Bengaluru Bandh: ಜುಲೈ 27ರಂದು ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರಿಂದ ಬೆಂಗಳೂರು ಬಂದ್, ಪ್ರತಿಭಟನೆ
ಬೆಂಗಳೂರು, ಜುಲೈ 20: ಕರ್ನಾಟಕ ಸರ್ಕಾರದ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದೆ. ಪುರುಷರು ಇದೇ ಜುಲೈ 27 ರಂದು ಗುರುವಾರ ಆಟೋ, ಟ್ಯಾಕ್ಸಿ ಅಥವಾ ಖಾಸಗಿ ಬಸ್ ನೆಚ್ಚಿಕೊಂಡು ಎಲ್ಲಿಗಾದರೂ ಪ್ರಯಾಣ ಮಾಡುವವರಿದ್ದರೆ ಈಗಲೇ ರದ್ದು ಮಾಡಿಬಿಡಿ. ಇಲ್ಲವೇ ಪರ್ಯಾಯ ಸಾರಿಗೆ ಅವಲಂಬಿಸಬೇಕಿದೆ. ಕಾರಣ ಅಂದು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಬಸ್, ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು 'ಬೆಂಗಳೂರು ಬಂದ್' (Bengaluru Bandh) ಗೆ ಕರೆ ನೀಡಿವೆ.
ಜೂನ್ 11ರಂದು ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಚಾಲನೆ ನೀಡುವ ಮೂಲಕ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿತು. ಇದರಿಂದ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರ ಬದುಕು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟಗಳು ಸಭೆ ನಡೆಸಿ ಬಂದ್ ಗೆ ತೀರ್ಮಾನಿಸಿವೆ.

ಈ ಕುರಿತು ಒಕ್ಕೂಟಗಳ ಸದಸ್ಯ ಎಸ್ ನಟರಾಜ ಪ್ರತಕ್ರಿಯಿಸಿ, ಪ್ರತಿ ಒಕ್ಕೂಟವು ತನ್ನದೇ ಆದ ಬೇಡಿಕೆಗಳನ್ನು ಹೊಂದಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ ನಂತರ ಖಾಸಗಿ ಬಸ್ ಸಾಕಷ್ಟು ತೊಂದರೆಗೆ ಸಿಲುಕಿದೆ. ಸರ್ಕಾರ ಸದರಿ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗೂ ವಿಸ್ತರಿಸಬೇಕು ಎಂದು ಅವರು ಪ್ರಮುಖ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಸ್ಪಂದಿಸದ ಸರ್ಕಾರ: ಬಂದ್‌ಗೆ ಒಕ್ಕೂಟಗಳ ಕರೆ
ಒಂದು ವಾರದದಿಂದ ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಭೇಟಿ ಮಾಡಿ ಖಾಸಗಿ ಬಸ್ ಸಂಸ್ಥೆ ಮನವಿ ಮಾಡಿತ್ತು. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗಡುವು ಸಹ ನೀಡಿತ್ತು. ಆದರೆ ವಾರ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿಲ್ಲ. ಈ ಸಂಬಂಧ ಅಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್‌ಗೆ ಕರೆ ನೀಡಿದ್ದಾರೆ.

ಶಕ್ತಿ ಯೋಜನೆ ಆಟೋ ಟ್ಯಾಕ್ಸಿ ಚಾಲಕರ ಹೊಟ್ಟೆಯ ಮೇಲೆ ಹೊಡೆದಿದೆ. ಬದುಕು ನಡೆಸುವುದು, ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದ್ದು, ಸರ್ಕಾರ ಆರ್ಥಿಕವಾಗಿ ಸಹಾಯ ಮಾಡಬೇಕು. ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ.
ರೈಲು ನಿಲ್ದಾಣದಿಂದ ಫ್ರಿಡಂ ಪಾರ್ಕ್ ವರೆಗೆ ಮೆರವಣಿಗೆ
ಗುರುವಾರ ಜುಲೈ 27 ರಂದು ಖಾಸಗಿ ಸಾರಿಗೆ ಒಕ್ಕೂಟಗಳು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲು ಮುಂದಾಗಿವೆ. ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆಯು ಒಂದು. ಅಂದುಕೊಂಡಂತೆ ಅಧಿಕಾರಕ್ಕೆ ಬಂದ ಕೂಡಲೇ ಜೂನ್ 11ರಂದು ಮೊದಲ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿತು.
ಅಂದಿನಿಂದ ಸರ್ಕಾರಿ ವ್ಯಾಪ್ತಿಯ ಬಿಎಂಟಿಸಿ, ಕೆಸ್‌ಆರ್‌ಟಿಸಿ, ಎನ್‌ಡಬ್ಲುಕೆಆರ್‌ಟಿಸಿ, ಕೆಕೆಆರ್‌ಟಿಸಿ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡುತ್ತಿದ್ದಾರೆ. ಇದರಿಂದ ಆಟೋ ಚಾಲಕರು, ಟ್ಯಾಕ್ಸಿ ಗಳಿಗೆ, ಖಾಸಗಿ ಬಸ್‌ಗಳಿಗೆ ಪ್ರಯಾಣಿಕರೇ ಇಲ್ಲದಂತಾಗಿ ಆರ್ಥಿಕ ನಷ್ಟ ಅನುಭವಿಸವಂತಾಗಿದೆ ಎಂದು ಒಕ್ಕೂಟಗಳು ಅಳಲು ತೊಂಡಿಕೊಂಡಿವೆ.












Click it and Unblock the Notifications