ಬಿಬಿಎಂಪಿ ಅಧಿಕಾರಿಗಳಿಂದ ದಾಳಿ: ಲಾರಿಯಲ್ಲಿದ್ದ 19.5 ಟನ್‌ಗೂ ಅಧಿಕ ಪ್ಲಾಸಿಕ್ ವಶ, ದಂಡ ಹೇರಿಕೆ
ಬೆಂಗಳೂರು, ಡಿಸೆಂಬರ್ 15: ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರವಾರ ಪದ್ಮನಾಭ ನಗರದಲ್ಲಿ ಒಂದು ಹಾಗೂ ಚಿಕ್ಕಪೇಟೆ ವ್ಯಾಪ್ತಿಯಲ್ಲಿ 2 ಲಾರಿ ಸೇರಿ ಒಟ್ಟು 3ಟ್ರಕ್‌ಗಳಲ್ಲಿ ಸುಮಾರು 19.5 ಟನ್ ಏಕಬಳಕೆಯ ಪ್ಲಾಸ್ಟಿಕ್ ಕವರ್‌ಗಳನ್ನು ಜಪ್ತಿ ಮಾಡಲಾಗಿದ್ದು, 70,000 ರೂ.ದಂಡ ವಿಧಿಸಲಾಗಿದೆ.
ಬೆಂಗಳೂರಿನ ಪದ್ಮನಾಭನಗರ ವ್ಯಾಪ್ತಿಯಲ್ಲಿ ಗುರುವಾರ ಬೆಳಗಿನಜಾವ ಸುಮಾರು 2 ಗಂಟೆಗೆ ವೇಳೆಗೆ ಲಾರಿ (ಸಂಖ್ಯೆ KA16 AA0035) ಅನುಮಾನಾಸ್ಪದವಾಗಿ ಸಂಚರಿಸುತ್ತಿತ್ತು. ಈ ಬಗ್ಗೆ ಸಲ್ಲಿಕೆಯಾದ ದೂರಿನ ಆಧಾರದಲ್ಲಿ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಲಾರಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ.
ಈ ತಂಡದಲ್ಲಿ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕ್ಷಕ ಎಂಜಿನಿಯರ್ ವಿಶ್ವನಾಥ್, ಮಾರ್ಷಲ್ ಮೇಲ್ವಿಚಾರಕ ಅಧಿಕಾರಿ ಮತ್ತು ತಂಡದ ಜೊತೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರು ದಕ್ಷಿಣ ವಲಯದ ಅಧಿಕಾರಿ ವಸಂತ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ವೇಳೆ ಲಾರಿ ಗುಜಾರಾತಿನ ಎಂಎಸ್.ಲಾಜಿಸ್ಟಿಕ್ ನಿಂದ ಬೆಂಗಳೂರಿಗೆ ಬಂದಿದೆ. ವಾಹನದಲ್ಲಿ ಸರಿ ಸುಮಾರು 12 ಟನ್‌ಗಳಷ್ಟು ನಿಷೇಧಿತ ಏಕ ಬಳಕೆ (ಒಂದೇ ಬಾರಿ ಬಳಸಬಹುದಾದ)ಯ ಪ್ಲಾಸ್ಟಿಕ್ ಕವರ್ ಇರುವುದು ಗೊತ್ತಾಗಿದೆ. ನೀಷೆಧಿತ ಪ್ಲಾಸ್ಟಿಕ್‌ಅನ್ನು ವಶಪಡಿಸಿಕೊಂಡು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನ್ಯತೆ ಪಡೆದಿರುವ ಸರ್ವೆ ನಂ.176/2, ಬ್ಯಾಲಕೆರೆ ವಿಲೇಜ್, ಹೆಸರಘಟ್ಟ ಹೋಬಳಿ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್.ರಿಸೈಕಲ್ ಎಂಬ ಸಂಸ್ಥೆಯಲ್ಲಿ ನಾಶಪಡಿಸಲಾಗಿದೆ.
ಚಿಕ್ಕಪೇಟೆ: 7.5 ಟನ್ ನಿಷೇಧಿತ ಪ್ಲಾಸಿಕ್ ವಶ
ಬಿಬಿಎಂಪಿ ವ್ಯಾಪ್ತಿಯ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್ 9 ಸಂಖ್ಯೆ 145ರ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಮೆ.ಎಂ.ಎಸ್ ಲಾಜಿಸ್ಟಿಕ್ಸ್ ಕಂಪನಿಯ ಎರಡು ಲಾರಿ (ಸಂಖ್ಯೆ KA53 D 7358 ಮತ್ತು NL01 AE3095) ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಿಬಿಎಂಪಿ ದಕ್ಷಿಣ ವಲಯದ ಸಹಾಯಕ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ. ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿಗ ಗುರುದೇವ್ ಪ್ರಕಾಶ್.ಜಿ.ಎಂ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಅವರು ಎರಡು ಲಾರಿಗಳಲ್ಲಿನ ಸುಮಾರು 7.5 ಟನ್ ನಷ್ಟು ನಿಷೇಧಿತ ಪಾಸ್ಟ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮೆ.ಎಂ.ಎಸ್ ಲಾಜಿಕ್‌ಟಿಕ್ಸ್ ಸಂಸ್ಥೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಸಂಬಂಧ 70,000ರೂ. ದಂಡ ವಿಧಿಸಲಾಗಿದೆ.
ಸದರಿ ನಿಷೇಧಿತ ಪ್ಲಾಸ್ಟಿಕ್ ಅನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮಾನ್ಯತೆ ಪಡೆದಿರುವ ಸರ್ವೆ ನಂ.176/2, ಬ್ಯಾಲಕೆರೆ ವಿಲೇಜ್, ಹೆಸರಘಟ್ಟ ಹೋಬಳಿಯ ಎಸ್.ರಿಸೈಕಲ್ ಸಂಸ್ಥೆಯಲ್ಲಿ ನಾಶಪಡಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.












Click it and Unblock the Notifications