ಬಿಡಿಎ ಸೈಟ್‌ಗಳ ಮಾಲೀಕರೇ ಗಮನಿಸಿ, ಸುಧಾರಣೆ ಶುಲ್ಕ ಪ್ರಕಟ
ಬೆಂಗಳೂರು, ಸೆಪ್ಟೆಂಬರ್ 19: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಉದ್ಯಾನ ನಗರಿ ಬೆಂಗಳೂರಿನಲ್ಲಿ ನಿವೇಶನಗಳಿಗೆ ಸುಧಾರಣೆ ಶುಲ್ಕವನ್ನು ಘೋಷಣೆ ಮಾಡಿದೆ. ಗ್ರಾಮದಿಂದ ಗ್ರಾಮಕ್ಕೆ ಈ ಶುಲ್ಕಗಳಲ್ಲಿ ಬದಲಾವಣೆಯಾಗಲಿದೆ. ಚದರ ಮೀಟರ್‌ಗೆ ಅನ್ವಯವಾಗುವಂತೆ ಶುಲ್ಕಗಳಲ್ಲಿ ಹೆಚ್ಚು-ಕಡಿಮೆಯಾಗಲಿದೆ. ಬಿಡಿಎ ನಿಯಮಾವಳಿಗಳ ಸೆಕ್ಷನ್ 20 ಮತ್ತು 21ರ ಅನ್ವಯ ಪ್ರಾಧಿಕಾರ ಲೇಔಟ್ ಅಭಿವೃದ್ಧಿ ಮಾಡುವಾಗ ಸುಧಾರಣೆ ಶುಲ್ಕವನ್ನು ನಿಗದಿಗೊಳಿಸಲು ಅಧಿಕಾರವಿದೆ.
ಉತ್ತರ ಬೆಂಗಳೂರಿನಲ್ಲಿ ಬಿಡಿಎ 5,171 ಆಸ್ತಿಗಳಿಗೆ ಸುಧಾರಣೆ ಶುಲ್ಕವನ್ನು ಘೋಷಣೆ ಮಾಡಿದೆ. ಈ ಪ್ರದೇಶದಲ್ಲಿಯೇ ಪ್ರಾಧಿಕಾರ ಡಾ. ಶಿವರಾಮ ಕಾರಂತ ಬಡಾವಣೆಯನ್ನು ಅಭಿವೃದ್ಧಿಪಡಿಸುತ್ತಿದೆ. ಸೈಟುಗಳ ಚದರ ಮೀಟರ್‌ಗೆ ಅನ್ವಯವಾಗುವಂತೆ ರೂ. 43 ರಿಂದ 1,146ರ ತನಕ ಶುಲ್ಕಗಳು ಅನ್ವಯವಾಗುತ್ತದೆ. ಉಳಿದ 14 ಹಳ್ಳಿಗಳಿಗೆ ಹೋಲಿಕೆ ಮಾಡಿದರೆ ಕೆಂಪಾಪುರ ಮತ್ತು ರಾಮಗೊಂಡನಹಳ್ಳಿಯಲ್ಲಿ ಶುಲ್ಕಗಳು ಹೆಚ್ಚಿವೆ.

ಮಾರ್ಚ್‌ನಲ್ಲಿ ನಡೆದ ಬಿಡಿಎ ಉನ್ನತ ಮಟ್ಟದ ಸಭೆಯಲ್ಲಿ ಶುಲ್ಕಗಳ ಸಂಗ್ರಹಕ್ಕೆ ಒಪ್ಪಿಗೆ ನೀಡಲಾಗಿತ್ತು. ಸುಧಾರಣಾ ಶುಲ್ಕವನ್ನು ಸಂಗ್ರಹ ಮಾಡುವ ಕುರಿತು ಬಿಡಿಎ ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಗೆ ಸರ್ಕಾರ ಸಹ ಅಂತಿಮ ಒಪ್ಪಿಗೆ ನೀಡಿದೆ. ಬಿಡಿಎ ನಿಯಮಾವಳಿ 20 ಮತ್ತು 21ರ ಅನ್ವಯ ಆಸ್ತಿಗಳಿಗೆ ಪ್ರಾಧಿಕಾರ ಸುಧಾರಣಾ ಶುಲ್ಕವನ್ನು ಸಂಗ್ರಹ ಮಾಡಬಹುದು. ಯೋಜನೆ ಅಭಿವೃದ್ಧಿಗೊಳಿಸುವಾಗ ಇರುವ ಬೇಡಿಕೆ, ಬಳಿಕ ಹೆಚ್ಚಾಗುವ ಬೇಡಿಕೆ ಅನ್ವಯ ಬಿಡಿಎ ಸುಧಾರಣಾ ಶುಲ್ಕವನ್ನು ನಿಗದಿಗೊಳಿಸುತ್ತದೆ.
ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ನ್ಯಾಯಮೂರ್ತಿ ಎವಿ ಚಂದ್ರಶೇಖರ್ ಸಮಿತಿಯಿಂದ ಮಾನ್ಯತೆ ಪಡೆದಿರುವ ಆಸ್ತಿಗಳು, ಮನೆಗಳಿಗೆ ಈ ಶುಲ್ಕಗಳು ಅನ್ವಯವಾಗುತ್ತದೆ. ಬಿಡಿಎ ಸುಧಾರಣಾ ಶುಲ್ಕ ಸಂಗ್ರಹ ಮಾಡಲು ಕೈಗೊಂಡಿರುವ ತೀರ್ಮಾನಕ್ಕೆ ನಿವಾಸಿಗಳು ವಿರೋಧವನ್ನು ಸಹ ವ್ಯಕ್ತಪಡಿಸಿದ್ದಾರೆ.
ಶುಲ್ಕ ಸಂಗ್ರಕ್ಕೆ ವಿರೋಧವೂ ಇದೆ: ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಸುಧಾರಣಾ ಶುಲ್ಕ ನಿಗದಿ ಮಾಡುವಾಗ ಬಿಡಿಎ 2018 ರಿಂದ 2024ರ ತನಕದ ಆಸ್ತಿ ಮಾರ್ಗದರ್ಶಿ ಮೌಲ್ಯಗಳನ್ನು ಲೆಕ್ಕಾಚಾರ ಹಾಕಿದೆ. ಇದರಿಂದಾಗಿ ಬಿಡಿಎಗೆ ಸುಮಾರು 800 ರಿಂದ 1,000 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ. ಇದರ ಅನ್ವಯ ವಾಣಿಜ್ಯ ಆಸ್ತಿಗಳಿಗೆ ಇದು ಶೇ 50ಕ್ಕಿಂತ ಹೆಚ್ಚಾಗಿರುತ್ತದೆ.
ರಾಮಗೊಂಡನಹಳ್ಳಿ, ಕೆಂಪಾಪುರ ಮತ್ತು ದೊಡ್ಡಬೆಟ್ಟದಹಳ್ಳಿ ನಿವಾಸಿಗಳು ಬಿಡಿಎ ಸುಧಾರಣಾ ಶುಲ್ಕ ಸಂಗ್ರಹ ಮಾಡುವ ಕುರಿತು ಆಕ್ಷೇಪವನ್ನು ಎತ್ತಿದ್ದಾರೆ. ಪ್ರಾಧಿಕಾರ ಸುಧಾರಣಾ ಶುಲ್ಕವನ್ನು ನಿಗದಿ ಮಾಡುವ ಮಾರ್ಗಸೂಚಿಯೇ ತಪ್ಪಾಗಿದೆ. ಆಸ್ತಿಯ ಮೌಲ್ಯದಷ್ಟೇ ಶುಲ್ಕವನ್ನು ನಿಗದಿ ಮಾಡಲಾಗಿದೆ ಎಂಬುದು ಜನರ ಆರೋಪವಾಗಿದೆ.
ನಮ್ಮ ಆಸ್ತಿಗಳಿಗೆ ಗ್ರಾಮ ಪಂಚಾಯಿತಿ ರಸ್ತೆಯನ್ನು ಮಾಡಿಕೊಟ್ಟಿದೆ. ಬೇರೆ ಒಂದು ಸಂಸ್ಥೆ ಒಳಚರಂಡಿ ಸಂಪರ್ಕವನ್ನು ಕಲ್ಪಿಸಿದೆ. ನಾವು ಏಕೆ ಈಗ ಬಿಡಿಎಗೆ ಸುಧಾರಣಾ ಶುಲ್ಕವನ್ನು ಪಾವತಿಸಬೇಕು? ಎಂಬುದು ಜನರ ಪ್ರಶ್ನೆಯಾಗಿದೆ. ಮುಖ್ಯ ರಸ್ತೆಗೆ ಹತ್ತಿರವಿರುವ ಹಾರೋಹಳ್ಳಿ, ಅವಲಹಳ್ಳಿಯಲ್ಲಿ ಸುಧಾರಣಾ ಶುಲ್ಕ ಕಡಿಮೆ ಇದೆ, ದೂರ ಇರುವ ಗ್ರಾಮಗಳಿಗೆ ಹೆಚ್ಚಿನ ಶುಲ್ಕ ನಿಗದಿ ಮಾಡಲಾಗಿದೆ ಎಂಬುದು ಜನರ ದೂರು.
ಬಿಡಿಎ ಎಲ್ಲಾ ಆಸ್ತಿಗಳಿಗೂ ಅನ್ವಯವಾಗುವಂತೆ ಒಂದೇ ಮಾದರಿ ಸುಧಾರಣಾ ಶುಲ್ಕವನ್ನು ಸಂಗ್ರಹ ಮಾಡಬೇಕು. ಆಸ್ತಿಗಳ ಸ್ವಾಧೀನದ ಸಂದರ್ಭದಲ್ಲಿ ಪರಿಹಾರ ನೀಡುವಂತೆ ಶುಲ್ಕವನ್ನು ಸಂಗ್ರಹಿಸಬೇಕು ಎಂದು ಆಸ್ತಿಗಳ ಮಾಲೀಕರು ಸಲಹೆ ನೀಡಿದ್ದಾರೆ.











Click it and Unblock the Notifications