ಬಿಡಿಎ ಪ್ರತಿಷ್ಠಿತ ಬಡಾವಣೆ ನಿರ್ಮಾಣ ಅಂತಿಮ ಹಂತಕ್ಕೆ, ಎಷ್ಟು ಸೈಟುಗಳು ಸಿಗಲಿವೆ?
ಬೆಂಗಳೂರು, ಏಪ್ರಿಲ್ 14: ಬೆಂಗಳೂರು ನಗರದಲ್ಲಿ ಸೈಟು ಕೊಳ್ಳಲು ಚಿಂತನೆ ನಡೆಸುತ್ತಿರುವ ಜನರಿಗೆ ಮಹತ್ವದ ಮಾಹಿತಿಯೊಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದಲ್ಲಿ ನಿರ್ಮಾಣ ಮಾಡುತ್ತಿರುವ ಪ್ರತಿಷ್ಠಿತ ಬಡಾವಣೆಯ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಸುಮಾರು 2,782 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣಗೊಂಡಿದ್ದು, ಸೈಟುಗಳನ್ನು ಹಂಚಿಕೆ ಮಾಡಲು ಕರ್ನಾಟಕ ಹೈಕೋರ್ಟ್ ಒಪ್ಪಿಗೆ ಬಾಕಿ ಇದೆ.
ಬಿಡಿಎ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ಬಾಕಿ ಕಾಮಗಾರಿಯನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆ ಪಡೆದವರಿಗೆ ಗಡುವು ನೀಡಿದೆ. ಈ ಬಡಾವಣೆಯಲ್ಲಿ ಸುಮಾರು 30 ಸಾವಿರ ಸೈಟುಗಳನ್ನು ನಿರ್ಮಾಣ ಮಾಡಲಾಗಿದ್ದು, ಜನರಿಗೆ ಸುಮಾರು 18 ಸಾವಿರ ಸೈಟುಗಳನ್ನು ಹಂಚಿಕೆ ಮಾಡಲಾಗುತ್ತದೆ.

ಬೆಂಗಳೂರು ನಗರದ ಉತ್ತರ ಭಾಗದಲ್ಲಿ ಡಾ. ಕೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣವಾಗುತ್ತಿದೆ. ಬಡಾವಣೆ ನಿರ್ಮಾಣದ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಅಡ್ಡ ರಸ್ತೆ, ನೀರಿನ ಸಂಪರ್ಕ, ಒಳಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಉಳಿದ ಕಾಮಗಾರಿಯನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಬೇಕು ಎಂದು ಬಿಡಿಎ ಗಡುವು ನೀಡಿದೆ.
18 ಸಾವಿರ ಸೈಟುಗಳ ಹಂಚಿಕೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ಸ್ವಾಧೀನ ಪಡಿಸಿಕೊಂಡ ವಿಚಾರ ಕರ್ನಾಟಕ ಹೈಕೋರ್ಟ್, ಸುಪ್ರೀಂಕೋರ್ಟ್ ತನಕ ಹೋಗಿತ್ತು. ಈಗ ಈ ಬಡಾವಣೆಯ ಸೈಟುಗಳನ್ನು ಹಂಚಿಕೆ ಮಾಡಲು ಕರ್ನಾಟಕ ಹೈಕೋರ್ಟ್ ಆದೇಶ ಬಾಕಿ ಇದೆ. ಬಿಡಿಎ ಸೈಟುಗಳನ್ನು ಹರಾಜು ಮೂಲಕ ಜನರಿಗೆ ಹಂಚಲು ತಯಾರಿಯನ್ನು ಮಾಡಿಕೊಳ್ಳುತ್ತಿದೆ.
ಭೂ ಸ್ವಾಧೀನ ಮತ್ತು ಇತರ ವಿವಾದ ಬಗೆಹರಿಸದೇ ಸೈಟುಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಕೆಲವು ರೈತರು ಕೋರ್ಟ್ ಮೆಟ್ಟಿಲೇರಿದ್ದರು. ಆದ್ದರಿಂದ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ಸೈಟುಗಳ ಹಂಚಿಕೆಗೆ ಹೈಕೋರ್ಟ್ ನಿರ್ಬಂಧವನ್ನು ವಿಧಿಸಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದರೆ ಸೈಟುಗಳ ಹಂಚಿಕೆ ಪ್ರಾರಂಭವಾಗಲಿದೆ.
2008ರಲ್ಲಿ ಬಿಡಿಎ ಡಾ. ಕೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ 3,546 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದೆ. ಇದರಲ್ಲಿ 2,782 ಎಕರೆ ಪ್ರದೇಶದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ನಿವೇಶನ ನಿರ್ಮಾಣ ಮಾಡಲಾಗಿದೆ. ಒಪ್ಪಂದದ ಅನ್ವಯ ಇದರಲ್ಲಿ 16-17 ಸಾವಿರ ಸೈಟುಗಳನ್ನು ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಹಂಚಿಕೆ ಮಾಡಬೇಕಿದೆ. ಉಳಿದ ಸೈಟುಗಳು ಜನರಿಗೆ ಲಭ್ಯ.
ಬಿಡಿಎ ಅಧಿಕಾರಿಗಳ ಮಾಹಿತಿ ಪ್ರಕಾರ ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ 30*40, 40*60 ಅಡಿ ಅಳತೆಯ ನಿವೇಶನಗಳು ಹೆಚ್ಚಿವೆ. ಸುಮಾರು 4 ಸಾವಿರ ಮೂಲೆ ನಿವೇಶನಗಳು ಇವೆ. ಸದ್ಯದ ಮಾಹಿತಿಯಂತೆ ಲಾಟರಿ ಮೂಲಕ ಸೈಟು ಹಂಚಿಕೆ ಮಾಡಲು ಅರ್ಜಿ ಕರೆದರೆ ದರ ಒಂದು ಚದರ ಅಡಿಗೆ 4,900 ರೂ. ಆಗಲಿದೆ.
ಡಾ. ಕೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಗಾಣಿಗರಹಳ್ಳಿ, ಕಾಳತಮ್ಮನಹಳ್ಳಿ, ಲಕ್ಷ್ಮಿಪುರ, ಸೋಮಶೆಟ್ಟಿಹಳ್ಳಿ, ಕೆಂಪಾಪುರ, ರಾಮಗೊಂಡನಹಳ್ಳಿ, ಹಾರೋಹಳ್ಳಿ, ಆವಲಹಳ್ಳಿ, ಗುಣಿ ಅಗ್ರಹಾರ, ಮೇಡಿ ಅಗ್ರಹಾರ, ಶಾಮರಾಜಪುರ, ವೀರಸಾಗರ, ಕೆ. ಬಿ. ಕಾವಲ್, ದೊಡ್ಡಬೆಟ್ಟಹಳ್ಳಿ, ವಡೇರಹಳ್ಳಿ ಮುಂತಾದ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಬಡಾವಣೆ ನಿರ್ಮಾಣ ಮಾಡಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯ ಬಳಿಕ ಬಿಡಿಎ ನಗರದಲ್ಲಿ ಯಾವುದೇ ಬಡಾವಣೆಯ ಸೈಟುಗಳನ್ನು ಹಂಚಿಕೆ ಮಾಡಿಲ್ಲ. ಆದ್ದರಿಂದ ಉದ್ಯಾನ ನಗರಿಯ ಜನರು ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನಗಳನ್ನು ಖರೀದಿ ಮಾಡಲು ಕಾದು ಕುಳಿತಿದ್ದಾರೆ.
ಬಿಡಿಎ ನಿರ್ಮಾಣ ಮಾಡುತ್ತಿರುವ ಬೆಂಗಳೂರು ನಗರದ 2ನೇ ಅತಿ ದೊಡ್ಡ ಯೋಜನೆ ಡಾ. ಕೆ. ಶಿವರಾಮ ಕಾರಂತ ಬಡಾವಣೆ. 18 ಸಾವಿ ಸೈಟುಗಳನ್ನು ಬಿಡಿಎ ಒಟ್ಟಿಗೆ ಹಂಚಿಕೆ ಮಾಡುವುದಿಲ್ಲ. ಹಂತ ಹಂತವಾಗಿ ಸೈಟುಗಳ ಮಾರಾಟ ನಡೆಯಲಿದೆ. ಈಗ ಕಾಮಗಾರಿ ಪೂರ್ಣಗೊಂಡರೂ ಸಹ ಹೈಕೋರ್ಟ್ ಆದೇಶದ ತನಕ ಅರ್ಜಿ ಆಹ್ವಾನಿಸಲು ಬಿಡಿಎ ಕಾಯಬೇಕಿದೆ.












Click it and Unblock the Notifications