SWR: ಬೆಂಗಳೂರು-ಬೀದರ್ ವಿಶೇಷ ರೈಲು ಸೇವೆ ಎರಡು ತಿಂಗಳು ವಿಸ್ತರಣೆ, ವೇಳಾಪಟ್ಟಿ
ಬೆಂಗಳೂರು, ಅಕ್ಟೋಬರ್ 25: ದಸರಾ, ದೀಪಾವಳಿ ಹಬ್ಬ ಮತ್ತು ಛತ್ ಹಬ್ಬಗಳಿಗಾಗಿ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಟ್ಟಿದ್ದ ವಿಶೇಷ ರೈಲಿನ ಸೇವೆಯನ್ನು ನೈಋತ್ಯ ರೈಲ್ವೆ ವಿಭಾಗವು ವಿಸ್ತರಣೆ ಮಾಡಿದೆ. ಹಬ್ಬದ ಹಂಗಾಮಿಯಲ್ಲಿ ಪ್ರಯಾಣಿಕರ ಸಂಚಾರ ಹೆಚ್ಚಳದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನದಟ್ಟಣೆ ಅನುಸಾರ ನೈಋತ್ಯ ರೈಲ್ವೆ (SWR) ಇಲಾಖೆ ಎಸ್‌ಎಂವಿಟಿ ಬೆಂಗಳೂರು-ಬೀದರ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯನ್ನು ಮುಂದುವರಿಸಲು ನಿರ್ಧರಿಸಿದೆ. ಈ ನಿರ್ಧಾರದಿಂದ ಪ್ರಯಾಣಿಕರಿಗೆ ಹಬ್ಬದ ಕಾಲದಲ್ಲಿ ಸುಗಮವಾದ ಪ್ರಯಾಣದ ಅನುಕೂಲ ಸಿಗಲಿದೆ. ಹಾಗಾದರೆ ರೈಲಿನ ಸಂಖ್ಯೆ, ಸಂಚಾರ ದಿನಾಂಕ ಮತ್ತು ವೇಳಾಪಟ್ಟಿ ವಿವರ ಇಲ್ಲಿದೆ.

ವೇಳಾಪಟ್ಟಿಯ ಪ್ರಕಾರ ಎಸ್‌ಎಂವಿಟಿ ಬೆಂಗಳೂರು-ಬೀದರ್ ವಿಶೇಷ ರೈಲು (06539) ಪ್ರತೀ ಶುಕ್ರವಾರ ಮತ್ತು ಭಾನುವಾರ ಸಂಚರಿಸಲಿದೆ. 2025 ಅಕ್ಟೋಬರ್ 31ರವರೆಗೆ ನೋಟಿಫೈ ಮಾಡಲಾಗಿತ್ತು. ಇದೀಗ ಇದರ ಅವಧಿಯನ್ನು 2025 ನವೆಂಬರ್ 2ರಿಂದ ಡಿಸೆಂಬರ್ 28ರವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಈ ಮಾರ್ಗದಲ್ಲಿ ಒಟ್ಟು 17 ಟ್ರಿಪ್‌ಗಳು ರೈಲು ಸೇವೆ ಪ್ರಯಾಣಿಕರಿಗೆ ಸಿಗಲಿದೆ.
ಬೀದರ್-ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲು (06540) ಪ್ರತೀ ಶನಿವಾರ ಮತ್ತು ಸೋಮವಾರ ಸಂಚರಿಸಲಿದೆ. ಮೊದಲು 2025 ನವೆಂಬರ್ 1ರವರೆಗೆ ಮಾತ್ರ ಕಾರ್ಯಾಚರಣೆಗೆ ನಿಗದಿಯಾಗಿತ್ತು. ಇದೀಗ ಇದರ ಅವಧಿಯನ್ನು 2025ರ ನವೆಂಬರ್ 3ರಿಂದ ಡಿಸೆಂಬರ್ 29ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ರೈಲು ಸಹ ಒಟ್ಟು 17 ಟ್ರಿಪ್‌ಗಳ ಸೇವೆ ಸಾರ್ವಜನಿಕರಿಗೆ ಒದಗಿಸಲಿದೆ.
ಪ್ರಯಾಣಿಕರು ರೈಲು ಸಮಯ ಮತ್ತು ಇತರ ವಿವರಗಳನ್ನು http://www.enquiry.indianrail.gov.in ಎನ್‌ಟಿಇಎಸ್ (NTES) ಆಪ್ ಅಥವಾ 139 ಸಂಖ್ಯೆಗೆ ಕರೆಮಾಡುವ ಮೂಲಕ ಪಡೆಯಬಹುದು ಎಂದು ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ ತಿಳಿಸಿದೆ. ಈ ನಿರ್ಧಾರದಿಂದ ಹಬ್ಬದ ದಿನಗಳಲ್ಲಿ ಪ್ರಯಾಣಿಕರ ಸೌಲಭ್ಯ ಹೆಚ್ಚಳವಾಗಲಿದ್ದು, ರಾಜ್ಯದ ಪ್ರಮುಖ ನಗರಗಳ ನಡುವೆ ಸಂಚಾರ ಸುಗಮಗೊಳ್ಳಲಿದೆ.
ಇತ್ತೀಚೆಗೆ ದೀಪಾವಳಿ ಹಾಗೂ ದಸರಾ ಪ್ರಯುಕ್ತ ಬೆಂಗಳೂರಿನಿಂದ ವಿವಿಧೆಡೆ ವಿಶೇಷ ರೈಲುಗಳ ಸೇವೆ ಬಿಡುಗಡೆ ಮಾಡಲಾಗಿತ್ತು. ಬೆಂಗಳೂರು-ಕಲಬುರಗಿಗೆ ವಿಶೇಷ ರೈಲುಗಳ ಸೇವೆ ಆರಂಭಿಸಲಾಗಿದೆ. ಅದರ ಬೆನ್ನಲ್ಲೆ ಬೀದರ್ ವರೆಗೆ ಬಿಟ್ಟಿದ್ದ ರೈಲುಗಳ ಸೇವೆ ವಿಸ್ತರಣೆ ಮಾಡುವ ಮೂಲಕ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದೆ.












Click it and Unblock the Notifications