ಬೆಂಗಳೂರಲ್ಲಿ ಡಿ. 16ರಿಂದ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಆರಂಭ
ಬೆಂಗಳೂರು, ಡಿಸೆಂಬರ್ 15 : ಬೆಂಗಳೂರು ನಗದಲ್ಲಿ ಸೋಮವಾರದಿಂದ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೆ ಬರುತ್ತಿದೆ. ಬಿಬಿಎಂಪಿ ಕಸ್ತೂರಬಾ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಆರಂಭಿಸುತ್ತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶುಲ್ಕ ಪಾವತಿಸಿ ವಾಹನ ನಿಲುಗಡೆ ಮಾಡುವ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಡಿ.16ರ ಸೋಮವಾರದಿಂದ ಪ್ರಾಯೋಗಿಕವಾಗಿ ಜಾರಿಗೆ ತರುತ್ತಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಸಂಪೂರ್ಣ ತಂತ್ರಜ್ಞಾನ ಆಧಾರಿತ ನಿರ್ವಹಣೆಯಾಗಿದೆ. ಸೆನ್ಸಾರ್ ಆಧಾರಿತ ಪಾರ್ಕಿಂಗ್ ವ್ಯವಸ್ಥೆ ಇದಾಗಿದ್ದು, ಯೋಜನೆಯಡಿ ವಿಶೇಷವಾಗಿ ವಿಕಲ ಚೇತನರಿಗಾಗಿ ಕೆಲವು ಜಾಗಗಳನ್ನು ಮೀಸಲಿಡಲಾಗಿದೆ.
ಈ ಯೋಜನೆ ಮೇಲ್ವಿಚಾರಣೆ ಮಾಡಲು ಗಸ್ತು ವಾಹನ ನಿಯೋಜನೆ ಮಾಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದ್ದು, ಯಾವುದೇ ರೀತಿಯಲ್ಲಿ ವಾಹನಗಳಿಗೆ ಹಾನಿ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ.

ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ
ಬೆಂಗಳೂರು ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದನ್ನು ನಿಯಂತ್ರಿಸಲು ಬಿಬಿಎಂಪಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ಕಸ್ತೂರಬಾ ರಸ್ತೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ಬಳಿಕ ನಗರದ ಇನ್ನೂ ಹಲವು ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

200 ವಾಹನ ನಿಲುಗಡೆ ವ್ಯವಸ್ಥೆ
ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಡಿ ಕಸ್ತೂರಬಾ ರಸ್ತೆಯಲ್ಲಿ ಸುಮಾರು 700 ಮೀಟರ್ ಉದ್ದದ ಟ್ರಾಕ್ ಮಾಡಲಾಗಿದೆ. ಕಾರು, ಬೈಕ್ ಸೇರಿದಂತೆ 200 ವಾಹನಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಡಿಜಿಟಲ್ ಪೇಮೆಂಟ್ ವ್ಯವಸ್ಥೆ
ಪಾರ್ಕಿಂಗ್ ಶುಲ್ಕ ಮತ್ತು ಟಿಕೆಟ್ ನೀಡುವುದಕ್ಕೆ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ. ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಬಹುದು. ಪ್ರತಿದಿನ ವಾಹನ ನಿಲ್ಲಿಸುವವರು ಸ್ಮಾರ್ಟ್ ಕಾರ್ಡ್ ಪಡೆಯಲು ಅವಕಾಶ ನೀಡಲಾಗಿದೆ.

397.46 ಕೋಟಿ ಆದಾಯ ನಿರೀಕ್ಷೆ
ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡುವ ಹೊಣೆಯನ್ನು ಬಿಲ್ಡಿಂಗ್ ಕಂಟ್ರೋಲ್ ಸಲ್ಯೂಷನ್ಸ್ ಇಂಡಿಯಾ ಕಂಪನಿ ಗುತ್ತಿಗೆ ಪಡೆದಿದೆ. ಬಿಬಿಎಂಪಿಗೆ ಕಂಪನಿ ವಾರ್ಷಿಕ 31.60 ಕೋಟಿ ನೀಡಲಿದೆ. ಪಾಲಿಕೆಗೆ ಮುಂದಿನ 10 ವರ್ಷಗಳಲ್ಲಿ 397.46 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.

ಮೊಬೈಲ್ ಅಪ್ಲಿಕೇಶನ್ ಬಿಡುಗಡೆ
ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯ ನಿರ್ವಹಣೆಗಾಗಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದೆ. ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡರೆ ಯಾವ ರಸ್ತೆಯಲ್ಲಿ ಪಾರ್ಕಿಂಗ್ ಜಾಗ ಖಾಲಿ ಇದೆ ಎಂಬ ಮಾಹಿತಿ ತಿಳಿಯಲಿದೆ. ಮುಂಗಡವಾಗಿಯೂ ವಾಹನ ಪಾರ್ಕ್ ಮಾಡಲು ಸ್ಥಳವನ್ನು ಕಾಯ್ದಿರಿಸಬಹುದಾಗಿದೆ.












Click it and Unblock the Notifications