ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಸರಿ ಇದೆ, ಸರ್ಕಾರದ ಸಮರ್ಥನೆ
ಬೆಂಗಳೂರು, ಸೆ.9: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಹಳೆಯ ವಾರ್ಡ್‌ಗಳನ್ನು ಪುನರ್ ವಿಂಗಡಣೆ ಮಾಡಿ ಹೊಸದಾಗಿ 243 ವಾರ್ಡ್‌ಗಳನ್ನು ರಚಿಸಿರುವ ಕ್ರಮವನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ. ಅದು ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ಬೆಳವಣಿಗೆಯ ಆಧಾರದಲ್ಲಿ ಹೊಸ ವಾರ್ಡ್‌ಗಳನ್ನು ರಚಿಸಲಾಗಿದೆ ಎಂದು ಪ್ರತಿಪಾದಿಸಿದೆ.
ವಾರ್ಡ್ ಮರು ವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳು ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದವು.
ವಾರ್ಡ್ ವಿಂಗಡಣೆಗೆ ಮಾನದಂಡವೇನು?: ಆಗ ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ ವಾರ್ಡ್‌ಗಳ ಮರುವಿಂಗಡಣೆಗೆ ಮಾನದಂಡಗಳೇನು? ಎಂದು ಪ್ರಶ್ನಿಸಿತು.
ಅದಕ್ಕೆ ಉತ್ತರಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, 2011ರ ಜನಗಣತಿ ಆಧರಿಸಿ ಪ್ರತಿ ವಾರ್ಡ್‌ಗೆ ಜನಸಂಖ್ಯೆ ನಿಗದಿಪಡಿಸಲಾಗಿದೆ. ಅಲ್ಲದೇ ವಿಧಾನಸಭಾ ಕ್ಷೇತ್ರದ ಭೌಗೋಳಿಕ ವಿಸ್ತೀರ್ಣ, ಕ್ಷೇತ್ರದ ಜನಸಂಖ್ಯೆ ಬೆಳವಣಿಗೆ ಆಧರಿಸಿ ವಾರ್ಡ್‌ಗಳನ್ನು ರಚಿಸಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವಾರ್ಡ್ ವಿಂಗಡಣೆಯಲ್ಲಿಶೇ.10ರಷ್ಟು ಜನಸಂಖ್ಯೆ ಏರಿಳಿತದ ಅನುಪಾತ ಅನುಸರಿಸಲಾಗಿದೆ.

ಅದರಂತೆ, 34 ಸಾವಿರದಿಂದ 39 ಸಾವಿರ ಜನಸಂಖ್ಯೆಯ ಆಧಾರದಲ್ಲಿ ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿದೆ. ಕೆಲವು ಕಡೆ ಭೌಗೋಳಿಕ ವಿಸ್ತೀರ್ಣ ಹೆಚ್ಚಿದ್ದು, ಜನಸಂಖ್ಯೆ ಕಡಿಮೆ ಇದೆ. ಇನ್ನೂ ಕೆಲವಡೆ ಭೌಗೋಳಿಕ ವಿಸ್ತೀರ್ಣ ದೊಡ್ಡದಾಗಿದ್ದು, ಜನಸಂಖ್ಯೆ ಕಡಿಮೆ. ವಾರ್ಡ್‌ಗಳ ಮರುವಿಂಗಡಣೆಗೆ 2011ರ ಜನಸಂಖ್ಯೆ ಆಧಾರದಲ್ಲಿ ನ್ಯಾಯೋಚಿತ ರ್ಮಾಗಳನ್ನು ಅನುಸರಿಸಲಾಗಿದೆ ಎಂದು ನಿರ್ಧಾರ ಸಮರ್ಥಿಸಿಕೊಂಡರು.
ಆಕ್ಷೇಪಗಳಲ್ಲಿ ಹುರುಳಿಲ್ಲ: ವಾರ್ಡ್ ಮರು ವಿಂಗಡಣೆ ವೇಳೆ ಜನಸಂಖ್ಯೆ ಪ್ರಮಾಣ ಪರಿಗಣಿಸುವಲ್ಲಿ ಸರ್ಕಾರ ತಾರತಮ್ಯ ಎಸಗಿದೆ ಮತ್ತು ಈ ಮೂಲಕ ಬಿಬಿಎಂಪಿ ಕಾಯಿದೆ-2020ರ ಕಲಂ 7 ಅನ್ನು ಉಲ್ಲಂಘಿಸಲಾಗಿದೆ ಎಂಬ ಅರ್ಜಿದಾರರ ಆಕ್ಷೇಪಣೆಯನ್ನು ಎಜಿ ತಳ್ಳಿಹಾಕಿದರು.
ಅಲ್ಲದೇ ಮರು ವಿಂಗಡಣೆಯಲ್ಲಿರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ವಾದ ನಿರಾಕರಿಸಿದ ಅವರು, ಆ ಪಕ್ಷ ಅಥವಾ ರಾಜಕೀಯ ಎಂಬುದು ಅಪ್ರಸ್ತುತ ಎಂದರು.
ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಅವರು, ಆಯೋಗ ಈಗಾಗಲೇ ತನ್ನ ನಿಲುವನ್ನು ಕೋರ್ಟ್‌ಗೆ ಸ್ಪಷ್ಟವಾಗಿ ತಿಳಿಸಿದೆ.
ಈ ವಿಚಾರದಲ್ಲಿ ಅರ್ಜಿದಾರರ ಪರ ವಕೀಲರು ಮತ್ತೆ ಮತ್ತೆ ತಕರಾರು ತೆಗೆಯುವುದು ಸಮಂಜಸವಲ್ಲ. ಈಗ ನಿಗದಿಪಡಿಸಲಾಗಿರುವ ಮರುವಿಂಗಡಣೆಯ ಅನುಸಾರವೇ ಚುನಾವಣೆ ನಡೆಸಬೇಕು. ಏನಾದರೂ ಆಕ್ಷೇಪಣೆ ಅಥವಾ ಲೋಪದೋಷಗಳು ಇದ್ದಲ್ಲಿ ಅದನ್ನು ಮುಂದಿನ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಬಹುದು. ಚುನಾಯಿತ ಪ್ರತಿನಿಧಿಗಳಲ್ಲಿದೆ ಪಾಲಿಕೆಯನ್ನು ಆಡಳಿತಾಂಗದ ಕೈಯಲ್ಲಿನಡೆಸಿಕೊಂಡು ಹೋಗುವುದು ಸೂಕ್ತವಲ್ಲ' ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿತು.
ಬಿಜೆಪಿ ಶಾಸಕರಿಂದಲೇ ಅರ್ಜಿ: ಈ ಮಧ್ಯೆ, ಹುಳಿಮಾವು ವಾರ್ಡ್ ಮರು ವಿಂಗಡಣೆಯನ್ನು ಪ್ರಶ್ನಿಸಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ. ಸತೀಶ್ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವಾರ್ಡ್ ಪ್ರದೇಶಗಳು ಆ ಕ್ಷೇತ್ರದೊಳಗೆ ಮಾತ್ರ ವಿಭಜನೆಯಾಗಬೇಕು. ಯಾವುದೇ ವಾರ್ಡ್‌ನ ಪ್ರದೇಶಗಳು ಎರಡು ವಿಭಿನ್ನ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಕೆಯಾಗಬಾರದು ಎಂಬುದಾಗಿ ಬಿಬಿಎಂಪಿ ಕಾಯ್ದೆಯ ಸೆಕ್ಷನ್ 7 ಹೇಳುತ್ತದೆ.
ಆದರೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹುಳಿಮಾವು ವಾರ್ಡ್‌ನ ಅಕ್ಷಯ ಗಾರ್ಡನ್, ಸತ್ಯಸಾಯಿ, ಶಿರಡಿ ಸಾಯಿ ನಗರ, ವಿಐಪಿ ಲೇಔಟ್ ಮತ್ತಿತರೆ ಪ್ರದೇಶಗಳು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೂ ಸೇರಿವೆ. ಆದ್ದರಿಂದ ವಾರ್ಡ್ ಮರು ವಿಂಗಡಣೆಯ ಅಧಿಸೂಚನೆ ರದ್ದುಪಡಿಸಬೇಕು. ಹುಳಿಮಾವು ವಾರ್ಡ್‌ನ ಮರು ವಿಂಗಡಣೆಯನ್ನು ಪುನರ್ ಪರಿಶೀಲಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.












Click it and Unblock the Notifications