ಬೆಂಗಳೂರಿನಲ್ಲಿ ರಸ್ತೆಗುಂಡಿ: ಚೀಫ್ ಇಂಜಿನಿಯರ್ ವಿರುದ್ಧ ವಾರೆಂಟ್ ಜಾರಿ
ಬೆಂಗಳೂರು, ಫೆ.15: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆಗೆ ಗೈರಾದ ಮುಖ್ಯ ಇಂಜಿನಿಯರ್‌ಗೆ ವಿರುದ್ಧ ಹೈಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. ಕಳೆದ ಫೆ.7ರಂದು ನೀಡಿದ್ದ ಆದೇಶದಂತೆ ಚೀಫ್ ಇಂಜಿನಿಯರ್ ಇಂದು ವಿಚಾರಣೆಗೆ ಹಾಜರಾಗಬೇಕಾಗಿತ್ತು.
ಆದರೆ ಸಿಜೆ ರಿತುರಾಜ್ ನೇತೃತ್ವದ ವಿಭಾಗೀಯಪೀಠ ವಿಚಾರಣೆ ಕೈಗೆತ್ತಿಕೊಂಡಾಗ ಆ ಅಧಿಕಾರಿ ಗೈರು ಹಾಜರಾಗಿದ್ದರು. ಆ ಬಗ್ಗೆ ನ್ಯಾಯಾಲಯಕ್ಕೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ.
ಇದರಿಂದ ಸಿಟ್ಟಿಗೆದ್ದ ಸಿಜೆ, ಪಾಲಿಕೆಯ ಇಂಜಿನಿಯರ್ ವಿಭಾಗದ ಮುಖ್ಯಸ್ಥರ ವಿರುದ್ದ ಜಾಮೀನು ಸಹಿತ ಬಂಧನ ವಾರೆಂಟ್ ಹೊರಡಿಸಿ ಅವರನ್ನು ಫೆ.17 ರಂದು ಹೈಕೋರ್ಟ್‌ಗೆ ಹಾಜರುಪಡಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿತು.
ಇಂಜಿನಿಯರ್ ಗೈರಿಗೆ ಕೆಂಡಾಮಂಡಲವಾದ ಸಿಜೆ, ಹೈಕೋರ್ಟ್ ಹೇಳುತ್ತೆ ಏನೂ ಮಾಡುವುದಿಲ್ಲ ಎಂದು ಭಾವಿಸಬೇಡಿ. ಜಾಮೀನು ರಹಿತ ವಾರೆಂಟ್ ಹೊರಡಿಸುತ್ತಿದ್ದೆವು. ಆದರೆ ಸ್ವಲ್ಪ ಕರುಣೆ ತೋರಲಾಗಿದೆ, ಮುಂದೆ ಹೀಗೆ ಆದರೆ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು.

ಬೆಂಗಳೂರಿನ ರಸ್ತೆ ದುಃಸ್ಥಿತಿ ಸಂಬಂಧ 2015ರಲ್ಲಿ ಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠ, ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಸಿತ್ತು.
ಅಲ್ಲದೆ ನ್ಯಾಯಪೀಠ, ನಗರದಲ್ಲಿನ ರಸ್ತೆ ಗುಂಡಿ ಮುಚ್ಚವ ವಿಚಾರ ಸಂಬಂಧ ಬಿಬಿಎಂಪಿ ಇಂಜಿನಿಯರ್‌ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, "ನಿಮ್ಮ ನಿರ್ಲಕ್ಷ್ಯಕ್ಕೆ ಜನರು ಬಲಿಯಾಗಬೇಕೆ, ಈಗಾಗಲೇ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಎಷ್ಟು ಜನ ಸಾಯಬೇಕು, ಜನರನ್ನು ಹೀಗೆ ಸಾಯಲು ಬಿಡುವುದಿಲ್ಲ, ಮೊದಲು ಇಂಜಿನಿಯರ್‌ಗಳನ್ನು ಜೈಲಿಗೆ ಕಳಿಸಿದರೆ ಎಲ್ಲಾ ಸರಿ ಹೋಗುತ್ತದೆ'' ಎಂದು ಖಡಕ್ ವಾರ್ನಿಂಗ್ ನೀಡಿತ್ತು.
ಕಠಿಣ ಕ್ರಮದಿಂದ ಮಾತ್ರ ಬುದ್ಧಿ: ''ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಹೈಕೋರ್ಟ್ ಆದೇಶಗಳನ್ನು ಕಿಂಚಿತ್ತೂ ಪಾಲಿಸದೆ ಬರೀ ಕಾರಣಗಳನ್ನು ಹೇಳುತ್ತಿದ್ದೀರಿ, ರಸ್ತೆಗಳೆಲ್ಲ ಗುಂಡಿಮಯವಾಗಿವೆ, ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ನೀವು ತೋರುತ್ತಿರುವ ನಿರ್ಲಕ್ಷ್ಯಕ್ಕೆ ಜನ ಬಲಿಯಾಗಬೇಕೆ'' ಎಂದು ನ್ಯಾಯಪೀಠ ಕೇಳಿತ್ತು.
''ಚೀಫ್ ಇಂಜಿನಿಯರ್‌ಗೆ ತಕ್ಷಣವೇ ನ್ಯಾಯಾಂಗ ಆದೇಶ ಹೊರಡಿಸುವ ಮೂಲಕ ನಿಮ್ಮನ್ನು ಸೇವೆಯಿಂದ ಅಮಾನತುಪಡಿಸಿ ಜೈಲಿಗೆ ಕಳುಹಿಸುತ್ತೇವೆ. ಇಲ್ಲವಾದರೆ, ಕ್ರಿಮಿನಲ್ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಿ, ಎಐಫ್ಆರ್ ದಾಖಲಿಸಲು ಸರಕಾರಕ್ಕೆ ನಿರ್ದೇಶಿಸುತ್ತೇವೆ. ಅಂತಹ ಕಠಿಣ ಕ್ರಮ ಕೈಗೊಂಡರೆ ಮಾತ್ರ ನಿಮಗೆ ಬುದ್ದಿ ಬರುತ್ತದೆ''ಎಂದು ಕೋರ್ಟ್ ಹೇಳಿತು.
ವಾರದಲ್ಲಿ ಕ್ರಿಯಾ ಯೋಜನೆ:
ಕೊನೆಗೆ ಪಾಲಿಕೆ ಪರ ವಕೀಲರು, ಹಿರಿಯ ಅಧಿಕಾರಿಗಳ ಜತೆ ತಾವೇ ಖುದ್ದು ಚರ್ಚಿಸಿ ಸಮಸ್ಯೆ, ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ನ್ಯಾಯಪೀಠ, ''ನಿಮ್ಮ ಮೇಲೆ ಭರವಸೆ ಇಟ್ಟು ಇನ್ನೂ ಒಂದು ವಾರ ಕಾಲಾವಕಾಶ ನೀಡುತ್ತೇವೆ. ಆದರೆ, ಮುಂದಿನ ವಿಚಾರಣೆ ವೇಳೆ ಯಾವುದೇ ಕಾರಣ ನೀಡಬಾರದು. ರಸ್ತೆ ಗುಂಡಿಗಳನ್ನು ಯಾರು, ಹೇಗೆ ಮುಚ್ಚುತ್ತಾರೆ ಎನ್ನುವುದು ನಮಗೆ ಮುಖ್ಯವಲ್ಲ. ಗುಂಡಿ ಮುಚ್ಚಲು ಯಾವ ತಂತ್ರಜ್ಞಾನ ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಕ್ರಿಯಾ ಯೋಜನೆ ಸಲ್ಲಿಸಬೇಕು'' ಎಂದು ಸೂಚಿಸಿ ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications