ಬೆಂಗಳೂರು: ಬೈಕ್ ಟ್ಯಾಕ್ಸಿಗಳ ವಿರುದ್ಧ RTO ಸಮರ; ಆಟೋಗಳ ಭಾರೀ ಡಿಮ್ಯಾಂಡ್, ದುಬಾರಿ ದರದಿಂದ ಮಧ್ಯಮ ವರ್ಗದ ಜನ ಕಂಗಾಲು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ ಮತ್ತು ಆರ್‌ಟಿಒ ಅಧಿಕಾರಿಗಳ ಕಾರ್ಯಾಚರಣೆ ಎರಡನೇ ದಿನವೂ ತೀವ್ರಗೊಂಡಿದೆ. ಅಧಿಕಾರಿಗಳ ದಂಡ ಮತ್ತು ಬೈಕ್ ಜಪ್ತಿಗೆ ಹೆದರಿ ಹೆಚ್ಚಿನ ಬೈಕ್ ಟ್ಯಾಕ್ಸಿ ಸವಾರರು ಆಫ್‌ಲೈನ್ ಉಳಿದಿರುವುದರಿಂದ ನಗರದಲ್ಲಿ ಬೈಕ್ ಟ್ಯಾಕ್ಸಿಗಳ ಓಡಾಟ ಗಣನೀಯವಾಗಿ ಕುಸಿದಿದೆ.
ಇದರ ನೇರ ಪರಿಣಾಮ ಆಟೋರಿಕ್ಷಾಗಳ ಮೇಲಾಗಿದ್ದು, ಆಟೋಗಳ ಬೇಡಿಕೆ ಹೆಚ್ಚಾಗುವುದರ ಜೊತೆಗೆ ದರವೂ ಗಗನಕ್ಕೇರಿದೆ. ಕಡಿಮೆ ವೆಚ್ಚದಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರು ಹಾಗೂ ವಿಶೇಷವಾಗಿ ನಮ್ಮ ಮೆಟ್ರೋ ಪ್ರಯಾಣಿಕರು ಲಾಸ್ಟ್ ಮಿನಿಟ್ ಕನೆಕ್ಟಿವಿಟಿಗಾಗಿ ದುಬಾರಿ ಹಣ ತೆರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಹೌದು, ಬೈಕ್ ಟ್ಯಾಕ್ಸಿಗಳು ರಸ್ತೆಗೆ ಇಳಿಯದ ಕಾರಣ ಮೆಟ್ರೋ ನಿಲ್ದಾಣಗಳಿಂದ ಮನೆ ಹಾಗೂ ಕಚೇರಿಗಳಿಗೆ ತೆರಳುವ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿಂದೆ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ರಾಮಮೂರ್ತಿ ನಗರಕ್ಕೆ ಬೈಕ್ ಟ್ಯಾಕ್ಸಿಯಲ್ಲಿ 50 ರಿಂದ 60 ರೂಪಾಯಿ ಪಾವತಿಸುತ್ತಿದ್ದ ಪ್ರಯಾಣಿಕರು, ಇದೀಗ ಆಟೋಗಳಿಗೆ 150 ರೂಪಾಯಿವರೆಗೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.
ಆಟೋ ಚಾಲಕರಲ್ಲಿ ಎಷ್ಟೇ ಚೌಕಾಶಿ ಮಾಡಿದ್ರೂ ಕೂಡ ಸರ್ಕಾರ ನಿಗದಿಪಡಿಸಿದ ಮೀಟರ್ ದರಕ್ಕೆ ಬರಲು ಚಾಲಕರು ಒಪ್ಪುತ್ತಿಲ್ಲ. ಮತ್ತೊಂದೆಡೆ ಆ್ಯಪ್ ಆಧಾರಿತ ಆಟೋ ಬುಕ್ಕಿಂಗ್‌ಗಳಲ್ಲೂ ಪಿಕಪ್, ಕಂಜೆಶನ್ ಹಾಗೂ ವೇಟಿಂಗ್ ಶುಲ್ಕಗಳ ಹೆಸರಿನಲ್ಲಿ ಹೆಚ್ಚುವರಿ ದರ ವಿಧಿಸಲಾಗುತ್ತಿದೆ. ಟಿಪ್ಸ್ ನೀಡದಿದ್ದರೆ ಆ್ಯಪ್‌ಗಳ ಮೂಲಕವೂ ಆಟೋ ಸಿಗುತ್ತಿಲ್ಲ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.
330ಕ್ಕೂ ಹೆಚ್ಚು ವಾಹನಗಳ ಜಪ್ತಿ, ಆರ್‌ಟಿಒ ಕಾರ್ಯಚರಣೆ ಚುರುಕು
ಖಾಸಗಿ ಬಳಕೆಯ ಅಂದರೆ ವೈಟ್ ಬೋರ್ಡ್ಗಳಿರುವ ದ್ವಿಚಕ್ರ ವಾಹನಗಳನ್ನ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದನ್ನ ಪತ್ತೆಹಚ್ಚಲು ಆರ್‌ಟಿಒ ಅಧಿಕಾರಿಗಳು ನಗರದಾದ್ಯಂತ ತಪಾಸಣೆ ತೀವ್ರಗೊಳಿಸಿದ್ದಾರೆ. ಗುರುವಾರ ಒಂದೇ ದಿನ ಸುಮಾರು 220 ವಾಹನಗಳನ್ನ ತಪಾಸಣೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ 70 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಇದರಲ್ಲಿ ಬೆಂಗಳೂರು ಪೂರ್ವ ಆರ್‌ಟಿಒ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಅಂದರೆ 19 ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯ ಮೊದಲ ದಿನ ಜಪ್ತಿಯಾಗಿದ್ದ 260ಕ್ಕೂ ಹೆಚ್ಚು ವಾಹನಗಳನ್ನ ಸೇರಿಸಿ ಇದುವರೆಗೆ ಒಟ್ಟು 330ಕ್ಕೂ ಅಧಿಕ ಬೈಕ್ ಹಾಗೂ ಸ್ಕೂಟರ್‌ಗಳನ್ನ ಸಾರಿಗೆ ಇಲಾಖೆ ವಶಪಡಿಸಿಕೊಂಡಿದೆ. ತಪಾಸಣೆ ವೇಳೆ ಹೊರರಾಜ್ಯದ ನೋಂದಣಿ ಹೊಂದಿರುವ ಹಲವು ವಾಹನಗಳು ಸಹ ಬೈಕ್ ಟ್ಯಾಕ್ಸಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.
ನಿಯಮ ಉಲ್ಲಂಘಿಸಿದರೆ ದಂಡ ಹಾಗೂ ಲೈಸೆನ್ಸ್ ರದ್ದು
ಖಾಸಗಿ ನೋಂದಣಿ ವಾಹನಗಳನ್ನುಬಾಡಿಗೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಮೋಟಾರು ವಾಹನ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ 5,000 ದಿಂದ 10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತಿದೆ. ಪದೇಪದೇ ಇಂತಹ ಉಲ್ಲಂಘನೆಯಾದರೆ ಚಾಲನಾ ಪರವಾನಗಿ ಅಂದರೆ ಡ್ರೈವಿಂಗ್ ಲೈಸೆನ್ಸ್ ಅಮಾನತು ಹಾಗೂ ವಾಹನದ ನೋಂದಣಿ ಪ್ರಮಾಣಪತ್ರವನ್ನೂ (RC) ರದ್ದುಪಡಿಸಲಾಗುವುದು ಎಂದು ಸಾರಿಗೆ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
ಬೈಕ್ ಟ್ಯಾಕ್ಸಿ ಸೇವೆಗಳನ್ನ ನಿರ್ವಹಿಸಲು ಇರುವ ಕಾನೂನುಬದ್ಧ ಆಧಾರದ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿ ಟ್ಯಾಕ್ಸಿ ಅಗ್ರಿಗೇಟರ್ ಕಂಪನಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಕಂಪನಿಗಳು ನೀಡುವ ಉತ್ತರವನ್ನ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಆಯುಕ್ತರಾದ ಆರ್. ಸೆಲ್ವಮಣಿ ತಿಳಿಸಿದ್ದಾರೆ.
ನಿಷೇಧದ ಬದಲಿಗೆ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ
ಬೈಕ್ ಟ್ಯಾಕ್ಸಿಗಳನ್ನ ಸಂಪೂರ್ಣವಾಗಿ ನಿಷೇಧ ಮಾಡಿದರೆ ಈ ಪರಿಣಾಮ ನಿಜಕ್ಕೂ ಸಾಮಾನ್ಯ ಜನರಿಗೆ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೆ ತಟ್ಟುತ್ತದೆ. ಹಾಗಾಗಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನ ಸುಧಾರಿಸಬೇಕು. ಬದಲಿಗೆ, ಕೈಗೆಟುಕುವ ದರದ ಪ್ರಯಾಣದ ಆಯ್ಕೆಯನ್ನ ಕಸಿದುಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಸರ್ಕಾರವು ಬೈಕ್ ಟ್ಯಾಕ್ಸಿಗಳನ್ನ ಸಂಪೂರ್ಣವಾಗಿ ನಿಷೇಧಿಸುವ ಬದಲು, ಸ್ಪಷ್ಟವಾದ ಕಾನೂನು ಚೌಕಟ್ಟು ಮತ್ತು ನಿಯಮಗಳನ್ನ ರೂಪಿಸಿ ಅವುಗಳನ್ನ ನಿಯಂತ್ರಣಕ್ಕೆ ತರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Click it and Unblock the Notifications
