Bengaluru: 50 ಕೋಟಿ ಮೌಲ್ಯದ ಆಸ್ತಿ ಮರಳಿ ಪಾಲಿಕೆ ವಶಕ್ಕೆ
ಬೆಂಗಳೂರು, ಜೂನ್ 21: ಬೆಂಗಳೂರಿನ ದೊಡ್ಡಕಲ್ಲಸಂದ್ರ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 50 ಕೋಟಿ ಮೌಲ್ಯದ ಆಸ್ತಿ ಒತ್ತುವರಿಯಾಗಿತ್ತು. ಬುಧವಾರ ಬಿಬಿಎಂಪಿ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ವಶಕ್ಕೆ ಪಡೆಯಿತು. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿಳಿಸಿದೆ.
ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದ ದಕ್ಷಿಣ ವಿಭಾಗದ ವಾರ್ಡ್ ನಂ.197 ರ ವ್ಯಾಪ್ತಿಯ ನಾರಾಯಣ ನಗರ 1ನೇ ಹಂತದ ದೊಡ್ಡಕಲ್ಲಸಂದ್ರ ಗ್ರಾಮದ ಸರ್ವೆ ನಂಬರ್ 79/5ಎ ರಲ್ಲಿ ಆಟದ ಮೈದಾನಕ್ಕೆಂದು ಈ ಜಾಗ ಗುರುತಿಸಲಾಗಿತ್ತು.

ಮೈದಾನಕ್ಕೆ ಮೀಸಲಿಟ್ಟಿದ್ದ ಜಾಗದ ಬಗ್ಗೆ ಶ್ರೀಮತಿ ಜಗದಾಂಬ ಮತ್ತು ಇತರರು OS No.6521/2014 ರಲ್ಲಿ ಪ್ರಕರಣವನ್ನು ಮಾನ್ಯ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಸದರಿ ಪ್ರಕರಣದ ಅರ್ಜೀಯನ್ನು ಕಳೆದ 17 ಏಪ್ರಿಲ್ 2023 ರಂದು ನ್ಯಾಯಾಲಯವು ವಜಾಗೊಳಿಸಿ ಆದೇಶ ಹೊರಡಿಸಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ 21 ಜೂನ್ 2023 ರಂದು ಬಿಬಿಎಂಪಿ ವತಿಯಿಂದ ಬೊಮ್ಮನಹಳ್ಳಿ ವಲಯ ಆಯುಕ್ತರಾದ ಡಾ. ಹರೀಶ್ ಕುಮಾರ್ ಹಾಗೂ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ಬುಧವಾರ ಒತ್ತುವರಿ ಜಾಗದ ತೆರವು ಕಾರ್ಯಾಚರಣೆ ನಡೆಯಿತು.
ಕೈಗೊಂಡು ಸುಮಾರು 50,000 ಚದರ ಅಡಿ ಇರುವ ಒಟ್ಟು ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಸ್ವತ್ತನ್ನು ಪಾಲಿಕೆ ವಶಕ್ಕೆ ಪಡೆದುಕೊಂಡಿದೆ. ಈ ಕುರಿತು ಬಿಬಿಎಂಪಿಯ ಉತ್ತರಹಳ್ಳಿ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ದೊಡ್ಡಾನೆಕುಂದಿಯಲ್ಲಿ ಒತ್ತುವರಿ ತೆರವು
ಬಿಬಿಎಂಪಿ ಅಧಿಕಾರಿಗಳು ತಂಡ ಇತ್ತೀಚೆಗಷ್ಟೇ ಮಹದೇವಪುರ ವಲಯ ದೊಡ್ಡಾನೆಕುಂದಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸರ್ವೇ ಸಂ. 24/1, 3, 4 ಮತ್ತು 5ರ ಫರ್ನ್ ಸಿಟಿಯಲ್ಲಿ ಹಾದು ಹೋಗಿರುವ ರಾಜಕಾಲುವೆಯನ್ನು ಒತ್ತುವರಿಯನ್ನು ತೆರವು ಮಾಡಿತ್ತು.
ಇಲ್ಲಿ ಒಟ್ಟು ಸುಮಾರು 200 ಮೀಟರ್ ಉದ್ದದ ರಾಜಕಾಲುವೆಯ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಕಾಂಪೌಂಡ್ ಗೋಡೆ, ಕ್ಲಬ್ ಹೌಸ್ ಕಟ್ಟಡ, ಸ್ವಿಮ್ಮಿಂಗ್ ಫೂಲ್, ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ), ಕಟ್ಟಡ ಹಾಗೂ ಕಾಂಪೌಂಡ್ ಗೋಡೆ ನಿರ್ಮಿಸಲಾಗಿತ್ತು. ಸರ್ವೇ ಮತ್ತು ಪರಿಶೀಲನೆ ಆಧರಿಸಿ ಬಿಬಿಎಂಪಿ ಕಟ್ಟಡ ನೆಲಸಮ ಮಾಡಿದೆ.
ಇದೇ ಪ್ರದೇಶದಲ್ಲಿ ಫರ್ನ್ ಸಿಟಿ ನಂತರದ ಸ್ಥಳ ಸುಮಾರು 200 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ ಖಾಲಿ ಸ್ಥಳ, ಗೌಡ್ರು ರಾಜಣ್ಣ ಹೋಟೆಲ್ ಶೆಡ್ ಅನ್ನು ಸಹ ಬುಲ್ಡೋಜರ್ ಹಚ್ಚಿ ಕೆಡವಲಾಯಿತು. ಇನ್ನು ಭಗಿನಿ ಹೋಟೆಲ್ ಅನ್ನು ತೆರವುಗೊಳಿಸಲು ಮುಂದಾದಾಗ ಹೋಟೆಲ್ ನವರೇ ಸ್ವಯಂ ತೆರವುಗೊಳಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅವರಿಗೆ ತ್ವರಿತವಾಗಿ ತೆರವಿ ಸೂಚನೆ ನೀಡಲಾಗಿದೆ. ಇನ್ನೂ ಫರ್ನ್ ಸಿಟಿಯವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications