ಸೈಕಲ್ ಸವಾರಿಗೆ ಸಜ್ಜಾದ್ರು ಬೇಳೂರು ಗೋಪಾಲಕೃಷ್ಣ!

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೇಳೂರು ಗೋಪಾಕೃಷ್ಣ, ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. ಸದ್ಯ ಸೈಕಲ್ ಏರಲು ಅವರು ಸಿದ್ಧತೆ ನಡೆಸುತ್ತಿದ್ದು, ಸಮಾಜವಾದಿ ಪಕ್ಷದ ಮುಖಂಡರಾದ ಗೂಳಿಹಟ್ಟಿ ಶೇಖರ್ ಜೊತೆಗೆ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಸಮಾಜವಾದಿ ಪಕ್ಷ ಸೇರ್ಪಡೆಗೆ ಬೇಳೂರು ಗೋಪಾಕೃಷ್ಣ ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿದ್ದು, ಅವರು ಪಕ್ಷ ಸೇರಿದರೆ, ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಅವರೇ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬುದು ಸದ್ಯದ ಮಾಹಿತಿ.
ಸಮಾಜವಾದಿ ಪಕ್ಷದ ಪ್ರಸ್ತಾಪವನ್ನು ಪಡೆದಿರುವ ಬೇಳೂರು ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಿಲ್ಲ. ಜೆಡಿಎಸ್ ನಾಯಕರ ನಿಲುವು ಕಾದು ನೋಡಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಅವರ ನಿಲುವು ಅಂತಿಮವಾಗಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಬೇಳೂರು ಗೋಪಾಲಕೃಷ್ಣ,ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಆದರೆ, ಜೆಡಿಎಸ್ ನಾಯಕರು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಇದರಿಂದ ಬೇಳೂರು ಬೇಸರಗೊಂಡಿದ್ದಾರೆ.
ಎಲ್ಲರ ಚಿತ್ರ ಎಸ್ ಪಿಯತ್ತ : ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಬಾಬು ಗೌಡ ಪಾಟೀಲ್ ಅಧಿಕಾರವಹಿಸಿಕೊಳ್ಳುತ್ತಿದ್ದಂತೆ ಎಲ್ಲಾ ಪಕ್ಷದಲ್ಲಿರುವ ಅತೃಪ್ತರನ್ನು ಪಕ್ಷಕ್ಕೆ ಕರೆತಂದು ಪಕ್ಷವನ್ನು ಗಟ್ಟಿಗೊಳಿಸಲು ತೀರ್ಮಾನಿಸಿದ್ದಾರೆ.
ಆದ್ದರಿಂದಲೇ ವಿವಿಧ ಪಕ್ಷಗಳ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮಾಜಿ ಶಾಸಕರಾದ ಭದ್ರಾವತಿ ಸಂಗಮೇಶ್, ಇಂಡಿಯ ಡಾ.ಸಾರ್ವಭೌಮ ಬಗಲಿ ಅವರೂ ಸಮಾಜವಾದಿ ಪಕ್ಷದತ್ತ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. (ಸೈಕಲ್ ಏರಲಿದ್ದಾರೆ ಜೆಡಿಎಸ್ ನ ಬೆಂಕಿ ಮಹದೇವು)
ಮತ್ತೊಂದು ಬೆಳವಣಿಗೆಯಲ್ಲಿ ಮೈಸೂರು ಭಾಗದಲ್ಲಿ ಜೆಡಿಎಸ್ ನಾಯಕ ಬೆಂಕಿ ಮಹದೇವು ಮತ್ತು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಅವರನ್ನು ಸಮಾಜವಾದಿ ಪಕ್ಷಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಎಸ್ ಪಿ ಭರ್ಜರಿ ತಯಾರಿ ಆರಂಭಿಸಿದೆ.












Click it and Unblock the Notifications