BMTC: ಏರ್‌ಪೋರ್ಟ್‌ನಲ್ಲಿ ಬಸ್ ಬೇಗಳ ಇಳಿಕೆ, ಪ್ರಯಾಣಿಕರಿಗೆ ಅನ್ಯಾಯ, ಖಾಸಗಿ ಟ್ಯಾಕ್ಸಿಗಳಿಗೆ ಉತ್ತೇಜನ!
ಬೆಂಗಳೂರು: ದೇವನಹಳ್ಳಿಯಲ್ಲಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ (KIA) ನಗರದ ದೂರದ ಭಾಗಗಳಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಜನಪ್ರಿಯ ವಾಯು ವಜ್ರ ಬಸ್‌ಗಳು ಅತ್ಯುತ್ತಮ ಸೇವೆ ನೀಡುತ್ತಿವೆ. ಆದರೆ ಈ ಬಸ್‌ಗಳನ್ನು ಹೆಚ್ಚಿಸುವ ಹೊತ್ತಿಗೆ ಸಮಸ್ಯೆ ಎದುರಾಗಿದೆ. ಏರ್‌ಪೋರ್ಟ್‌ನಲ್ಲಿ ಬಸ್ ನಿಲುಗಡೆಗೆ ಇದ್ದ ಬಸ್ ಬೇಗಳ ಸಂಖ್ಯೆ ಇಳಿಕೆ ಮಾಡಲಾಗಿದೆ. ಈ ಮೂಲಕ ಸಾರ್ವಜನಿಕ ಸಾರಿಗೆ ಬದಲು ಖಾಸಗಿ ಟ್ಯಾಕ್ಸಿಗಳಿಗೆ ಉತ್ತೇಜನ ನೀಡಲು ಬಿಐಎಎಲ್ ಮುಂದಾಗಿದೆ ಎಂಬ ಅನುಮಾನ ಮೂಡಿದೆ.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಬಸ್ ಬೇಗಳ ಸಂಖ್ಯೆಯನ್ನು ಕಡಿಮೆ ಮಡಲಾಗಿದೆ. ಹೀಗಾಗಿ ಹೆಚ್ಚುವರಿ ಬಸ್ ಟ್ರಿಪ್ ಸೇವೆಗಳ ನಿರ್ವಹಿಸುವ ಬಿಎಂಟಿಸಿ ಉದ್ದೇಶಕ್ಕೆ ಹಿನ್ನಡೆ ಆಗಿದೆ. ಬಿಎಂಟಿಸಿ ಅವಲಂಬಿತ ವಿಮಾನಯಾನ ಪ್ರಯಾಣಿಕರಿಗೆ ಇದರಿಂದ ಅನ್ಯಾಯವಾಗುತ್ತಿದೆ. ಬಿಎಂಟಿಸಿ 50 ಹೆಚ್ಚುವರಿ ಬಸ್‌ಗಳನ್ನು ಸೇರಿಸಲು ಚಿಂತನೆ ನಡೆಸಿತ್ತು. ಆದರೆ ಟರ್ಮಿನಲ್ ಒಂದರಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗಿದೆ ಎಂದು TOI ವರದಿ ಮಾಡಿದೆ.

ಕಾರ್ಯಾಚರಣೆಗೆ ಅಗತ್ಯ ಸ್ಥಳ ಇಲ್ಲದಿದ್ದಾಗ ಹೆಚ್ಚುವರಿ ಬಸ್‌ಗಳನ್ನು ಬಿಡುವುದರಲ್ಲಿ ಅರ್ಥವೇ ಇಲ್ಲ. ಹಾಲಿ ಬಸ್‌ಗಳಿಗೆ ಸ್ಥಳಾವಕಾಶ ಇಲ್ಲದಾಗಿದೆ. ಅದರಲ್ಲೇ ಹೆಚ್ಚು ಟ್ರಿಪ್‌ಗಳ ಸೇವೆಯ್ನು ನೀಡಲಾಗುತ್ತಿತ್ತು. ಇದೀಗ ಬಸ್ ಬೇ ಕಡಿತದಿಂದ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಟ್ಯಾಕ್ಸಿಗಳತ್ತ ಮುಖ ಮಾಡುವಂತಾಗಿದೆ. ಇದು ಬಿಎಂಟಿಸಿಗೆ ಸುಣ್ಣ, ಖಾಸಗಿ ಟ್ಯಾಕ್ಸಿಗಳಿಗೆ ಬೆಣ್ಣೆ ಎಂಬಂತಹ ವರ್ತನೆಯನ್ನು ಬಿಐಎಎಲ್ ತೋರಿಸಿದೆ.
22 ಮಾರ್ಗಗಳು, 156 ವಾಯು ವಜ್ರ ಬಸ್ ಸೇವೆ
ಬಸ್ ಬೇ ಸಂಪೂರ್ಣ ಸಾಲಗಳನ್ನು ತೆಗೆದು ಹಾಕಿ ಅಲ್ಲಿ ಖಾಸಗಿ ಟ್ಯಾಕ್ಸಿ ನಿರ್ವಾಹಕರಿಗೆ ಸ್ಥಳ ಹಂಚಿಕೆ ಮಾಡಲಾಗಿದೆ. ಹೀಗಾಗಿ ಟರ್ಮಿನಲ್ 1ರಲ್ಲಿದ್ದ ಬಸ್ ಬೇಗಳ ಸಂಖ್ಯೆ 14 ರಿಂದ ಕೇವಲ ಏಳಕ್ಕೆ ಇಳಿಕೆ ಆಯಿತು. ಇದು ಬಿಎಂಟಿಸಿ ಕಾರ್ಯಾಚರಣೆಗೆ ಅಡಚಣೆ ಉಂಟು ಮಾಡಿದೆ. ಸದ್ಯ 22 ಮಾರ್ಗಗಳಲ್ಲಿ 156 ವಾಯು ವಜ್ರ ಬಸ್‌ಗಳು ನಿತ್ಯ ಸೇವೆ ನೀಡುತ್ತಿವೆ. ಬೆಂಗಳೂರು ನಾನಾ ಭಾಗಗಳಿಂದ ಏರ್‌ಪೋರ್ಟ್‌ಗೆ ಕರೆದೊಯುತ್ತಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದಂತೆಲ್ಲ, ಹೆಚ್ಚುವರಿ ವಾಯು ವಜ್ರ ಬಸ್‌ಗಳ ಅಗತ್ಯವಿತ್ತು.
ಲಕ್ಷಾಂತರ ರೂಪಾಯಿ ಆದಾಯ ನಷ್ಟ
ಏರ್‌ಪೋರ್ಟ್ ಬಸ್ ಪ್ರಯಾಣಿಕರಲ್ಲಿ ಸುಮಾರು ಶೇಕಡಾ 80 ರಷ್ಟು ಜನರು ವಾಯು ವಜ್ರ ಬಸ್‌ಗಳನ್ನು ಹತ್ತುತ್ತಾರೆ. ಇದು ಬಿಎಂಟಿಸಿಗೂ ಮುಖ್ಯ ಆದಾಯ ಮಾರ್ಗವು ಆಗಿತ್ತು. ಬಸ್ ಬೇಗಳಲ್ಲಿನ ಕಡಿತದಿಂದ ನಿತ್ಯ 1,000 ಕ್ಕೂ ಹೆಚ್ಚು ಪ್ರಯಾಣಿಕರು ಕಡಿಮೆ ಆಗಿದ್ದಾರೆ. ನಿತ್ಯ 3-4 ಲಕ್ಷ ರೂ.ಗಳ ಆದಾಯ ನಷ್ಟವಾಗಿದೆ. ಏರ್‌ಪೋರ್ಟ್‌ನಿಂದ 65 ಕಿ.ಮೀಗೂ ಹೆಚ್ಚು ದೂರದ ಅತ್ತಿಬೆಲೆ ಮತ್ತು ಜಿಗಣಿಯಿಂದಲೂ ಜನ ಬಿಎಂಟಿಸಿ ಮೂಲಕ ಬರುತ್ತಿದ್ದರು. ಬಿಎಂಟಿಸಿ ಸೇವೆಗೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದರು. ಬಿಐಎಎಲ್ ನಿರ್ಧಾರದಿಂದ ಕಡಿಮೆ ದರದ ಬಿಎಂಟಿಸಿ ಬಸ್ ಬಿಟ್ಟು, ದುಬಾರಿಯ ಟ್ಯಾಕ್ಸಿ ಹತ್ತಬೇಕಾಗಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಏರ್‌ಪೋರ್ಟ್‌ನಿಂದ ಬಸ್ ಬೇ ಎರಡು ಸಾಲು ಬಳಸಿಕೊಂಡು 532 ನಿರ್ಗಮನ ಸೇವೆ ನೀಡಿದ್ದೇವೆ. ಕಡಿಮೆ ಸಾಲುಗಳು ಇದ್ದರೆ ಪ್ರಯಾಣಿಕರ ದಟ್ಟಣೆ ಬಹುಬೇಗ ಆಗುತ್ತದೆ. ಬಸ್‌ಗಳು ಟರ್ಮಿನಲ್‌ಗೆ ಬಂದ ಕೆಲವೇ ನಿಮಿಷಗಳಲ್ಲಿ ಬರುವ ಪ್ರಯಾಣಿಕರನ್ನು ತಪ್ಪಿಸಲು ಬಸ್‌ಗಳಿಗೆ ಹೊರಡುವಂತೆ ಒತ್ತಾಯಿಸಲಾಗುತ್ತದೆ. ಮೊದಲು ಪ್ರಯಾಣಿಕರಿಗೆ ಹೆಚ್ಚಿನ ಸಮಯ ಕಾಯಬಹುದಿತ್ತು. ಇದೀಗ ಬಸ್ ಓಡಿಸುತ್ತಿದ್ದಂತೆ ಜನ ಟ್ಯಾಕ್ಸಿ ಆಯ್ಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
ಬಿಎಂಟಿಸಿ ಇನ್ನೂ ಬೇರೆ ಬೇರೆ ಸ್ಥಳಗಳಿಂದ ಸೇವೆ ನೀಡಲು ಸಿದ್ಧವಿದೆ. ಬಿಐಎಎಲ್ ಟರ್ಮಿನಲ್‌ನಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳದ ಅವಕಾಶ ನೀಡಬೇಕಿದೆ. ಈ ಬಗ್ಗೆ ನಿಗಮವು ಏರ್‌ಪೋರ್ಟ್ ಅಧಿಕಾರಿಗಳಿಗೆ ವಿನಂತಿಸಿದೆ ಎಂದರು.












Click it and Unblock the Notifications