BDA: ಪಿಪಿಆರ್-2 ಯೋಜನೆಗೆ ಬಿಡಿಎ ಭೂ ಸ್ವಾಧೀನ, ಯೋಜನೆ ವಿವರ
ಬೆಂಗಳೂರು, ಫೆಬ್ರವರಿ 01: ಉದ್ಯಾನ ನಗರಿ ಬೆಂಗಳೂರಿನ ಮತ್ತೊಂದು ರಸ್ತೆ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭೂ ಸ್ವಾಧೀನ ನೋಟಿಸ್ ಹೊರಡಿಸಿದೆ. 40 ಕಿ. ಮೀ. ಉದ್ದದ ಪೆರಿಫೆರಲ್ ವರ್ತುಲ ರಸ್ತೆ (ಪಿಪಿಆರ್) ಯೋಜನೆ ಇದಾಗಿದ್ದು, ನೈಸ್ ರಸ್ತೆ ಪಕ್ಕದಲ್ಲಿಯೇ ಈ ರಸ್ತೆ ಸಾಗಲಿದೆ. ಈ ರಸ್ತೆ ಹೊಸೂರು ರಸ್ತೆ, ಮೈಸೂರು ರಸ್ತೆಯನ್ನು ತುಮಕೂರು ರಸ್ತೆಯೊಂದಿಗೆ ಸಂಪರ್ಕಿಸಲಿದೆ.
ಸುಮಾರು ಎರಡು ದಶಕಗಳ ಹಿಂದಿನ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದೆ. ಬಿಡಿಎ ಯೋಜನೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ರೈತರಿಗೆ ನೋಟಿಸ್‌ಗಳನ್ನು ನೀಡುತ್ತಿದೆ. ಪೆರಿಫೆರಲ್ ವರ್ತುಲ ರಸ್ತೆ (ಪಿಪಿಆರ್)-2 ಯೋಜನೆ ನಗರದ ಹೊರ ಭಾಗದಲ್ಲಿ ಉತ್ತಮ ಸಂಚಾರ ನಿರ್ವಹಣೆಗೆ ಸಹಕಾರಿ ಎಂದು ಅಂದಾಜಿಸಲಾಗಿದೆ.

ಈ ಯೋಜನೆಗೆ ಮೊದಲು ಬಿಡಿಎ 2005ರ ಡಿಸೆಂಬರ್‌ನಲ್ಲಿ ಪ್ರಾಥಮಿಕ ನೋಟಿಸ್ ನೀಡಿತ್ತು. ಆದರೆ ಬಳಿಕ ಯೋಜನೆ ವಿವಿಧ ಕಾರಣಕ್ಕೆ ನಿಂತು ಹೋಗಿತ್ತು. ಸದ್ಯದ ಮಾಹಿತಿ ಪ್ರಕಾರ ಬ್ಯಾಲಕೋನೆನಹಳ್ಳಿ, ಕೆಜಿ ಲಕ್ಕೇನಹಳ್ಳಿ, ಗಂಗೊಂಡನಹಳ್ಳಿ, ಲಕ್ಷ್ಮೀಪುರ, ದೊಂಬರಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ನೀಡಲಾಗುತ್ತಿದೆ.
ಯೋಜನೆ ಮುಂದುವರಿಕೆ: ಪೆರಿಫೆರಲ್ ವರ್ತುಲ ರಸ್ತೆ (ಪಿಪಿಆರ್)-2 ಯೋಜನೆಗೆ ಹೊಸದಾಗಿ ನೋಟಿಸ್ ನೀಡುವ ಮೂಲಕ ಈ ಯೋಜನೆಯನ್ನು ಚುರುಕುಗೊಳಿಸಲು ಈಗ ಬಿಡಿಎ ಮುಂದಾಗಿದೆ. 2024ರ ಮಾರ್ಚ್‌ನಲ್ಲಿ ಬಿಡಿಎ ಈ ಯೋಜನೆಯನ್ನು ಪುನಃ ಆರಂಭಿಸುವ ಸುಳಿವು ನೀಡಿತ್ತು. ಈಗ ಭೂ ಸ್ವಾಧೀನದ ನೋಟಿಸ್ ನೀಡಲಾಗುತ್ತಿದೆ.
ಈ ರಸ್ತೆ ಯೋಜನೆಯ ಕಾರಿಡಾರ್ ಎರಡೂ ಬದಿಯಲ್ಲಿ 24 ಮೀಟರ್ ವಾಣಿಜ್ಯ ನಿವೇಶನಗಳನ್ನು ರಚಿಸಲಾಗುತ್ತದೆ ಎಂದು ಎಂದು ಬಿಡಿಎ ಹೇಳಿದೆ. ವಾಣಿಜ್ಯ ನಿವೇಶನಗಳನ್ನು ರಚನೆ ಮಾಡಿ, ಅವುಗಳನ್ನು ಮಾರಾಟ ಮಾಡಿ ವಾಣಿಜ್ಯ ವ್ಯವಹಾರಕ್ಕೆ ಉತ್ತೇಜನ ನೀಡಲಾಗುತ್ತದೆ.
ಹೊಸೂರು ರಸ್ತೆಯಿಂದ-ತುಮಕೂರು ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಪಿಪಿಆರ್-2 ಹೊಂದಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ತನಕ ನಿರ್ಮಾಣವಾಗುತ್ತಿರುವ 10 ಕಿ. ಮೀ. ರಸ್ತೆ ಸಹ ಈ ಯೋಜನೆಯ ಭಾಗವಾಗಿದೆ.
ಸಂತಸದ ವಿಚಾರ ಎಂದರೆ ಪಿಪಿಆರ್-2 ರಸ್ತೆಗೆ ಟೋಲ್ ಇರುವುದಿಲ್ಲ. 10 ಮೀಟರ್ ಸರ್ವೀಸ್ ರಸ್ತೆಗಳು ಸಹ ಈ ಯೋಜನೆಯಲ್ಲಿ ಸೇರಿವೆ. ಕಾರಿಡಾರ್ ನಿರ್ಮಾಣ ಮಾಡುವಾಗಲೇ ನಿವೇಶನಗಳನ್ನು ಅಭಿವೃದ್ಧಿಗೊಳಿಸಿ ಮಾರಾಟ ಮಾಡಿ ಆದಾಯ ಸಂಗ್ರಹ ಮಾಡಲು ಸಹ ಬಿಡಿಎ ಯೋಜನೆಯನ್ನು ರೂಪಿಸಿದೆ.
ಈ ಯೋಜನೆಯು ಆನೇಕಲ್ ತಾಲೂಕು, ಬೆಂಗಳೂರು ದಕ್ಷಿಣ ತಾಲೂಕು, ಯಶವಂತಪುರ ಹೋಬಳಿಯಲ್ಲಿ ಹಾದು ಹೋಗಲಿದೆ. ಕಾರಿಡಾರ್ ಪಕ್ಕದಲ್ಲಿ ವಾಣಿಜ್ಯ ನಿವೇಶನ ಮಾರಾಟ ಮಾಡಿ ಹಣ ಸಂಗ್ರಹ ಮಾಡುವುದರಿಂದ ಯೋಜನೆಗೆ ಆದಾಯದ ಕೊರತೆ ಉಂಟಾಗುವುದಿಲ್ಲ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.
ಈ ಯೋಜನೆಗೆ ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ಗುರುತಿಸಲಾಗಿದೆ. ಅವುಗಳನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಆದರೆ ಇನ್ನೂ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಬೇಕಿದೆ. ಪ್ರಾಥಮಿಕ ಸಮೀಕ್ಷೆ ನಡೆಸಿದ ಭೂ ಮಾಲೀಕರಿಗೆ ಈಗ ನೋಟಿಸ್ ನೀಡಲಾಗುತ್ತಿದೆ.












Click it and Unblock the Notifications