BBMP: ಶೇ.60ರಷ್ಟು ಕನ್ನಡ ಬಳಸಿರುವ ಮಳಿಗೆಗಳು ಎಷ್ಟು? ಎಷ್ಟು ಬಾಕಿ ಇವೆ: ವಲಯವಾರು ಪಟ್ಟಿ, ಮಾಹಿತಿ ಇಲ್ಲಿದೆ
ಬೆಂಗಳೂರು, ಫೆಬ್ರವರಿ 29: ಸರ್ಕಾರದ ನಿರ್ದೇಶನ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಿ ಗಡುವು ಸಹ ನೀಡಿತ್ತು. ಇದೀಗ ಗಡುವು ಪೂರ್ಣಗೊಂಡಿದೆ. ಹಾಗಾದರೆ ಎಷ್ಟು ಮಳಿಗೆಗಳು, ಉದ್ಯಮಗಳು ಕನ್ನಡ ಕಡ್ಡಾಯಗೊಳಿಸಿವೆ?, ಎಷ್ಟು ನೋಟಿಸ್ ನೀಡಲಾಗಿದೆ?, ಎಷ್ಟು ಬಾಕಿ ಉಳಿದಿವೆ?, ಕ್ರಮ ಏನು? ಎಂಬೆಲ್ಲ ಮಾಹಿತಿ ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ ಸೇರಿದಂತೆ ಎಲ್ಲವುಗಳಿಗೆ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸಲಾಗಿದೆ.

ನಾಮಫಲಕದಲ್ಲಿ ಕನ್ನಡ ಭಾಷೆಯು ನಾಮಫಲಕದ ಮೇಲ್ಬಾಗದಲ್ಲಿ ಅಳವಡಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಉಲ್ಲೇಖಿತ ವಿಶೇಷ ರಾಜ್ಯ ಪತ್ರಿಕೆ ಅಧಿಸೂಚನಾ ಪತ್ರದಲ್ಲಿ ತಿಳಿಸಲಾಗಿದೆ. ಜತೆಗೆ ಗಡುವಿನೊಳಗೆ ಶೇ. 60 ರಷ್ಟು ಕನ್ನಡ ಕಡ್ಡಾಯವಾಗಿ ಅಳವಡಿಸಿಕೊಳ್ಳದವರ ವಿರುದ್ಧ ಶಿಸ್ತು ಕ್ರಮಕ್ಕೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಫೆ.28ಕ್ಕೆ ಗಡುವು ಅಂತ್ಯ
ಫೆಬ್ರವರಿ 02 ಹಾಗೂ ಫೆ.12 ರಂದು ನಡೆದ ಸಭೆಯಲ್ಲಿ ಬಿಬಿಎಂಪಿಯು ಫೆ.28 ರೊಳಗೆ ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಎಲ್ಲಾ ವಾಣಿಜ್ಯದಾರರಿಗೆ ಸೂಚಿಸಿದೆ. ಸುಮಾರು 55,187 ವಾಣಿಜ್ಯ ಮಳಿಗೆ/ಉದ್ದಿಮೆಗಳಿಗೆ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿಕೊಳ್ಳಲು ನೋಟೀಸ್ ಜಾರಿ ಮಾಡಲಾಗಿದೆ.
ಒಟ್ಟು 52,134 ವಾಣಿಜ್ಯ ಉದ್ದಿಮೆಗಳು ತಮ್ಮ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅನುಷ್ಠಾನಗೊಳಿಸಲಾಗಿದೆ. ಕನ್ನಡ ಭಾಷೆಯ ನಾಮಫಲಕಗಳನ್ನು ಅನುಷ್ಠಾನಗೊಳಿಸದಿರುವ 3044 ವಾಣಿಜ್ಯ ಉದ್ದಿಮೆಗಳ ಮೇಲೆ ಅಗತ್ಯ ಕ್ರಮ ಜರುಗಿಸಲು ವಿಶೇಷ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಎಂಟು ವಲಯಗಳ ಮಾಹಿತಿ
ಬೊಮ್ಮನಹಳ್ಳಿ ವಲಯ
ಈ ವಲಯದಲ್ಲಿ ಕನ್ನಡ ಬಳಸದೇ ನಿಯಮ ಉಲ್ಲಂಘಿಸಿದ ಉದ್ದಿಮೆಗಳ/ಮಳಿಗೆಗಳ ಸಂಖ್ಯೆ-13516, ನೊಟೀಸ್ ಪಡೆದವರು-13516, ಕನ್ನಡ ಅನುಷ್ಠಾನಗೊಂಡ ಸಂಖ್ಯೆ - 13014 ಮತ್ತು ಅನುಷ್ಠಾನಗೊಳ್ಳಬೇಕಾದ (ಬಾಕಿ) ಉದ್ದಿಮೆಗಳ ಸಂಖ್ಯೆ- 502
ದಾಸರಹಳ್ಳಿ ವಲಯ
ಕನ್ನಡ ಬಳಸದೇ ನಿಯಮ ಉಲ್ಲಂಘಿಸಿದ ಉದ್ದಿಮೆಗಳ/ಮಳಿಗೆಗಳ ಸಂಖ್ಯೆ -1548, ನೊಟೀಸ್ ಪಡೆದವರು- 1548, ಕನ್ನಡ ಅನುಷ್ಠಾನಗೊಂಡ ಸಂಖ್ಯೆ-1478, ಬಾಕಿ ಇರುವ ಉದ್ದಿಮೆಗಳ ಸಂಖ್ಯೆ - 70.
ಪೂರ್ವ ವಲಯ
ಉದ್ದಿಮೆಗಳ/ಮಳಿಗೆಗಳ ಸಂಖ್ಯೆ - 8634, ನೊಟೀಸ್ ಜಾರಿ -8634, ಕನ್ನಡ ಅನುಷ್ಠಾನ- 8258, ಅನುಷ್ಠಾನ ಬಾಕಿ ಸಂಖ್ಯೆ-376
ಮಹದೇವಪುರ ವಲಯ
ಉದ್ದಿಮೆಗಳ/ಮಳಿಗೆಗಳ ಸಂಖ್ಯೆ - 5967, ನೊಟೀಸ್ ಜಾರಿ- 5967, ಕನ್ನಡ ಅನುಷ್ಠಾನ - 5730, ಅನುಷ್ಠಾನ ಬಾಕಿ -237
ರಾಜರಾಜೇಶ್ವರಿ ನಗರ ವಲಯ
ಉದ್ದಿಮೆಗಳ/ಮಳಿಗೆಗಳ ಸಂಖ್ಯೆ - 6253, ನೊಟೀಸ್ ಜಾರಿ- 6253, ಕನ್ನಡ ಅನುಷ್ಠಾನವಾದ ಸಂಖ್ಯೆ - 5593, ಅನುಷ್ಠಾನ ಬಾಕಿ - 660
ದಕ್ಷಿಣ ವಲಯ
ಉದ್ದಿಮೆಗಳ/ಮಳಿಗೆಗಳ ಸಂಖ್ಯೆ - 5982, ನೊಟೀಸ್ ಜಾರಿ ಆಗಿದ್ದು-5982, ಕನ್ನಡ ಅನುಷ್ಠಾನವಾದ ಮಳಿಗೆಗಳ ಸಂಖ್ಯೆ- 5748, ಅನುಷ್ಠಾನ ಬಾಕಿ ಸಂಖ್ಯೆ- 234.
ಪಶ್ಚಿಮ ವಲಯ
ಉದ್ದಿಮೆಗಳ/ಮಳಿಗೆಗಳ ಸಂಖ್ಯೆ - 7113, ನೊಟೀಸ್ ಜಾರಿ ಆಗಿದ್ದು- 7113, ಕನ್ನಡ ಅನುಷ್ಠಾನವಾದ ಮಳಿಗೆಗಳ ಸಂಖ್ಯೆ- 6772, ಅನುಷ್ಠಾನ ಬಾಕಿ ಸಂಖ್ಯೆ- 341.
ಯಲಹಂಕ ವಲಯ
ಉದ್ದಿಮೆಗಳ/ಮಳಿಗೆಗಳ ಸಂಖ್ಯೆ - 6165, ನೊಟೀಸ್ ಜಾರಿ ಆಗಿದ್ದು- 6165, ಕನ್ನಡ ಅನುಷ್ಠಾನವಾದ ಮಳಿಗೆಗಳ ಸಂಖ್ಯೆ 5541, ಅನುಷ್ಠಾನ ಬಾಕಿ ಸಂಖ್ಯೆ- 624.
ಒಂದೆಡೆ ಬಿಬಿಎಂಪಿಯು ಕನ್ನಡದಲ್ಲಿ ನಾಮಫಕ ಅಳವಡಿಸದ 55,187 ಮಳಿಗೆಗಳಿಗೆ ನೋಟಿಸ್ ನೀಡಿದ್ದೇವೆ. ಅದರಲ್ಲಿ ಒಟ್ಟು 52,134 ಮಳಿಗೆಗಳು ಕನ್ನಡ ಬಳಕೆ ಮಾಡಿವೆ ಎಂದು ಬಿಬಿಎಂಪಿ ತಿಳಿಸಿದೆ. ಆದರೆ ನಗರದಲ್ಲಿ ಇನ್ನೂ ಹಲವಾರು ಕಡೆಗಳಲ್ಲಿ ಕನ್ನಡ ಅನುಷ್ಠಾನಗೊಳ್ಳಬೇಕಿರುವುದು ಬಾಕಿ ಇದೆ ಎಂದು ಕನ್ನಡಿಗರು, ವಿಪಕ್ಷ ನಾಯಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications