Vande Bharat Express: ಬೆಂಗಳೂರು - ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬಿಟ್ಟರೂ ತಪ್ಪದ ಸಂಕಷ್ಟ!
Vande Bharat Express: ಬೆಂಗಳೂರು ಹಾಗೂ ಬೆಳಗಾವಿಯ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸಲಾಗಿದೆ. ಇದೇ ವರ್ಷ ಆಗಸ್ಟ್ 10ರಂದು ಬೆಂಗಳೂರು ಹಾಗೂ ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಆದರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯ ನಂತರವೂ ಮತ್ತೊಂದು ಪ್ರಮುಖ ಸಮಸ್ಯೆ ಈ ಭಾಗದಲ್ಲಿ ಎದುರಾಗಿದೆ.
ಬೆಂಗಳೂರು ಹಾಗೂ ಬೆಳಗಾವಿಯ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಪ್ರಾರಂಭವಾಗುವುದರಿಂದ ಈ ಭಾಗದಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿತ್ತು. ಅಲ್ಲದೇ ಈ ಭಾಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸಿರುವುದರಿಂದ ಅನುಕೂಲವಾಗಿ ದೆಯಾದರೂ ಈ ಭಾಗದಲ್ಲಿ ಪ್ರಯಾಣಿಸುವ ರೈಲು ಪ್ರಯಾಣಿಕರ ಸಂಕಷ್ಟಗಳು ತಪ್ಪುತ್ತಿಲ್ಲ.

ಬೆಂಗಳೂರು ಹಾಗೂ ಬೆಳಗಾವಿಯ ನಡುವೆ ನಿತ್ಯವೂ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಆದರೆ ರೈಲು ಸೇವೆಗಳು ಕಡಿಮೆ ಇವೆ ಎಂದು ಈ ಭಾಗದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಹಬ್ಬದ ದಿನಗಳಲ್ಲಿ ಬೆಂಗಳೂರಿನಿಂದ ಕರ್ನಾಟಕದ ವಿವಿಧ ಭಾಗಗಳಿಗೆ ಅದರಲ್ಲೂ ಉತ್ತರ ಕರ್ನಾಟಕದ ಪ್ರದೇಶ ಅಥವಾ ನಗರಗಳಿಗೆ ಪ್ರಯಾಣ ಮಾಡುವುದು ಕಷ್ಟವಾಗುತ್ತಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ದೂರಿದ್ದಾರೆ.
ಈ ಸಂಬಂಧ ಫೇಸ್‌ಬುಕ್‌ನಲ್ಲಿ "Belagavi - ಬೆಳಗಾವಿ" ಎನ್ನುವ ಖಾತೆಯಿಂದ ಪೋಸ್ಟ್‌ವೊಂದನ್ನು ಮಾಡಲಾಗಿದೆ. ಈ ಪೋಸ್ಟ್‌ಗೆ ಹಲವು ಕನ್ನಡಿಗರು ಪ್ರತಿಕ್ರಿಯಿಸಿದ್ದಾರೆ. ನಿನ್ನೆ ರಾತ್ರಿ 9 ಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದ " ಬೆಳಗಾವಿ ಎಕ್ಸ್‌ಪ್ರೆಸ್ " ರೈಲಿನ Reservation ಬೋಗಿಗಳ ಪರಿಸ್ಥಿತಿ ಇದು ..
ಬೆಂಗಳೂರಿನಿಂದ ಬೆಳಗಾವಿವರೆಗೆ ಅದೆಷ್ಟೋ ಜನ ಪಾಪ ನಿಂತು ಪ್ರಯಾಣ ಮಾಡಿದ್ದಾರೆ. ಇನ್ನು ಕೆಲವರು ಜಾಗ ಸಿಕ್ಕಲ್ಲಿ ಕುಳಿತು ಬಂದಿದ್ದಾರೆ.
ಹಬ್ಬದ ದಿನಗಳಲ್ಲಿ ಕೇವಲ ಒಂದು Special Train ಬಿಡ್ತಾರೆ, ಅದು ನಮ್ಮ ಬೆಳಗಾವಿ ಜಿಲ್ಲೆಯವರಿಗೆ ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಈ ಉಪ್ಪಿನಕಾಯಿ ಕೂಡ ಸಿಗಲ್ಲಾ ಅನ್ನೋದು ವಿಪರ್ಯಾಸ. ಖಾಸಗಿ ಬಸ್ಸುಗಳ ಟಿಕೆಟ್ ಉಳಿದ ದಿನಗಳಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು, ಸರ್ಕಾರಿ ಬಸ್ಸುಗಳಲ್ಲಿ ಜಾಗ ಇರಲ್ಲ. 😓😓 ಎಂದು ಪೋಸ್ಟ್ ಮಾಡಲಾಗಿದೆ.
ಸಂಗಮೇಶ್ ಎನ್ನುವವರು, ಕಲಬುರಗಿಗೂ ಇದೆ ಗತಿ ಇದೆಲ್ಲಾ ಬೆಂಗಳೂರಿನವರಿಗಾಗಲಿ ಅಥವಾ ರಾಜ್ಯದ ರಾಜಕಾರಣಿಗಳಿಗಾಗಲಿ ಯಾವಾಗ ತಿಳಿತದೋ ದೇವರೇ ಬಲ್ಲ.
ಪ್ರವಾಹ ವೀಕ್ಷಣೆಗಂತ ವಿಮಾನದಲ್ಲಿ ತಿರುಗಾಡಿದ್ದೇ ಆಯ್ತು ಪರಿಹಾರ ಸಿಗೋದು ಅಷ್ಟರಲ್ಲಿಯೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭೀಮಾ ಎನ್ನುವವರು, ನಮ್ಮ ಕರ್ನಾಟಕದ ಸುಪ್ರಸಿದ್ಧ ಎಂಪಿಗಳಿಗೆ ಹೊರ ರಾಜ್ಯದ ನಗರಗಳಿಗೆ ಹೊಸ ರೈಲು ಬೇಕಾದರೆ ಕೇಳಿ ಕೇಂದ್ರ ರೈಲ್ವೆ ಸಚಿವರಿಗೆ 10 ಸಲ ಮನವಿ ಮಾಡಿ, 10 ಟ್ರೈನ್ ಬಿಡ್ತಾರ.. ಆದ್ರ ನಮ್ ಉತ್ತರ ಕರ್ನಾಟಕದ ಜನರ ಸಲುವಾಗಿ ಒಂದ್ ಟ್ರೈನ್ ಬಿಡಾಕ ಅಳತಾರ.. ಅವರಿಗೆಲ್ಲ ಕನ್ನಡಿಗರ ಕಷ್ಟ ಎಲ್ಲಿ ಅರ್ಥ ಆಗಬೇಕು ಎಂದಿದ್ದಾರೆ.












Click it and Unblock the Notifications