ಅನೋಸ್ಮಿಯಾ ಕೋವಿಡ್-19 ಲಕ್ಷಣ? ಬೆಂಗಳೂರು ಮೂಲದ ಸಂಶೋಧಕರಿಂದ ಸರ್ವೇ
ಬೆಂಗಳೂರು, ಏಪ್ರಿಲ್ 24: ಜ್ವರ, ನೆಗಡಿ, ಶೀತ, ತಲೆ ನೋವು, ಉಸಿರಾಟದ ತೊಂದರೆ.. ಇವು ವಿಶ್ವದಾದ್ಯಂತ ಬಾಧಿಸುತ್ತಿರುವ ಕೋವಿಡ್-19 ರೋಗದ ಲಕ್ಷಣಗಳು. ಇವುಗಳ ಜೊತೆಗೆ ಅನೋಸ್ಮಿಯಾ (ವಾಸನೆ ಮತ್ತು ರುಚಿಯನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದು) ಕೂಡ ಕೋವಿಡ್-19 ರೋಗದ ಒಂದು ಲಕ್ಷಣ ಎಂದು ಪರಿಗಣಿಸಲಾಗುತ್ತಿದೆ.
ಹಾಗಾದ್ರೆ, ವಾಸನೆ ಮತ್ತು ರುಚಿಯನ್ನು ಕಂಡುಹಿಡಿಯುವ ಸಾಮರ್ಥ್ಯದಲ್ಲಿ ಬದಲಾವಣೆ ಕಂಡವರಿಗೆ ಕೊರೊನಾ ವೈರಸ್ ಸೋಂಕಿದೆ ಎಂದರ್ಥವೇ.? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸದ್ಯ ಅಧ್ಯಯನ ನಡೆಸಲಾಗುತ್ತಿದೆ.
ಜಗತ್ತಿನಾದ್ಯಂತ 600 ಸಂಶೋಧಕರನ್ನು ಒಳಗೊಂಡ ತಂಡ ಅನೋಸ್ಮಿಯಾ ಮತ್ತು ಕೋವಿಡ್-19 ಗೆ ಇರುವ ನಂಟಿನ ಕುರಿತು ಸರ್ವೇ ನಡೆಸುತ್ತಿದೆ. ಸಂಶೋಧಕರ ಪೈಕಿ ಭಾರತದಿಂದ ಬೆಂಗಳೂರು ಮೂಲದ ಅಮೇರಿಕಾ ಸಂಶೋಧಕ ಶನಾನ್.ಬಿ.ಓಲ್ಸಾನ್ ಕೂಡ ಇರುವುದು ವಿಶೇಷ.

ಭಾರತದಲ್ಲಿ ಸರ್ವೇ
ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಮತ್ತು ನ್ಯಾಷನಲ್ ಸೆಂಟರ್ ಆಫ್ ಬಯೋಲಾಜಿಕಲ್ ಸೈನ್ಸಸ್ ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ 42 ವರ್ಷ ವಯಸ್ಸಿನ ಶನಾನ್.ಬಿ.ಓಲ್ಸಾನ್, ಅನೋಸ್ಮಿಯಾ ಮತ್ತು ಕೋವಿಡ್-19 ಗೆ ಇರುವ ನಂಟಿನ ಕುರಿತು ಇತರೆ ಆರು ಮಂದಿಯ ಜೊತೆಗೆ ಭಾರತದಲ್ಲಿ ಸರ್ವೇ ನಡೆಸಲಿದ್ದಾರೆ.

50 ದೇಶಗಳಲ್ಲಿ ಸರ್ವೇ
ಕೋವಿಡ್-19 ನಿಂದ ಅನೋಸ್ಮಿಯಾಗೆ ಕಾರಣವಾಗುತ್ತಾ ಎಂಬುದರ ಕುರಿತು ಅಧ್ಯಯನ ನಡೆಸಲು 600 ನ್ಯೂರೋ ಬಯಾಲಜಿಸ್ಟ್ಸ್, ಡೇಟಾ ಸೈನ್ಟಿಸ್ಟ್ಸ್, ಸೆನ್ಸರಿ ರಿಸರ್ಚರ್ಸ್ ಮತ್ತು ಟೆಕ್ನೀಷಿಯನ್ಸ್ ಒಳಗೊಂಡ ತಂಡ 50 ದೇಶಗಳಲ್ಲಿ ಸರ್ವೇ ನಡೆಸುತ್ತಿದೆ.

ಭಾರತದಲ್ಲಿ ಸರ್ವೇ ಆರಂಭವಾಗಬೇಕಿದೆ
ಈಗಾಗಲೇ ಸಂಶೋಧಕರ ತಂಡ ಸರ್ವೇ ಮೂಲಕ 17,000 ಪ್ರತಿಕ್ರಿಯೆಗಳನ್ನು ಪಡೆದಿವೆ. ಭಾರತದಲ್ಲಿ ಸರ್ವೇ ಆರಂಭವಾಗಬೇಕಿದೆ. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಮತ್ತು ಗ್ಲೋಬಲ್ ಕನ್ಸೋರ್ಟಿಯಂ ಫಾರ್ ಕೀಮೋಸೆನ್ಸರಿ ರಿಸರ್ಚ್ ನಲ್ಲಿ ಇರುವ ವೈದ್ಯರು ಮತ್ತು ವಿಜ್ಞಾನಿಗಳು ಸರ್ವೇಯನ್ನ ಅಭಿವೃದ್ಧಿ ಪಡಿಸಿದ್ದಾರೆ.

ಸರ್ವೇ ಮೂಲಕ ಕಂಡುಬಂದಿರುವ ಅಂಶ
ಚೀನಾ, ಇಟಲಿ, ಯು.ಕೆ, ಬೆಲ್ಜಿಯಂ, ಫ್ರಾನ್ಸ್, ಸ್ಪೇನ್ ಮತ್ತು ಅಮೇರಿಕಾದಲ್ಲಿ ಈಗಾಗಲೇ ಸರ್ವೇ ನಡೆದಿದ್ದು, ಕೋವಿಡ್ 19 ಮತ್ತು ಅನೋಸ್ಮಿಯಾ ನಡುವೆ ಸಂಬಂಧ ಇರುವುದು ಪತ್ತೆಯಾಗಿದೆ.












Click it and Unblock the Notifications