ (ಈವೆಂಟ್ ಮ್ಯಾನೇಜ್ಮೆಂಟ್), ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಕಾಲ್ತುಳಿತ ಘಟನೆಯಲ್ಲಿ ಕ್ರಿಮಿನಲ್ ನಿರ್ಲಕ್ಷ್ಯವನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಹೈಕೋರ್ಟ್‌ನಲ್ಲಿ ವಿಚಾರಣೆ: ಇನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಅಲ್ಲದೇ ಈ ದುರ್ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದು ಗುರುವಾರ ವಿಚಾರಣೆ ನಡೆಸಿದೆ. ವಿಚಾರಣೆಯ ವೇಳೆ ಕರ್ನಾಟಕ ಸರ್ಕಾರದ ಪರ ವಕೀಲರು ಇದೇ 03 ರಂದು ಆರ್‌ಸಿಬಿ ತಂಡವು ಐಪಿಎಲ್ ಕಪ್ ಗೆದ್ದಿತ್ತು. ವಿಜಯೋತ್ಸವ ಕಾರ್ಯಕ್ರಮಕ್ಕೆ ಪೊಲೀಸರು ಕ್ರಮ ತೆಗೆದುಕೊಂಡಿದ್ದರು. ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆಯ ದೃಷ್ಟಿಯಿಂದ 1643 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು ಅಂತ ತಿಳಿಸಿದ್ದಾರೆ.
ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಸಮಸ್ಯೆ ಏನಾಗಿದೆ ಎನ್ನುವುದನ್ನು ಪರಿಗಣಿಸಿ ಕ್ರಮ ತೆಗೆದುಕೊಳ್ಳಲಾಗಿದೆ. ಕೋರ್ಟ್ ಈ ಸಂಬಂಧ ನೀಡುವ ನಿರ್ದೇಶನದ ಅನುಸಾರ ಕ್ರಮಕೈಗೊಳ್ಳಲು ಸಿದ್ಧ ಎಂದು ಕೋರ್ಟ್‌ಗೆ ತಿಳಿಸಲಾಯಿತು. ಅಲ್ಲದೇ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಪೊಲೀಸ್ ಭದ್ರತೆ ಹಾಗೂ ಆಂಬ್ಯೂಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಈ ವೇಳೆ 2ಲಕ್ಷ ಜನರು ಸೇರಿದ್ದರು. ಹೆಚ್ಚು ಜನ ಸೇರಿದ್ದರಿಂದ ಘಟನೆ ನಡೆದಿದೆ ಎಂದು ಹೇಳಲಾಯಿತು.
ಕಾಲ್ತುಳಿತ ಪ್ರಕರಣದಲ್ಲಿ ಒಟ್ಟು 56 ಗಾಯಾಗೊಂಡಿದ್ದು. ಈಗಾಗಲೇ 15 ಡಿಸ್ಚಾರ್ಜ್ ಆಗಿದ್ದಾರೆ. ಗಂಭೀರ ಗಾಯಗೊಂಡವರು ಮೂವರು ಇದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಈ ವೇಳೆ ಈ ರೀತಿಯ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿರ್ದಿಷ್ಟ ಮಾನದಂಡ ಯಾವುದಾದರೂ ಎಸ್ಓಪಿ ಇದೆಯೇ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ.
ಇನ್ನು 30 ಸಾವಿರ ಸಾಮರ್ಥ್ಯವಿರುವ ಸ್ಟೇಡಿಯಂ ಗೆ 2.5ಲಕ್ಷ ಜನ ಸೇರಿದರು ಎಂದು ಹೇಳಲಾಗಿದೆ. ಅದರಲ್ಲೂ ಫ್ರೀ ಎಂಟ್ರಿ ಎಂದಾಗ ನೂಗುನುಗ್ಗಲು ಆಗಿದೆ. ಕಾರ್ಯಕ್ರಮದ ನಿರ್ವಹಣೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ನಿಂದ ನಡೆಯುತ್ತೆ. ಈಗಾಗಲೇ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶ ಮಾಡಲಾಗಿದೆ ಎಂದು ಎಜಿ ಅವರು ಹೇಳಿದ್ದಾರೆ. ಸುದೀರ್ಘ ವಾದ - ವಿವಾದದ ನಂತರ ವಿಚಾರಣೆಯನ್ನು ಮಂಗಳವಾರ ಜೂನ್ 10ಕ್ಕೆ ವಿಚಾರಣೆ ಮುಂದೂಡಲಾಗಿದೆ.












Click it and Unblock the Notifications