ಬೆಂಗಳೂರಲ್ಲಿ ಅನಧಿಕೃತ ಜಾಹೀರಾತು ಹಾಕುವವರಿಗೆ ಈ ನಿಯಮದಡಿ ಬಿಬಿಎಂಪಿ ಖಡಕ್ ಎಚ್ಚರಿಕೆ ಕೊಟ್ಟಿದೆ, ಏನದು?
ಬೆಂಗಳೂರು ನಗರದಲ್ಲಿ ಅನಧಿಕೃತ ಜಾಹೀರಾತು ಫ್ಲೆಕ್ಸ, ಬ್ಯಾನರ್, ಹೋಲ್ಡಿಂಗ್‌ಗಳಂತಹ ಜಾಹೀರಾತು ರಾರಾಜಿಸುತ್ತಿವೆ. ನಿಯಮ ಉಲ್ಲಂಘಿಸುವವರಿಗೆ ಈ ನಿಯಮದಡಿ ಸೂಕ್ತ ಕ್ರಮದ ಎಚ್ಚರಿಕೆ ಬಿಬಿಎಂಪಿ ನೀಡಿದೆ.
ಬೆಂಗಳೂರು, ಮಾರ್ಚ್ 14: ಬೆಂಗಳೂರು ನಗರದಲ್ಲಿ ಅನಧಿಕೃತ ವಾಣಿಜ್ಯ ಜಾಹೀರಾತು ಕುರಿತು ಎಷ್ಟು ಹೇಳಿದರೂ ಎಗ್ಗಿಲ್ಲದೇ ಫ್ಲೆಕ್ಸ, ಬ್ಯಾನರ್, ಹೋಲ್ಡಿಂಗ್ಸ್‌ಗಳು ರಾರಾಜಿಸುತ್ತಿವೆ. ಈ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಖಡಕ್ ಎಚ್ಚರಿಕೆಯೊಂದನ್ನು ನೀಡಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪವಿಧಿಗಳು-2018' ಜಾರಿಯಲ್ಲಿದೆ. ಇದರಡಿ ಅಂಗಡಿ ಮುಂಗಟ್ಟು ಜಾಹೀರಾತುಗಳು, ವಾಹನ ಸ್ವ-ಜಾಹೀರಾತು ಇನ್ನಿತರೆ ಸಣ್ಣಪುಟ್ಟ ಜಾಹೀರಾತುಗಳಿಗೆ ಸೀಮಿತ ಅವಧಿಗೆ ಅವಕಾಶ ಇದೆ. ಅವುಗಳಿಗೆ ನಿಗದಿತ ಅಳತೆಗೆ ವಿಧಿಸಲಾಗಿದೆ.

ಅವುಗಳನ್ನು ಹೊರತುಪಡಿಸಿ ಇತರೆ ಯಾವುದೇ ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕ ಅಳವಡಿಸಿ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸಬಾರದು. ಎಲ್‌ಇಡಿ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಹಾಗೂ ಸಾರ್ವಜನಿಕ ಮತ್ತು ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ ಸಮಾರಂಭಗಳು ಕುರಿತ ಜಾಹೀರಾತು/ಪ್ರಕಟಣೆಗಳ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬಾವುಟದಂತೆ ಜಾಹೀರಾತು ಅಳವಡಿಸುವುದನ್ನು ನಿಷೇಧಿಸಲಾಗಿದೆ.
ಹೀಗಿದ್ದರೂ ಬಿಬಿಎಂಪಿ ಸೂಚನೆ ಮೀರಿ ನಗರದಲ್ಲಿ ಅನಧಿಕೃತವಾಗಿ ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ, ನಗರದ ಸೌಂದರ್ಯ ಹಾಳಾಗುವಂತೆ, ಮುಖ್ಯವಾಗಿ ಪರಿಸರಕ್ಕೆ ಮಾರಕವಾಗಿ ಅಳವಡಿಸುತ್ತಿರುವವರಿಗೆ ಶಿಕ್ಷೆ ವಿಧಿಸುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದೆ. ನಿಯಮ ಉಲ್ಲಂಘಿಸುವವರಿಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸುವುದಾಗಿ, ಈ ಕುರಿತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಬಿಬಿಎಂಪಿ ತಿಳಿಸಿದೆ.
ಜಾಹೀರಾತುಗೆ ನಿಯಮ ಏನಿದೆ?
ರಾಜ್ಯ ಸರ್ಕಾರವು ಪರಿಸರ (ಸಂರಕ್ಷಣೆ) ಕಾಯಿದೆ 1986ರ ಸೆಕ್ಷನ್ 5ರ ಅಡಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಈ ವಿಷಯಗಳ ಕುರಿತು ಈಗಾಗಲೇ ಸರ್ಕಾರದಿಂದ ಮತ್ತು ಪಾಲಿಕೆಯಿಂದ ಮಾಧ್ಯಮಗಳಲ್ಲಿ ಪ್ರಕಟಣೆಗಳನ್ನು ನೀಡಿ ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.

ಈ ರೀತಿಯ ಕಾನೂನುಗಳು ಜಾರಿಯಲಿದ್ದರೂ ಸಹ ಅನ್ಯ ಮಾರ್ಗದಲ್ಲಿ ಸೈಕಲ್ ವಾಣಿಜ್ಯ ಜಾಹೀರಾತುಗಳು, ವಾಹನಗಳ ಮೇಲೆ ವಾಣಿಜ್ಯ ಜಾಹೀರಾತುಗಳು, ಎಲ್.ಇ.ಡಿ ಜಾಹೀರಾತುಗಳನ್ನು ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಬೃಹತ್ ಗಾತ್ರದ ಜಾಹೀರಾತು ಹಾಗೂ ಪ್ರಕಟಣೆಗಳನ್ನು ಅಳವಡಿಸುವುದು ಬಿಬಿಎಂಪಿ ಕಾಯ್ದೆ 2020 ಮತ್ತು ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಕಲಂ(3)ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಣಿಜ್ಯ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುವ ಕಂಪನಿ/ಉತ್ಪಾದಕರು ತಮ್ಮ ಉತ್ಪನ್ನಗಳ ಬಗ್ಗೆ ವಾಣಿಜ್ಯ ಜಾಹೀರಾತುಗಳ ಮೂಲಕ ಸಾರ್ವಜನಿಕ ಪ್ರದರ್ಶನ ಮಾಡುವಲ್ಲಿ ಖಾಸಗಿ ಏಜೆನ್ಸಿಗಳು ಅಧಿಕೃತವಾಗಿ ಬಿಬಿಎಂಪಿಯಿಂದ ಪರವಾನಿಗೆ ಪಡೆದಿರುವ ಏಜೆನ್ಸಿಗಳ ಮೂಲಕ ವಾಣಿಜ್ಯ ಜಾಹೀರಾತು ಪ್ರದರ್ಶನ ಮಾಡಬಹುದಾಗಿದೆ.
ಕಂಪನಿ/ಉತ್ಪಾದಕರು/ಪ್ರಕಟಣಾಗಾರರು/ಮುದ್ರಣಗಾರರು ಮತ್ತು ಸಂಬಂಧಪಟ್ಟ ಅನಧಿಕೃತ ಏಜೆನ್ಸಿಗಳ ಹಾಗೂ ಪ್ಲೆಕ್ಸ್ ಬ್ಯಾನರ್‌ಗಳಲ್ಲಿ ಭಾವಚಿತ್ರವಿರುವ ವ್ಯಕ್ತಿಗಳ ವಿರುದ್ಧ ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, 6 ತಿಂಗಳವರೆಗಿನ ಕಾರಾಗೃಹ ವಾಸ ಅಥವಾ ರೂ.1,000/- ಗಳವರೆಗಿನ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.












Click it and Unblock the Notifications