ಬೆಂಗಳೂರು ಪೆರಿಫರಲ್ ರಿಂಗ್ ರಸ್ತೆ; ಶೀಘ್ರವೇ ಟೆಂಡರ್ ಆಹ್ವಾನ
ಬೆಂಗಳೂರು, ಮಾರ್ಚ್ 29; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒಂದು ವಾರದಲ್ಲಿ ಪೆರಿಫರಲ್ ರಿಂಗ್ ರೋಡ್ ಯೋಜನೆಗೆ ಟೆಂಡರ್ ಕರೆಯಲಿದೆ. ಬೆಂಗಳೂರು ನಗರದ ವಾಹನ ಸಂಚಾರ ದಟ್ಟಣೆ ಮಾಡುವ 73 ಕಿ. ಮೀ. ಉದ್ದದ ಮಹತ್ವದ ಯೋಜನೆ ಇದಾಗಿದೆ.
ಸೋಮವಾರ ನಗರಾಭಿವೃದ್ಧಿ ಇಲಾಖೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಬೇಕಾದ ಒಪ್ಪಿಗೆ ನೀಡಿದೆ. ಬಿಡ್ ಪೂರ್ವ ಸಭೆ ಪೂರ್ಣಗೊಂಡಿದ್ದು, 2013ರ ಭೂ ಸ್ವಾಧೀನ ನಿಯಮಗಳ ಅನ್ವಯ ಯೋಜನೆ ಜಾರಿಗೆ ಬರಲಿದೆ.
ಪೆರಿಫರಲ್ ರಿಂಗ್ ರಸ್ತೆ ನಿರ್ಮಾಣದ ಸಿವಿಲ್ ಕೆಲಸಗಳ ಯೋಜನಾ ವೆಚ್ಚ 5,616 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಯೋಜನೆಗೆ ಭೂಮಿ ನೀಡುವ ರೈತರಿಗೆ ನೀಡುವ ಪರಿಹಾರದ ಮೊತ್ತ ಎಷ್ಟು ವರ್ಷಗಳ ಕಾಲ ಟೋಲ್ ಸಂಗ್ರಹ ಮಾಡಲಾಗುತ್ತದೆ ಎಂಬುದರ ಮೇಲೆ ತೀರ್ಮಾನವಾಗಲಿದೆ.

8 ಪಥಗಳ ಪೆರಿಫರಲ್ ರಿಂಗ್ ರಸ್ತೆ ತುಮಕೂರು ರಸ್ತೆಯನ್ನು ಹೊಸೂರು ರಸ್ತೆಗೆ ಸಂಪರ್ಕಿಸುತ್ತದೆ. ಈ ರಸ್ತೆ ಸರ್ಜಾಪುರ ರಸ್ತೆ, ಹಳೆ ಮದ್ರಾಸ್ ರಸ್ತೆ, ಬಳ್ಳಾರಿ ರಸ್ತೆ ಮೂಲಕ ಹೊಸೂರು ರಸ್ತೆಗೆ ಸೇರಲಿದೆ.
ಈ ರಸ್ತೆ ಸುಮಾರು ಎರಡು ದಶಕಗಳ ಬೇಡಿಕೆಯಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಕರ್ನಾಟಕ ಸರ್ಕಾರ ವಿನ್ಯಾಸ, ನಿರ್ಮಾಣ, ನಿರ್ವಹಣೆ, ಹಸ್ತಾಂತರ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದೆ.
ಟೆಂಡರ್ ಪಡೆದ ಕಂಪನಿ ರಸ್ತೆಯನ್ನು ನಿರ್ಮಾಣ ಮಾಡಿ, 50 ವರ್ಷಗಳ ತನಕ ನಿರ್ವಹಣೆ ಮಾಡಬೇಕು. ಆದಾಯವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜೊತೆ ಹಂಚಿಕೊಳ್ಳಬೇಕು.
ಯೋಜನೆಯ ಸದ್ಯದ ಮಾಹಿತಿಯಂತೆ ಹೋಗುವ ಮತ್ತು ಬರುವ ಮಾರ್ಗ ಸೇರಿ 17 ಟೋಲ್ ಪ್ಲಾಜಾಗಳು ಇರಲಿವೆ. ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆಯಲ್ಲಿ ನಾಲ್ಕು ಇಂಟರ್ ಚೇಂಜ್‌ಗಳು ಇರಲಿವೆ.
ಎರಡು ಫ್ಲೈ ಓವರ್ ಮತ್ತು 4 ಅಂಡರ್ ಪಾಸ್‌ಗಳನ್ನು ಯೋಜನೆ ಒಳಗೊಂಡಿದೆ. 2007ರಲ್ಲಿ ಇದೇ ಯೋಜನೆಗಾಗಿ ಸರ್ಕಾರ 1810 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಯೋಜನೆ ವಿನ್ಯಾಸ ಬದಲಾದ ಕಾರಣ ಬಿಡಿಎ 750 ಎಕರೆ ಹೆಚ್ಚುವರಿ ಜಾಗವನ್ನು ಸ್ವಾಧೀನ ಮಾಡಿಕೊಂಡಿದೆ.
ಭೂ ಸ್ವಾಧೀನ ಮತ್ತು ಅನುದಾನದ ಕೊರತೆಯ ಕಾರಣ ಯೋಜನೆ ಎರಡು ದಶಕಗಳಿಂದ ಬರೀ ಘೋಷಣೆಯಾಗಿಯೇ ಉಳಿದಿತ್ತು. ಯೋಜನೆಯ ಭೂ ಸ್ವಾಧೀನ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಅಗತ್ಯವಿರುವ ಭೂಮಿ ಸ್ವಾಧೀನ ಮಾಡಿಕೊಂಡು ಯೋಜನೆ ಆರಂಭಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಈ ಯೋಜನೆ ತಾಂತ್ರಿಕ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಕೆಲವು ದಿನಗಳ ಹಿಂದೆ ಎರಡು ಬಾರಿ ಸಭೆ ನಡೆಸಿತ್ತು. ಈ ಯೋಜನೆ ಒಟ್ಟು ವೆಚ್ಚ 21,091 ಕೋಟಿ ರೂ. ಆಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.
15 ವರ್ಷಗಳ ಹಿಂದೆ ಯೋಜನೆ ರೂಪಿಸಿದಾಗ ಯೋಜನಾ ವೆಚ್ಚ 3 ಸಾವಿರ ಕೋಟಿ ರೂ. ಆಗಿತ್ತು. ಯೋಜನೆ ವಿಳಂಬದ ಕಾರಣ ಯೋಜನಾ ವೆಚ್ಚ ಅಧಿಕವಾಗಿದೆ. ಪ್ರತಿ ವರ್ಷ ಆಸ್ತಿ ಮೌಲ್ಯ ಏರಿಕೆಯಾಗುತ್ತಲೇ ಸಾಗುತ್ತದೆ. ಭೂ ಮಾಲೀಕರಿಗೆ ಪರಿಹಾರ ನೀಡಬೇಕಿರುವ ಕಾರಣ ಯೋಜನಾ ವೆಚ್ಚ ಅಧಿಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ರಸ್ತೆ ಸಂಪೂರ್ಣ ಸಿಗ್ನಲ್ ಮುಕ್ತವಾಗಿದೆ. ಏರ್ ಅಂಬ್ಯುಲೆನ್ಸ್ ಇಳಿಸಲು ಹೆಲಿಪ್ಯಾಡ್, ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಈ ರಸ್ತೆ ಒಳಗೊಂಡಿದೆ.












Click it and Unblock the Notifications