ಹಬ್ಬದಲ್ಲಿ ಸಮರ್ಪಕ ನೀರು ಕೊಡಿ: ನೀರು ಸೋರಿಕೆ ತಡೆ ಗಮನಿಸಿ ವರದಿ ನೀಡಿ: BWSSB
ಬೆಂಗಳೂರು, ಏಪ್ರಿಲ್ 09: ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆ ಎಲ್ಲಿಯೂ ನೀರು ಕೊರೆತೆ ಆಗದಂತೆ ನೋಡಿಕೊಳ್ಳಬೇಕು. ಕಾವೇರು ನೀರಿನ ಸೋರಿಕೆ ತಡೆಯುವ ನಿಟ್ಟಿನಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಂಡು ನಾಳೆ ಬುಧುವಾರದಂದು (ಏಪ್ರಿಲ್ 10) ಸಮಗ್ರ ವರದಿ ನೀಡುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ವಿ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು, ಬೆಂಗಳೂರು ನಗರದಲ್ಲಿ ಜಲಮಂಡಳಿಯ ಪೈಪ್‌ಲೈನ್ ನಲ್ಲಿ ಆಗುತ್ತಿರುವ ಸೋರಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈಗಾಗಲೇ ಜಲಮಂಡಳಿಯ ವತಿಯಿಂದ ಸಮಸ್ಯೆ ಇರುವಂತಹ ಪೈಪ್‌ಲೈನ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಪೈಪ್‌ಲೈನ್‌ಗಳನ್ನ ಬದಲಾಯಿಸುವುದಕ್ಕೆ ಸಾಧ್ಯವಿಲ್ಲದಷ್ಟು ಕಟ್ಟಡಗಳ ನಿರ್ಮಾಣವಾಗಿದೆ.

ನಗರದ ಕೆಲವು ಕಡೆಗಳಲ್ಲಿ ಪೈಪ್‌ಗಳು ತುಂಬಾ ಹಳೆಯದಾಗಿದ್ದು ಅವುಗಳನ್ನು ಬದಲಾಯಿಸಲು ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ. ಹಾಳಾದ ಪೈಪ್‌ಲೈನ್‌ಗಳಿಂದ ನೀರು ಸೋರಿಕೆ ತಡೆಗಟ್ಟಲು ತುರ್ತಾಗಿ ಅಗತ್ಯ ಕ್ರಮವಹಿಸಬೇಕು. ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನೀರು ತಡೆಗಟ್ಟಬಹುದಾದ ಕಾಮಗಾರಿಗಳನ್ನು ಕೈಗೊಂಡು ಅದರ ಬಗ್ಗೆ ಬುಧುವಾರ ವರದಿ ನೀಡಬೇಕೆಂದರು.
ಸಮರ್ಪಕ ನೀರು ಸರಬರಾಜು ನಮ್ಮ ಆದ್ಯತೆ
ಗ್ರಾಹಕರಿಗೆ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡುವುದು ಜಲಮಂಡಳಿಯ ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಜಲಮಂಡಳಿ ತಗೆದುಕೊಳ್ಳುತ್ತಿದೆ. ಯಾವುದೇ ಭಾಗದಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ಜಲಮಂಡಳಿಗೆ ದೂರು ನೀಡಿದರೆ ಕ್ಷಿಪ್ರವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದರು.

ಹಬ್ಬಗಳಲ್ಲಿ ನೀರು ಪೂರೈಕೆಗೆ ಅಲರ್ಟ್
ಯುಗಾದಿ ಹಾಗೂ ರಂಜಾನ್ ಹಬ್ಬದ ಸಂಧರ್ಭದಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಅಲರ್ಟ್ ಆಗಿರಬೇಖು. ಇಂದು ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬವಿದೆ. ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನ ನಾಗರೀಕರಿಗೆ ನೀರಿನ ಸಮಸ್ಯೆ ಉಂಟಾಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಹಬ್ಬದ ದಿನ ರೊಟೇಷನ್ ನಲ್ಲಿ ತುರ್ತು ಕಾರ್ಯಗಳಿಗೆ ಅಧಿಕಾರಿಗಳು ಲಭ್ಯವಿರಬೇಕು ಎಂದು ನಿರ್ದೇಶಿಸಿದರು.
ಜನ ಹೆಚ್ಚಿರುವ ಕಡೆ ಹೆಚ್ಚು ನೀರು ಪೂರೈಕೆ
ನಗರದಲ್ಲಿ ಎಲ್ಲಿ ಜನಸಾಂದ್ರತೆ ಹೆಚ್ಚಿರುತ್ತದೆಯೋ ಆ ಪ್ರದೇಶಗಳಲ್ಲಿ ಈಗಾಗಲೇ ಸಿಂಟೆಕ್ಸ್ ಟ್ಯಾಂಕ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹಬ್ಬದ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ನೀರು ಸರಬರಾಜು ಮಾಡಬೇಕು. ಒಂದು ಬಾರಿ ಟ್ಯಾಂಕ್ ತುಂಬುವ ಕಡೆ ಎರಡು ಬಾರಿ ತುಂಬುವ ಕೆಲಸ ಮಾಡಬೇಕು.
ರಜೆಯಿಲ್ಲದೇ ಕೆಲಸ ಮಾಡುವ ಮೂಲಕ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಮಂಡಳಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಾಲ್‌ಮೆನ್‌ಗಳು ನಿಭಾಯಿಸಿದ್ದಾರೆ. ಇದೇ ರೀತಿಯ ಶ್ರಮದ ಮೂಲಕ ಜನರು ಯಾವುದೇ ಆತಂಕವಿಲ್ಲದೇ ಹಬ್ಬವನ್ನು ಆಚರಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಲಮಂಡಳಿ ಅಧ್ಯಕ್ಷರು ಹೇಳಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ್, ಮುಖ್ಯ ಎಂಜನಿಯರ್ ಎಲ್.ಕುಮಾರನಾಯಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್, ರಾಜೀವ್ ಕೆ.ಎನ್, ಗಂಗಾಧರ್ ಬಿ.ಸಿ, ದೇವರಾಜು ಎಂ, ಜಯಶಂಕರ್, ಅಪರ ಮುಖ್ಯ ಎಂಜಿನಿಯರ್ ಮಧುಸೂಧನ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications