Bengaluru Bandh; ಇಂದು ಬೆಂಗಳೂರು ಬಂದ್; ಆಟೋ, ಟ್ಯಾಕ್ಸಿ ಸಿಗಲ್ಲ
ಬೆಂಗಳೂರು, ಸೆಪ್ಟೆಂಬರ್ 11; ಬೆಂಗಳೂರು ನಗರ ಬಂದ್‌ಗೆ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರೆ ನೀಡಿದೆ. ಸೋಮವಾರ ನಗರದಲ್ಲಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗುವ ನಿರೀಕ್ಷೆ ಇದೆ. ಸುಮಾರು 6 ರಿಂದ 7 ಲಕ್ಷ ವಾಹನಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಅಂದಾಜಿಸಲಾಗಿದೆ.
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಸೆಪ್ಟೆಂಬರ್ 11ರ ಸೋಮವಾರ ಕರೆ ನೀಡಿರುವ ಬಂದ್‌ಗೆ ಸುಮಾರು 72 ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ. ಇದರಲ್ಲಿ ಆಟೋ, ಟ್ಯಾಕ್ಸಿ, ಖಾಸಗಿ ಶಾಲಾ ಬಸ್‌ಗಳು, ಐಟಿ ಕಂಪನಿಗಳ ಕ್ಯಾಬ್ ಮುಂತಾದವುಗಳು ಸೇರಿವೆ. ಆದ್ದರಿಂದ ನಗದಲ್ಲಿ ಇಂದು ಸಂಚಾರ ನಡೆಸಲು ಆಟೋ, ಟ್ಯಾಕ್ಸಿ ಸಿಗುವುದು ಅನುಮಾನ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಟ್ಯಾಕ್ಸಿಗಳು ಸಹ ಬಂದ್ ಬೆಂಬಲಿಸಿವೆ. ನಗರದಲ್ಲಿ ಬಿಎಂಟಿಸಿ ಬಸ್, ನಮ್ಮ ಮೆಟ್ರೋಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಆದ್ದರಿಂದ ಜನರ ಸಂಚಾರಕ್ಕೆ ಹೆಚ್ಚು ತೊಂದರೆ ಆಗುವುದಿಲ್ಲ ಎಂದು ನಿರೀಕ್ಷೆ ಮಾಡಲಾಗಿದೆ.
ಸಾರಿಗೆ ಸಚಿವರ ಸುದ್ದಿಗೋಷ್ಠಿ; ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭಾನುವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿದರು. "ಸೋಮವಾರ ಹೆಚ್ಚುವರಿ ಬಸ್‌ಗಳು ರಸ್ತೆಗೆ ಇಳಿಯಲಿವೆ ಈ ಕುರಿತು ಬಿಎಂಟಿಸಿ, ಕೆಎಸ್ಆರ್‌ಟಿಸಿಗಳ ಎಂಡಿಗಳ ಜೊತೆ ಮಾತನಾಡಿದ್ದೇನೆ. ಹೆಚ್ಚುವರಿ ಬಸ್ ಓಡಲಿದ್ದು, ಜನರ ಸಂಚಾರಕ್ಕೆ ಸಮಸ್ಯೆ ಆಗುವುದಿಲ್ಲ" ಎಂದರು.
"ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆಗಳ ಜೊತೆ ಈ ಹಿಂದೆಯೂ ಮಾತನಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಕೂಡ ಎರಡು ಬಾರಿ ಸಭೆ ನಡೆಸಿದ್ದೇವೆ. ಆದರೆ ಸಭೆಗೆ ಆಗಮಿಸದ ಕೆಲವು ಸಂಘಟನೆಗಳು ಬಂದ್ ಕರೆ ನೀಡಿವೆ. ಮುಷ್ಕರ ಮಾಡೇ ಮಾಡುತ್ತೇವೆ ಎನ್ನುವವರ ಬಗ್ಗೆ ಏನು ಹೇಳೋಣ?" ಎಂದು ಸಚಿವರು ತಿಳಿಸಿದರು.
"ಹೆಚ್ಚುವರಿ ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸಲಿವೆ. ಆಸ್ಪತ್ರೆ, ಶಾಲೆ, ವಿಮಾನ ನಿಲ್ದಾಣ, ಕಛೇರಿಗೆ ತೆರಳುವ ಜನರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಬೆಂಗಳೂರು ನಗರದಲ್ಲಿ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ನೀಡಿಲ್ಲ" ಎಂದು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
"ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸಲಿದೆ. ಬೈಕ್ ಟ್ಯಾಕ್ಸಿ ಸೇವೆ 2016ರಿಂದಲೇ ಇದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಹೆಚ್ಚಿನ ಸಮಸ್ಯೆ ಆಗಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ವಾಹನ ತೆರಿಗೆ ಜಾಸ್ತಿ ಮಾಡಿಲ್ಲ. ಈ ಹಿಂದೆ ಇದ್ದ ಪ್ರಸ್ತಾವನೆ ನಮ್ಮ ಸರ್ಕಾರ ಬಂದ ಮೇಲೆ ಜಾರಿಗೆ ಬಂದಿದೆ. ಒಕ್ಕೂಟದ ಸಮಸ್ಯೆ ಪರಿಹಾರಕ್ಕೆ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದೇವೆ" ಎಂದು ಸಚಿವರು ಹೇಳಿದರು.
ವಿಮಾನ ನಿಲ್ದಾಣಕ್ಕೆ ಬಸ್; ಭಾನುವಾರ ರಾತ್ರಿ ಮಧ್ಯರಾತ್ರಿ 12 ರಿಂದ ಸೋಮವಾರ ರಾತ್ರಿ 12ರ ತನಕ ಬಂದ್ ಮಾಡುತ್ತೇವೆ ಎಂದು ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಹೇಳಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ಸ್ಟಾಂಡ್‌ನಲ್ಲಿ ಹಳದಿ ಬೋರ್ಡ್ ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸಬೇಡಿ ಎಂದು ಮನವಿ ಮಾಡಲಾಗುತ್ತಿದೆ.
ಬಿಎಂಟಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯು ವಜ್ರ ಹವಾನಿಯಂತ್ರಿತ ಬಸ್‌ಗಳನ್ನು ಓಡಿಸುತ್ತದೆ. ವಿಮಾನ ನಿಲ್ದಾಣದ ಟ್ಯಾಕ್ಸಿ ಸೇವೆ ಬಂದ್ ಆಗುವ ನಿರೀಕ್ಷೆ ಇರುವ ಕಾರಣ ಬಸ್‌ಗಳ ಹೆಚ್ಚುವರಿ ಟ್ರಿಪ್‌ಗಳನ್ನು ಓಡಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.
ಪ್ರತಿನಿತ್ಯ ಸುಮಾರು 500 ಟ್ರಿಪ್‌ಗಳಲ್ಲಿ ಬಿಎಂಟಿಸಿ ಬಸ್‌ಗಳು ಏರ್‌ಪೋರ್ಟ್‌ಗೆ ಸಂಚಾರ ನಡೆಸುತ್ತವೆ. ಸೋಮವಾರ ಟ್ಯಾಕ್ಸಿಗಳ ಸಂಚಾರ ಬಂದ್ ಆಗುವ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ 100 ಟ್ರಿಪ್‌ಗಳಲ್ಲಿ ಬಸ್‌ಗಳು ಸಂಚಾರ ನಡೆಸಲಿವೆ. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.












Click it and Unblock the Notifications