ಆಸ್ತಿ ತೆರಿಗೆ ಸಂಗ್ರಹ ಕುಸಿತ; ಬಿಬಿಎಂಪಿಗೆ ಭಾರಿ ನಷ್ಟ
ಬೆಂಗಳೂರು, ಸೆಪ್ಟೆಂಬರ್ 16: ಕೋವಿಡ್ ಪರಿಸ್ಥಿತಿಯ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಸಂಗ್ರಹ ಕುಸಿತವಾಗಿದೆ. ಆಸ್ತಿ ತೆರಿಗೆಯೇ ಪಾಲಿಕೆಯ ಬಹುದ್ದೊಡ್ಡ ಆದಾಯದ ಮೂಲವಾಗಿದೆ.
2020ರ ಸೆಪ್ಟೆಂಬರ್ 14ರ ತನಕ ಬಿಬಿಎಂಪಿ 1,916 ಕೋಟಿ ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ 2000 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಕೋವಿಡ್ ಪರಿಸ್ಥಿತಿ ಕಾರಣ ತೆರಿಗೆ ಸಂಗ್ರಹ ಕುಸಿತಕಂಡಿದೆ.
ಬಿಬಿಎಂಪಿ ಕೌನ್ಸಿಲ್ ಅವಧಿ ಪೂರ್ಣಗೊಂಡು ಆಡಳಿತಾಧಿಕಾರಿ ನೇಮಕವಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅವರು ಜಂಟಿ ಆಯುಕ್ತರ ಜೊತೆ ಆಸ್ತಿ ತೆರಿಗೆ ಸಂಗ್ರಹದ ಬಗ್ಗೆ ಸಭೆ ನಡೆಸಿದ್ದಾರೆ.
ಆದಾಯ ತೆರಿಗೆಯೇ ಪಾಲಿಕೆಯ ಬಹುದೊಡ್ಡ ಆದಾಯದ ಮೂಲವಾಗಿದೆ. ಪಾಲಿಕೆ ಆದಾಯ ಹೆಚ್ಚಿಸಲು ಗಮನಹರಿಸುವಂತೆ ಅಧಿಕಾರಿಗಳಿಗೆ ಗೌರವ್ ಗುಪ್ತ ಮೌಖಿಕ ಆದೇಶ ನೀಡಿದ್ದಾರೆ. ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯನ್ನು ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ.

ಯಾವುದೇ ಗುರಿ ನೀಡಿರಲಿಲ್ಲ
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ 2020-21ನೇ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಯಾವುದೇ ಗುರಿಯನ್ನು ನೀಡಿರಲಿಲ್ಲ. ಆದರೆ, ಕಳೆದ ವರ್ಷಗಳ ಇದೇ ಸಮಯಕ್ಕೆ ಹೋಲಿಕೆ ಮಾಡಿದರೆ ಆಸ್ತಿ ತೆರಿಗೆ ಸಂಗ್ರಹ ಕುಸಿತವಾಗಿದೆ. ಪಾಲಿಕೆಯ ಬಹುದೊಡ್ಡ ಆದಾಯದ ಮೂಲವೇ ಬರಿದಾಗಿದೆ.

ಎಷ್ಟು ಗುರಿ ನೀಡಲಾಗಿತ್ತು
2017-18ನೇ ಸಾಲಿನಲ್ಲಿ ಬಿಬಿಎಂಪಿ 3,300 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿತ್ತು. ಆದರೆ, ಸಂಗ್ರಹವಾಗಿದ್ದು 2,133 ಕೋಟಿ ರೂ.ಗಳು ಮಾತ್ರ. 2018-19ನೇ ವರ್ಷದಲ್ಲಿಯೂ ಅದೇ ಗುರಿ ಇಟ್ಟುಕೊಳ್ಳಲಾಗಿತ್ತು. ಆಸ್ತಿ ತೆರಿಗೆ ಸಂಗ್ರಹ 2,545.59 ಕೋಟಿ ರೂ. ಆಗಿತ್ತು.

ತೆರಿಗೆ ಸಂಗ್ರಹದ ಗುರಿ ಹೆಚ್ಚಳ
2019-20ನೇ ಸಾಲಿನಲ್ಲಿ ಬಿಬಿಎಂಪಿ 3,500 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಿತ್ತು. ಆದರೆ, ಸಂಗ್ರಹವಾದ ಮೊತ್ತ 2,688.97 ಕೋಟಿ ರೂ.ಗಳು ಮಾತ್ರ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 100 ಕೋಟಿಯಷ್ಟು ಕಡಿಮೆ ಸಂಗ್ರಹವಾಗಿದೆ.

ಹಲವಾರು ಜನರು ತೆರಿಗೆ ಕಟ್ಟಿಲ್ಲ
ಈ ಬಾರಿ ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ಮೇ 31ರ ತನಕ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಹಲವಾರು ಮಾಲೀಕರು ತೆರಿಗೆ ಕಟ್ಟಿಲ್ಲ. ಬಾಡಿಗೆದಾರರು ಇಲ್ಲದ ಕಾರಣ ಮುಂದಿನ ವರ್ಷ ದಂಡದ ಮೊತ್ತದ ಸಹಿತ ತೆರಿಗೆ ಕಟ್ಟಲು ಚಿಂತನೆ ನಡೆಸುತ್ತಿದ್ದಾರೆ.












Click it and Unblock the Notifications