ಬೆಂಗಳೂರು ಉದ್ಯಾನ, ಆಟದ ಮೈದಾನಕ್ಕೆ ಜಾಗ ಕಾಯ್ದಿರಿಸುವಿಕೆ ಕಡ್ಡಾಯ
ಬೆಂಗಳೂರು, ನವೆಂಬರ್ 28 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು , ನಗರದಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಉದ್ಯಾನ ಹಾಗೂ ಆಟದ ಮೈದಾನಕ್ಕೆ ಜಾಗ ಕಾಯ್ದಿರಿಸುವುದನ್ನು "ಪರಿಷ್ಕೃತ ಮಹಾಯೋಜನೆ ೨೦೩೧" ರಲ್ಲಿ ಕಡ್ಡಾಯಗೊಳಿಸುವ ಕುರಿತು ಪ್ರಸ್ತಾಪಿಸಲಾಗಿದೆ.
ನಗರದಲ್ಲಿನ ಹಸಿರು ವಲಯವನ್ನು ಹೆಚ್ಚಿಸುವ ಹಾಗೂ ಮಕ್ಕಳಿಗೆ ಆಟವಾಡಿಕೊಳ್ಳಲು ಮೈದಾನವಿರಬೇಕು ಎಂಬ ಉದ್ದೇಶದಿಂದ ನಗರದಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಹಾಗೂ 2ಸಾವಿರ ಚದರ ಮೀಟರ್ ಮೀರಿದ ಅಪಾರ್ಟ್ ಮೆಂಟ್ ಗಳಲ್ಲಿ ಉದ್ಯಾನಕ್ಕಾಗಿ ಜಾಗ ಕಾಯ್ದಿರಿಸುವುದು ಕಡ್ಡಾಯಗೊಳಿಸಲಾಗಿದೆ.

ಇದರೊಂದಿಗೆ ಮೂಲ ಸೌಕರ್ಯಗಳ ಅನುಷ್ಠಾನಕ್ಕಾಗಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಹೊಸ ಆವಿಷ್ಕಾರ ಸಹ ಪ್ರಸ್ತಾಪಿಸಲಾಗಿದೆ. ನಗರದಲ್ಲಿ ಖಾಲಿಯಿರುವ ಪ್ರದೇಶಗಳನ್ನು ಪರಿಗಣಿಸಿ 2031ಕ್ಕೆ ಅಂದಾಜಿಸಿರುವ ಜನಸಂಖ್ಯೆಗೆ ಜನಸಾಂದ್ರತೆಯನ್ನು ಪ್ರತಿ ಹೆಕ್ಟೇರ್ ಗೆ 200 ಜನರ ಲೆಕ್ಕಾಚಾರದಲ್ಲಿ 80 ಚದರ ಕಿ.ಮೀ. ಮಾತ್ರ ಹೆಚ್ಚುವರಿ ನಗರೀಕರಣಕ್ಕೆ ಅವಕಾಶ ನೀಡಲಾಗಿದೆ.
ಈ ಹೆಚ್ಚುವರಿ ಪ್ರದೇಶದಲ್ಲಿ ಯಲಹಂಕ ವಾಯುಪಡೆ ನಿಲ್ದಾಣ, ರಕ್ಷಣಾ ಪ್ರದೇಶ, ಜಲಪ್ರದೇಶ, ಗ್ರಾಮಠಾಣಾ ಪ್ರದೇಶ, ಕಲ್ಲುಗಣಿಗಾರಿಕೆ ಪ್ರದೇಶಗಳು ಒಳಗೊಳ್ಳಲಿವೆ ಎಂದು ತಿಳಿಸಲಾಗಿದೆ. ಇದರೊಂದಿಗೆ ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗಾಗಿ ಲಾರಿ/ಟ್ರಕ್ ತಂಗುದಾಣಗಳು, ಹೆಚ್ಚುವರಿ ಅಂತರ್ ರಾಜ್ಯ ಬಸ್ ನಿಲ್ದಾಣಗಳು ಮೂಲಭೂತ ಸೌಕರ್ಯಗಳಾದ ಘನತ್ಯಾಜ್ಯ ನಿರ್ವಹಣೆ, ವಿದ್ಯುತ್ ಪ್ರಸರಣಾ ಕೇಂದ್ರ, ಮಲಿನ ನೀರು ಸಂಸ್ಕರಣಾ ಘಟಕಗಳು ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಸೂಕ್ತ ಜಾಗವನ್ನು ಕಾಯ್ದಿರಿಸಲಾಗಿರುವ ಕುರಿತು ಉಲ್ಲೇಖಿಸಲಾಗಿದೆ.
ವಸತಿ ಪ್ರದೇಶಗಳಲ್ಲಿ ಬರಬಹುದಾದ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಗೆ ಅನುಮತಿಯ ಸಮಯದಲ್ಲಿ ರಸ್ತೆ ಅಗಲ ಮತ್ತು ನಿವೇಶನದ ವಿಸ್ತೀರ್ಣವನ್ನು ಪರಿಗಣಿಸಲು ನಿಯಮ ರೂಪಿಸಿದ್ದು, ಇದರಿಂದ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳ ದುಷ್ಪರಿಣಾಮ ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.












Click it and Unblock the Notifications