ಬೆಂಗಳೂರಿನ ಬೈಯಪ್ಪನಹಳ್ಳಿ ಚಹರೆಯನ್ನೇ ಬದಲಿಸಲಿದೆ ರೋಟರಿ ಫ್ಲೈಓವರ್- ನೂರಾರು ಕೋಟಿ ವೆಚ್ಚ, ತಡೆರಹಿತ ಸಂಪರ್ಕ- ಯಾರಿಗೆ ಅನುಕೂಲ?
ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದ ನಡುವೆ ಬಿಗ್- ಟಿಕೆಟ್ ರೋಟರಿ ಮೇಲ್ಸೇತುವೆಯನ್ನು ಬಿಬಿಎಂಪಿ ಘೋಷಿಸಿದೆ. ಇದರಿಂದ ಯಾರಿಗೆ ಅನುಕೂಲ? ಎಷ್ಟು ವೆಚ್ಚ? ತಿಳಿಯಿರಿ.
ಬೆಂಗಳೂರು, ಮಾರ್ಚ್ 06: ಕರ್ನಾಟಕ ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಐಟಿ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಪ್ರಸ್ತುತಪಡಿಸಿರುವ ಬಿಬಿಎಂಪಿಯ ಮುಂದಿನ ಆರ್ಥಿಕ ವರ್ಷದ ಬಜೆಟ್ ಸಹ ನಗರದ ಜನದಟ್ಟಣೆಯನ್ನು ಕಡಿಮೆ ಮಾಡುವತ್ತ ಗಮನಹರಿಸಿದೆ. ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದ ನಡುವೆ ಬಿಗ್- ಟಿಕೆಟ್ ರೋಟರಿ ಮೇಲ್ಸೇತುವೆಯನ್ನು ಬಿಬಿಎಂಪಿ ಘೋಷಿಸಿದೆ.

ಎಲಿವೇಟೆಡ್ ರೋಟರಿ ಮೇಲ್ಸೇತುವೆ
ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಉತ್ತಮ ಸಂಪರ್ಕ ಕಲ್ಪಿಸಲು 345 ಕೋಟಿ ರೂಪಾಯಿ ವೆಚ್ಚದಲ್ಲಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ಮತ್ತು ತಡೆರಹಿತ ಸಂಪರ್ಕ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಬಿಬಿಎಂಪಿ ಬಜೆಟ್‌ನಲ್ಲಿ ಹೇಳಲಾಗಿದೆ. ಸದ್ಯ ರಸ್ತೆ ಮಾರ್ಗವಾಗಿ ವಿಶ್ವೇಶ್ವರಯ್ಯ ಟರ್ಮಿನಲ್ ತಲುಪುವುದು ಸಂಕಷ್ಟದ ಕೆಲಸವಾಗಿದೆ. ಅಲ್ಲದೆ, ನಗರದ ಹಲವು ಭಾಗಗಳಿಂದ ನಿಲ್ದಾಣಕ್ಕೆ ಸರಿಯಾದ ಸಂಪರ್ಕವೂ ಇಲ್ಲದಿರುವುದು ವಾಹನ ಸಂಚಾರಿಗಳಿಗೆ ತೀವ್ರ ತೊಂದರೆ ನೀಡುತ್ತಿದೆ.

ರೋಟರಿಯ ನಾಲ್ಕು ಎತ್ತರದ ಮೇಲ್ಸೇತುವೆ
ಪ್ರಸ್ತಾವಿತ ವಿನ್ಯಾಸದ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಜಂಕ್ಷನ್‌ನಲ್ಲಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ಬರಲಿದೆ. ಇದು ನಾಲ್ಕು ವಿಭಿನ್ನ ಪ್ರದೇಶಗಳನ್ನು ಸಂಪರ್ಕಿಸುವ ವೃತ್ತಾಕಾರದ ರೋಟರಿ ರಚನೆಯಾಗಿದೆ. ರೋಟರಿಯ ನಾಲ್ಕು ಎತ್ತರದ ಮೇಲ್ಸೇತುವೆಗಳು ಉತ್ತರದ ಕಮ್ಮನಹಳ್ಳಿ, ದಕ್ಷಿಣದ ಬೈಯಪ್ಪನಹಳ್ಳಿ, ಪಶ್ಚಿಮದಲ್ಲಿ ಮಾರುತಿ ಸೇವಾ ನಗರ ಮತ್ತು ಬಾಣಸವಾಡಿ ಪೂರ್ವ ಭಾಗದಿಂದ ವಾಹನ ಸಂಚಾರಿಗಳಿಗೆ ಸಂಪರ್ಕ ಕಲ್ಪಿಸಲಿದೆ.

11,000 ಕೋಟಿ ರೂ. ವೆಚ್ಚದ ಬಜೆಟ್
ಟ್ರಾಫಿಕ್ ಚಲನೆಯನ್ನು ಸರಾಗಗೊಳಿಸುವ ಸಲುವಾಗಿ ನಗರದಲ್ಲಿ ಹಲವಾರು ಸಣ್ಣ ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ಘೋಷಿಸಿದೆ. ಅವುಗಳಲ್ಲಿ ನಾಲ್ಕ ಫ್ಲೈಓವರ್ ನಿರ್ಮಾಣವನ್ನು ಈ ವರ್ಷವೇ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಜೆಟ್ ದಾಖಲೆಯು 'ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡುವುದು, ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಹರಿವನ್ನು ಸುಧಾರಿಸುವುದು ಮತ್ತು ಸಿಗ್ನಲ್ ಮುಕ್ತ ಟ್ರಾಫಿಕ್ ಕಾರಿಡಾರ್‌ಗಳನ್ನು ರಚಿಸುವ ಅವಶ್ಯಕತೆಯಿದೆ' ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್
ಈ ನಿಟ್ಟಿನಲ್ಲಿ, ಈ ಕೆಳಗಿನ ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳನ್ನು 2023-24 ರ ಅವಧಿಯಲ್ಲಿಯೇ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
40 ಕೋಟಿ ರೂಪಾಯಿ ವೆಚ್ಚದಲ್ಲಿ ಐಐಎಸ್‌ಸಿ ನೀಡಿರುವ ಜಮೀನನ್ನು ಬಳಸಿಕೊಂಡು ಮತ್ತಿಕೆರೆ ತಿರುವಿನ ಬಳಿ ಗೋಕುಲ ರಸ್ತೆಯಲ್ಲಿ ಫ್ಲೈಓವರ್ ನಿರ್ಮಿಸಲಾಗುವುದು.
40 ಕೋಟಿ ರೂಪಾಯಿ ವೆಚ್ಚದಲ್ಲಿ ORR - ಜಾಲಹಳ್ಳಿಯಲ್ಲಿ ಪೈಪ್‌ಲೈನ್ ಜಂಕ್ಷನ್‌ನಲ್ಲಿ ಫ್ಲೈಓವರ್ ನಿರ್ಮಾಣ ಮಾಡಲಾಗುವುದು.
ಜಯಮಹಲ್ ರಸ್ತೆಯಲ್ಲಿ 65 ಕೋಟಿ ವೆಚ್ಚದಲ್ಲಿ ಮೇಖ್ರಿ ವೃತ್ತದ ಕೆಳಸೇತುವೆ ನಿರ್ಮಾಣ ಮಾಡಲಾಗುವುದು.
ಸದಾಶಿವನಗರ ಪೊಲೀಸ್ ಠಾಣೆ ವೃತ್ತದಲ್ಲಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಘೋಷಿಸಿದೆ.

16 ಮೇಲ್ಸೇತುವೆಗಳ ನಿರ್ಮಾಣ
ದಟ್ಟಣೆಯನ್ನು ಕಡಿಮೆ ಮಾಡುವ ರಸ್ತೆಗಳಲ್ಲಿ ಫ್ಲೈಓವರ್‌ಗಳ ಉಪಯುಕ್ತತೆಯ ಕುರಿತು ತೀವ್ರ ಚರ್ಚೆಯ ನಡುವೆ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ಏಳು ಹೊಸ ಮೇಲ್ಸೇತುವೆಗಳು ಸೇರಿದಂತೆ 16 ಮೇಲ್ಸೇತುವೆಗಳನ್ನು ನಿರ್ಮಿಸಲು ಬಿಬಿಎಂಪಿ 1,650 ಕೋಟಿ ರೂಪಾಯಿಯನ್ನು ತೆಗೆದಿರಿಸಿದೆ. ಬಿಬಿಎಂಪಿಯು ಹೆಚ್ಚಿನ ಫ್ಲೈಓವರ್‌ಗಳಿಗೆ ಧನಸಹಾಯ ಮಾಡಲು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಮುಂದೆ ಬಂದಿದೆ.












Click it and Unblock the Notifications