ಬೆಂಗಳೂರಿನ ಈ ಆಸ್ತಿದಾರರಿಗೆ ಬಿಬಿಎಂಪಿ ಬಿಗ್ ಶಾಕ್: ಪಿಜಿಗಳಿಗೂ ಸಂಕಷ್ಟ!
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪಿಜಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಪಿಜಿಗಳಲ್ಲಿ ಆಹಾರ ಸರಿ ಇಲ್ಲ ಹಾಗೂ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳು ಇವೆ ಎನ್ನುವ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಿವೆ. ಬೆಂಗಳೂರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಜನ ಬರುತ್ತಿದ್ದು. ಈ ರೀತಿ ಬರುವವರು ನಗರದ ಪಿಜಿಗಳಲ್ಲಿ ನೆಲೆಸುತ್ತಿದ್ದಾರೆ. ಆದರೆ ಪಿಜಿ ಸೌಕರ್ಯಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಈ ರೀತಿ ಇರುವಾಗಲೇ ಬೆಂಗಳೂರಿನ ಪಿಜಿಗಳಿಗೆ ಶಾಕ್ ನೀಡುವುದಕ್ಕೆ ಬಿಬಿಎಂಪಿಯು ಮುಂದಾಗಿದೆ.
ಬೆಂಗಳೂರಿನಲ್ಲಿ ಪಿಜಿಗಳಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಾರ್ಯಾಚರಣೆಗೆ ಇಳಿದಿದೆ. ಬೆಂಗಳೂರಿನಲ್ಲಿ ಎಲ್ಲಾ ಪಿಜಿಗಳಲ್ಲೂ ಯಾವ ರೀತಿಯ ಆಹಾರ ನೀಡಲಾಗುತ್ತಿದೆ ಎನ್ನುವುದು ಹಾಗೂ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎನ್ನುವುದನ್ನು ಪರಿಶೀಲನೆ ಮಾಡುವುದಕ್ಕೆ ಶುರು ಮಾಡಿಕೊಳ್ಳಲಾಗಿದೆ. ಅಲ್ಲದೇ ನಿಯಮ ಹಾಗೂ ಲೈಸೆನ್ಸ್ ಉಲ್ಲಂಘನೆ ಮಾಡಿರುವ ಪಿಜಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಬಿಬಿಎಂಪಿಯು ಮುಂದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯದಿಂದ ಈ ಅಭಿಯಾನವನ್ನು ಶುರು ಮಾಡಿದೆ.

ನಗರದಲ್ಲಿ ಪಿಜಿಗಳಲ್ಲಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದ್ದು. ಈ ರೀತಿ ನಿಯಮ ಉಲ್ಲಂಘನೆ ಮಾಡುವ ಪಿಜಿಗಳಿಗೆ ಬೀಗ ಜಡಿಯಲಾಗುತ್ತಿದೆ. ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು ಫೀಲ್ಡ್‌ಗೆ ಇಳಿದಿದ್ದು. ನಿಯಮ ಉಲ್ಲಂಘಿಸಿರುವ 100 ಪೇಯಿಂಗ್ ಗೆಸ್ಟ್ (PG) ವಸತಿ ಗೃಹಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬಿಬಿಎಂಪಿಯು ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿರುವುದರಿಂದ ಬೆಂಗಳೂರಿನಲ್ಲಿ ಹಲವು ಪಿಜಿಗಳು ಖಾಲಿಯಾಗುತ್ತಿವೆ.
ಆಸ್ತಿದಾರರಿಗೆ ಸಂಕಷ್ಟ: ಇನ್ನು ಬಿಬಿಎಂಪಿಯು ಪಿಜಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿರುವುದು ಆಸ್ತಿದಾರರಿಗೆ ಸಂಕಷ್ಟವನ್ನು ತದೊಂಡ್ಡಿದೆ. ಬೆಂಗಳೂರಿನಲ್ಲಿ ಪಿಜಿಯು ಹೊಸ ಉದ್ಯಮದಂತೆ ಆಗಿದೆ. ಬೆಂಗಳೂರಿನಲ್ಲಿ ಪಿಜಿಗಳ ಸಂಖ್ಯೆ ಹೆಚ್ಚಾದಂತೆ ಬೆಂಗಳೂರಿನ ಆಸ್ತಿದಾರರಿಗೆ ಇದರಿಂದ ಭರ್ಜರಿ ಲಾಭವಾಗುತ್ತಿತ್ತು. ಆದರೆ, ಇದೀಗ ಪಿಜಿಗಳು ಕ್ಲೋಸ್ ಆಗುತ್ತಿದ್ದು ಸಂಕಷ್ಟ ಎದುರಾಗುವ ಭೀತಿಯಲ್ಲಿ ಆಸ್ತಿದಾರರು ಇದ್ದಾರೆ. ಬೆಂಗಳೂರಿನಲ್ಲಿ ಬಹು ವಸತಿ ಕಟ್ಟಡಗಳನ್ನು ಪಿಜಿಗಳನ್ನಾಗಿ ಬದಲಾಯಿಸಲಾಗಿದೆ. ಆದರೆ ಇದೀಗ ಪಿಜಿ ನಿಯಮ ಉಲ್ಲಂಘನೆ ಸಂಕಷ್ಟವನ್ನು ತಂದಿದೆ.
ಈ ಸಂಬಂಧ ಮಾತನಾಡಿರುವ ಬಿಬಿಎಂಪಿ ಆರೋಗ್ಯ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಅವರು, ಬೆಂಗಳೂರಿನಲ್ಲಿ ಪಿಜಿ ನಿರ್ವಾಹಕರು ಕಟ್ಟಡದ ಬೈಲಾಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಬಿಬಿಎಂಪಿಯ ನಿಯಮಾನುಸಾರ 40 ಅಡಿಗಿಂತ ಕಡಿಮೆ ರಸ್ತೆ ಅಗಲವಿರುವ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ಇರುವುದಿಲ್ಲ. ಅಲ್ಲದೇ ನಿರ್ವಹಣೆ ಕೊರತೆ ಹಾಗೂ ನಿಯಮಗಳ ಉಲ್ಲಂಘನೆ ಸಹ ಆಗಿದೆ.
ಕೆಲವರು ತಮ್ಮ ಕಟ್ಟಡಗಳು ವಸತಿ ಪ್ರದೇಶಗಳ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಅವುಗಳನ್ನು ಮತ್ತೆ ಪ್ರಾರಂಭಿಸುವುದಕ್ಕೆ ಅವಕಾಶ ಕೊಡಬೇಕು ಎಂದು ಕೆಲವು ಆಸ್ತಿದಾರರು ಮನವಿ ಮಾಡಿದ್ದಾರೆ. ನಾವು ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರ ಅವಕಾಶ ಕೊಡುವ ಬಗ್ಗೆ ಪರಿಶೀಲನೆ ನಡೆಸಲಿದ್ದೇವೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications