ಬೆಂಗಳೂರು: ಏರ್‌ಪೋರ್ಟ್‌ನ ಸ್ಕ್ಯಾನರ್‌ನಿಂದ ತಪ್ಪಿಸಿಕೊಳ್ಳಲು ಬಾಯಲ್ಲೇ 82 ಗ್ರಾಂ ಚಿನ್ನ ಚಿನ್ನ ಬಚ್ಚಿಟ್ಟಿದ್ದ ಭೂಪ
ಬೆಂಗಳೂರು: ಚಿನ್ನವನ್ನು ಕಳ್ಳಸಾಗಣೆ ಮಾಡಲು ಏನೆಲ್ಲಾ ಹೊಸ ಹಾಗೂ ವಿಚಿತ್ರ ಐಡಿಯಾಗಳನ್ನ ಹುಡುಕುತ್ತಾರೆ ಎನ್ನುವುದಕ್ಕೆ ಇಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯೇ ಉದಾಹರಣೆ. ದೇಹದ ಒಳಭಾಗದಲ್ಲಿ, ಒಳ ಉಡುಪುಗಳಲ್ಲಿ, ಬೂಟುಗಳಲ್ಲಿ ಚಿನ್ನ ಬಚ್ಚಿಟ್ಟು ಸಿಕ್ಕಿಬೀಳುವವರ ಬಗ್ಗೆ ನಾವು ಆಗಾಗ ಸುದ್ದಿಯಲ್ಲಿ ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಭದ್ರತಾ ತಪಾಸಣೆಯ ಸ್ಕ್ಯಾನರ್ ಕಣ್ಣಿಗೆ ಮಣ್ಣೆರಚಲು ಬರೋಬ್ಬರಿ 82 ಗ್ರಾಂ ತೂಕದ ಚಿನ್ನದ ಕ್ಯಾಪ್ಸುಲ್‌ಗಳನ್ನ ತನ್ನ ಬಾಯಲ್ಲಿಯೇ ಗುಟ್ಟಾಗಿ ಬಚ್ಚಿಟ್ಟುಕೊಂಡು ಬಂದಿದ್ದ.
ಆದರೆ ಆತನ ಈ ಅತಿ ಬುದ್ಧಿವಂತಿಕೆಯ ಪ್ಲಾನ್ ಸಿಐಎಸ್‌ಎಫ್ ಅಧಿಕಾರಿಗಳ ಪ್ಲಾಪ್ ಆಗಿದೆ.
ಬುಧವಾರ (ಆಗಸ್ಟ್ 26) ಮುಂಜಾನೆ ದುಬೈನಿಂದ ಬೆಂಗಳೂರಿಗೆ ಬಂದಿಳಿದ ಮೊಹಮ್ಮದ್ ಸಿರಾಜ್ ಎಂಬ ಭಾರತೀಯ ಮೂಲದ ವ್ಯಕ್ತಿಯೇ ಈ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪಿ. ಈತ ಮುಂಜಾನೆ 4:17ರ ಸುಮಾರಿಗೆ ಇಂಡಿಗೋ ವಿಮಾನದ ಮೂಲಕ ದುಬೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ.

ನಂತರ ಆತ ವಿಮಾನ ನಿಲ್ದಾಣದ ಟರ್ಮಿನಲ್ 1 ರಿಂದ ಬೆಳಗ್ಗೆ 9:20ರ ಇಂಡಿಗೋ ವಿಮಾನ ಮೂಲಕ ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ದೇಶೀಯವಾಗಿ ಪ್ರಯಾಣ ಬೆಳೆಸಬೇಕಿತ್ತು. ಇದಕ್ಕಾಗಿ ಆತ ವಿಮಾನ ಹತ್ತುವ ಮುನ್ನ ನಡೆಯುವ ಕಡ್ಡಾಯ ಭದ್ರತಾ ತಪಾಸಣೆಗೆ ಹಾಜರಾಗಿದ್ದ. ಈ ಸಂದರ್ಭದಲ್ಲಿ ಆತನ ಬಣ್ಣ ಬಯಲಾಗಿದೆ.
ಬಾಯಲ್ಲಿ ಚಿನ್ನದ ಕ್ಯಾಪ್ಸುಲ್ ಪತ್ತೆ
ಟರ್ಮಿನಲ್ 1 ರ ತಪಾಸಣಾ ಕೇಂದ್ರದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಎಂದಿನಂತೆ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ಸಾಲಿನಲ್ಲಿ ನಿಂತಿದ್ದ ಮೊಹಮ್ಮದ್ ಸಿರಾಜ್, ಭದ್ರತಾ ಅಧಿಕಾರಿಗಳು ಕೇಳಿದ ಸಾಮಾನ್ಯ ಪ್ರಶ್ನೆಗಳಿಗೆ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಆತ ಬಾಯಿ ತೆರೆದು ಮಾತನಾಡಲು ಪರದಾಡುತ್ತಿದ್ದ ಹಾಗೂ ಆತನ ಹಾವಭಾವ ಅನುಮಾನಾಸ್ಪದವಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ತಪಾಸಣಾ ಕೇಂದ್ರದಲ್ಲಿದ್ದ ಸಿಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ದೀಪಕ್ ಕುಮಾರ್ ಶರ್ಮಾ ಅವರಿಗೆ ಆತನ ಮೇಲೆ ಅನುಮಾನ ಬಂದಿದೆ.
ಕೂಡಲೇ ಅವರು ಸಂಬಂಧಪಟ್ಟ ಹಿರಿಯ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಆತನನ್ನು ತಡೆದು ನಿಲ್ಲಿಸಿ, ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಆತ ತನ್ನ ಬಾಯಿಯೊಳಗೆ ಏನನ್ನೋ ಬಚ್ಚಿಟ್ಟುಕೊಂಡಿರುವುದು ಗೊತ್ತಾಗಿದೆ. ಬಾಯಿ ತೆರೆಸಿ ಪರಿಶೀಲನೆ ನಡೆಸಿದಾಗ, ಬಾಯಿಯೊಳಗೆ ಸುಮಾರು 82 ಗ್ರಾಂ ತೂಕದ ಎರಡು ಹಳದಿ ಲೋಹ ಅಂದರೆ ಚಿನ್ನದ ಕ್ಯಾಪ್ಸುಲ್‌ಗಳು ಪತ್ತೆಯಾಗಿವೆ.
ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಬಾಡಿ ಸ್ಕ್ಯಾನರ್‌ಗಳು ವ್ಯಕ್ತಿಯ ಭುಜದ ಮೇಲ್ಭಾಗವನ್ನು ಸ್ಕ್ಯಾನ್ ಮಾಡುವುದಿಲ್ಲ ಎಂದು ತಪ್ಪಾಗಿ ತಿಳಿದುಕೊಂಡಿದ್ದ ಈತ, ಭದ್ರತಾ ತಪಾಸಣೆಯ ಸಮಯದಲ್ಲಿ ಚಿನ್ನವನ್ನ ಬಾಯಲ್ಲಿ ಇಟ್ಟುಕೊಂಡರೆ ಯಾವ ಯಂತ್ರಕ್ಕೂ ಸಿಕ್ಕಿಬೀಳುವುದಿಲ್ಲ ಎಂದು ಭಾವಿಸಿದ್ದ. ಆದರೆ ತಂತ್ರಜ್ಞಾನ ಮೀರಿಸುವಂತಹ ಸಿಐಎಸ್‌ಎಫ್ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಆತನ ಆಟ ನಡೆದಿಲ್ಲ.
Gold Capsules Found in Passenger’s Mouth at Bengaluru Airport
— Gummalla Lakshmana (@GUMMALLALAKSHM3) August 26, 2026
CISF personnel at Kempegowda International Airport found two yellow-metal capsules weighing 82g concealed in a passenger’s mouth. Mohd Siraj arrived from Dubai and was questioned before flying to Ghaziabad. #CISF pic.twitter.com/k4vQow6c7m
ಆರೋಪಿಯಿಂದ ಚಿನ್ನವನ್ನು ವಶಪಡಿಸಿಕೊಂಡಿರುವ ಸಿಐಎಸ್‌ಎಫ್ ಅಧಿಕಾರಿಗಳು, ಆತನನ್ನು ಹೆಚ್ಚಿನ ವಿಚಾರಣೆ ಮತ್ತು ಮುಂದಿನ ಕಾನೂನು ಕ್ರಮಕ್ಕಾಗಿ ಕೆಐಎ ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಚಿನ್ನವನ್ನ ಎಲ್ಲಿಂದ, ಯಾರಿಂದ ತರಲಾಗಿತ್ತು ಮತ್ತು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಯಾರಿಗೆ ತಲುಪಿಸಬೇಕಿತ್ತು ಎಂಬ ಜಾಲದ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಮುಖ್ಯ ವಿಮಾನ ನಿಲ್ದಾಣ ಭದ್ರತಾ ಅಧಿಕಾರಿ ಹಾಗೂ ಡಿಐಜಿ ಮಂಜುನಾಥ್ ಹೆಚ್. ಅವರ ನೇತೃತ್ವದಲ್ಲಿ ಸಿಐಎಸ್‌ಎಫ್ ತಂಡವು ಕೇವಲ ಒಂದು ವಾರದ ಅಂತರದಲ್ಲಿ ಭೇದಿಸಿದ ಎರಡನೇ ಚಿನ್ನ ಕಳ್ಳಸಾಗಣೆ ಪ್ರಕರಣ ಇದಾಗಿದೆ. ಇದಕ್ಕೂ ಮುನ್ನ, ಆಗಸ್ಟ್ 20ರಂದು ಬ್ಯಾಂಕಾಕ್‌ನಿಂದ ಟರ್ಮಿನಲ್ 2ಕ್ಕೆ ಬಂದಿಳಿದು ಅಹಮದಾಬಾದ್‌ಗೆ ತೆರಳಲು ಮುಂದಾಗಿದ್ದ ಇಬ್ಬರು ಕಳ್ಳಸಾಗಣೆದಾರರನ್ನು ಅಧಿಕಾರಿಗಳು ಬಂಧಿಸಿದ್ದರು.
ಅವರು ತಮ್ಮ ಪ್ಯಾಂಟ್‌ನೊಳಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ರಹಸ್ಯ ಜೇಬಿನಲ್ಲಿ 260 ಗ್ರಾಂ ಚಿನ್ನವನ್ನು ಪುಡಿಯ ರೂಪದಲ್ಲಿ ಬಚ್ಚಿಟ್ಟು ಸಿಕ್ಕಿಬಿದ್ದಿದ್ದರು. ಅವರ ಅನುಮಾನಾಸ್ಪದ ನಡವಳಿಕೆಯನ್ನು ಕಂಡು ದೈಹಿಕ ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದರು. ಸದ್ಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಹಾಗೂ ದೇಶೀಯ ಎರಡೂ ಟರ್ಮಿನಲ್‌ಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.


Click it and Unblock the Notifications
