Bengaluru: ಕಂಡೆಕ್ಟರ್ ಕಣ್ ಸನ್ನೆಗೆ ಬಿದ್ಲು ಹುಡುಗಿ- ಬಿಎಂಟಿಸಿ ಪ್ರೇಯಸಿಯನ್ನ ಗರ್ಭಿಣಿ ಮಾಡಿ ಒಲ್ಲೆ ಎಂದ
ಬೆಂಗಳೂರು ಜನವರಿ 14: ತನಗೆ ಮೋಸ ಮಾಡಿದ ಗಂಡ ಬೇಕು, ತನ್ನ ಮಗುವಿಗೆ ತಂದೆ ಬೇಕು ಎಂದು ಯುವತಿಯೊಬ್ಬಳು ಬೆಂಗಳೂರು ಕಮಿಷನರ್ ಕಚೇರಿ ಕದ ತಟ್ಟಿದ್ದಾಳೆ. ಬಿಎಂಟಿಸಿ ಬಸ್ ಕಂಡೆಕ್ಟರ್ ಕಣ್ ಸನ್ನೆಗೆ ಬಿದ್ದು ಮೋಸ ಹೋದ ಯುವತಿ ಇಂದು ನ್ಯಾಯ ಕೊಡಿ ಎಂದು ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಅಷ್ಟಕ್ಕೂ ಯಾರೀಕೆ? ಏನಾಯ್ತು? ಕಡೆಕ್ಟರ್ ಮಾಡಿದ್ದೇನು? ಇದೆಲ್ಲವನ್ನೂ ಕಂಪ್ಲೀಟ್ ಆಗಿ ತಿಳಿಯೋಣ.
ಬಿಎಂಟಿಸಿ ಬಸ್ ಡ್ರೈವರ್ ಕಮ್ ಕಂಡೆಕ್ಟರ್ ಆಗಿದ್ದ ಮಂಜುನಾಥ ಎಂಬಾತ ಮೇಲೆ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಎಂ.ಎಸ್.ಪಾಳ್ಯದಿಂದ ಯಲಹಂಕ ಕಡೆಗೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬಳನ್ನು ಬಸ್ ಕಂಡೆಕ್ಟರ್ ಪಟಾಯಿಸಿದ ಘಟನೆ ನಡೆದಿದೆ. ಕೇವಲ ಪ್ರೀತಿಗೀತಿ ಅಂದುಕೊಂಡಿದ್ದರೆ ಈ ವಿಚಾರ ಇಷ್ಟೊಂದು ದೊಡ್ಡದಾಗುತ್ತಿರಲಿಲ್ಲ. ಆದರೆ ಬಸ್ ಕಂಡೆಕ್ಟರ್ ಮಂಜುನಾಥ್ ವಿಚ್ಚೇದಿತ ಯುವತಿಗೆ ಬಾಳು ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಆಕೆಯನ್ನು ಗರ್ಭಿಣಿ ಮಾಡಿ ಸದ್ಯ ಆಕೆಯನ್ನು ತಿರಸ್ಕರಿಸಿದ್ದಾನೆ.

ಹೌದು... ಕಂಡೆಕ್ಟರ್ ಮಂಜುನಾಥ್‌ಗೆ ಬಸ್‌ನಲ್ಲಿ ಪರಿಚಯವಾದ ಯುವತಿಗೆ ಈಗಾಗಲೇ ಮದುವೆಯಾಗಿ ವಿಚ್ಚೇಧನವಾಗಿತ್ತು. ಬಸ್‌ನಲ್ಲಿ ಪರಿಚಯವಾದ ಈಕೆಯ ನಂಬರ್ ಅನ್ನು ಮಂಜುನಾಥ್ ತೆಗೆದುಕೊಂಡಿದ್ದನು. ಬಳಿಕ ಆಕೆಗೆ ಆಗಾಗ ಕರೆ ಮಾಡಿ ಮಾತನಾಡುತ್ತಿದ್ದನು. ಈ ಮಾತು ಸ್ನೇಹಕ್ಕೆ ತಿರುಗಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಯುವತಿಗೆ ಈಗಾಗಲೇ ವಿಚ್ಚೇದನವಾಗಿದೆ ಎಂದು ತಿಳಿದು ಕೂಡ ಕಂಡೆಕ್ಟರ್ ಮಂಜುನಾಥ್ ಬಾಳು ಕೊಡುವುದಾಗಿ ನಂಬಿಸಿ ಆಕೆಯೊಂದಿಗೆ ಊರು ಊರು ಸುತ್ತಾಡಿದ್ದಾನೆ.
ಮೂರು ತಿಂಗಳು ಇಬ್ಬರು ಒಟ್ಟಿಗೆ ಪ್ರವಾಸ ಹೋಗಿ ಜಾಲಿಯಾಗಿ ಸುತ್ತಾಡಿದ್ದಾರೆ. ಜೊತೆಯಾಗಿ ಇರಲು ಆರಂಭಿಸಿದ್ದರು. ಅಲ್ಲದೆ ಯುವತಿ ಮನೆಯವರ ವಿರೋಧದ ನಡುವೆಯೂ ಮಂಜುನಾಥನನ್ನು ದೇವಸ್ಥಾನದಲ್ಲಿ ಮದುವೆ ಕೂಡ ಆಗಿದ್ದಳು. ಮೂರು ತಿಂಗಳ ಬಳಿಕ ಯುವತಿಗೆ ಮಂಜುನಾಥ್ ನಿಜ ಬಣ್ಣ ಗೊತ್ತಾಗಿದೆ.
ಮಂಜುನಾಥ್‌ಗೆ ಈಗಾಗಲೇ ಮದುವೆಯಾಗಿದ್ದು ಮಕ್ಕಳೂ ಕೂಡ ಇರುವುದು ಸಂತ್ರಸ್ತ ಯುವತಿಗೆ ಗೊತ್ತಾಗಿದೆ. ಇದೆಲ್ಲಾ ಗೊತ್ತಾದ ಬಳಿಕ ಕಂಡೆಕ್ಟರ್ ಮಂಜುನಾಥ್ ಯುವತಿಯನ್ನು ಕಡೆಗಣಿಸಲು ಶುರುಮಾಡಿ, ತಲೆ ಮರೆಸಿಕೊಂಡಿದ್ದಾನೆ. ಅಲ್ಲದೆ ಯುವತಿ ಪ್ರಸ್ತುತ ಗರ್ಭಿಣಿ ಕೂಡ ಆಗಿದ್ದು ಆಕೆ ತನ್ನ ಗಂಡನನ್ನು ಹುಡುಕಿ ಕೊಡಿ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬೇಡಿಕೆ ಇಟ್ಟಿದ್ದಾಳೆ.
ಕಂಡಕ್ಟರ್ ಮಂಜುನಾಥ್ ಈಗಾಗಲೇ ಮದುವೆಯಾಗಿದ್ದು ನೆಲಮಂಗಳದಲ್ಲಿ ಆತನ ಮೊದಲ ಪತ್ನಿ ಹಾಗೂ ವಾಸವಾಗಿದ್ದಾರೆ ಎನ್ನಲಾಗುತ್ತಿದೆ. ಈತನ ಮತ್ತೊಂದು ಕುಟುಂಬದ ಬಗ್ಗೆ ತಿಳಿದ ಯುವತಿ ಕಂಗಾಲಾಗಿದ್ದಾಳೆ. ಇದೆಲ್ಲಾ ವಿಚಾರ ಗೊತ್ತಾಗುವ ವೇಳೆ ಯುವತಿ ಗರ್ಭಿಣಿ ಎನ್ನುವುದು ಗೊತ್ತಾಗಿದೆ. ಯುವತಿ ಗರ್ಭಿಣಿ ಆದ ಬಳಿಕ ಕಂಡೆಕ್ಟರ್ ಮಂಜುನಾಥ್ ಯುವತಿ ಬೇಡ ಎನ್ನುತ್ತಿದ್ದಾನಂತೆ.
ಹೀಗಾಗಿ ಯುವತಿ ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಯಲ್ಲಿ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾಳೆ. ತನಗೆ ತನ್ನ ಗಂಡ ಬೇಕು, ಹೊಟ್ಟೆಯಲ್ಲಿ ಇರುವ ನನ್ನ ಮಗುವಿಗೆ ತಂದೆ ಬೇಕು ಅಂತ ಯುವತಿ ಹಠ ಹಿಡಿದಿದ್ದಾಳೆ. ಆದರೆ ಮೋಸ ಮಾಡಿದ ಮಂಜುನಾಥ್ ಮಾತ್ರ ಯುವತಿಯನ್ನು ಕಾಣಲು ಇಚ್ಚಿಸುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಸ್ಥಳೀಯ ಪೊಲೀಸ್ ಠಾಣೆಗೆ ದೂರು ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications