Fixmystreet ಆಪ್ ಆರಂಭಿಸಿದ ಬಿಬಿಎಂಪಿ, ಏನಿದರ ವಿಶೇಷತೆ?
ಬೆಂಗಳೂರು, ಜನವರಿ 10: ಬೆಂಗಳೂರು ನಗರದಲ್ಲಿನ ಗುಂಡಿಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಬಿಬಿಎಂಪಿ ಸೋಮವಾರ 'ಫಿಕ್ಸ್‌ಮೈಸ್ಟ್ರೀಟ್' ಮೊಬೈಲ್ ಅಪ್ಲಿಕೇಶನ್ ಅನ್ನು ಆರಂಭ ಮಾಡಿದೆ.
ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಲಭ್ಯವಿರುವ ಆ್ಯಪ್‌ನಲ್ಲಿ ನಿಮ್ಮ ಸ್ಥಳೀಯ ಗುಂಡಿಬಿದ್ದ ರಸ್ತೆಯ ಚಿತ್ರಗಳನ್ನು ಮತ್ತು ಗುಂಡಿಯ ಸ್ಥಳವನ್ನು ಹಂಚಿಕೊಳ್ಳಬಹುದಾಗಿದೆ. ಗುಂಡಿಗಳನ್ನು ಮುಚ್ಚುವ ಚಟುವಟಿಕೆಯನ್ನು ಪರಿಶೀಲಿಸಲು ಎಂಜಿನಿಯರ್‌ಗಳು ಈ ಅಪ್ಲಿಕೇಶನ್ ಅನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಆಪ್ ಅನ್ನು ಪರಿಶೀಲಿಸಿ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಗುಂಡಿಗಳನ್ನು ಮುಚ್ಚುವಂತೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.

ರಸ್ತೆಗಳ ನಿರ್ವಹಣೆಗೆ ಬೆಂಗಳೂರು ನಾಗರಿಕ ಸಂಸ್ಥೆಯಾದ ಬಿಬಿಎಂಪಿ ಹೆಚ್ಚು ಹಣ ಖರ್ಚು ಮಾಡುತ್ತದೆ. ಜೋಡಿ ರಸ್ತೆಗಳ ವಾರ್ಷಿಕ ನಿರ್ವಹಣೆಯನ್ನು ಪರಿಚಯಿಸುವುದರ ಜೊತೆಗೆ ಬಿಬಿಎಂಪಿಯು ನಗರದ ಹೊರವಲಯದಲ್ಲಿ ತನ್ನದೇ ಆದ ಬ್ಯಾಚ್ ಮಿಶ್ರಣ ಘಟಕವನ್ನು ಹೊಂದಿದೆ. ಅಲ್ಲದೆ ಸ್ವಯಂಚಾಲಿತ ಗುಂಡಿಗಳನ್ನು ತುಂಬುವ ಯಂತ್ರದ ಮೂಲಕ ಪ್ರಮುಖ ರಸ್ತೆಗಳನ್ನು ಮುಚ್ಚುವ ಏಜೆನ್ಸಿಯನ್ನು ಸಹ ನೇಮಿಸಿಕೊಂಡಿದೆ.
ಜನವರಿ 1ರಿಂದಲೇ ಈ ಆಪ್‌ಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಗಳನ್ನು ಪರಿಹಾರ ಮಾಡಿ ಈಗ ಮತ್ತೆ ಜನರಿಗೆ ಅವಕಾಶ ನೀಡಲಾಗಿದೆ. ಜನವರಿ 1, 2023 ರಿಂದ ನಾವು ಈ ಅಪ್ಲಿಕೇಶನ್ ಅನ್ನು ನವೀಕರಿಸುತ್ತೇವೆ. ನಂತರ ಜನರು ಫಿಕ್ಸ್ ಮೈ ಸ್ಟ್ರೀಟ್ ಅಪ್ಲಿಕೇಶನ್‌ನಲ್ಲಿ ತಮ್ಮ ರಸ್ತೆ ಗುಂಡಿಗಳ ಬಗ್ಗೆ ನೇರವಾಗಿ ದೂರು ನೀಡಬಹುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಈ ಹಿಂದೆ ತಿಳಿಸಿದ್ದರು.
ಸಾರ್ವಜನಿಕರಿಗಾಗಿ 2017 ರಲ್ಲಿ ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿತ್ತು. ಒಮ್ಮೆ ಜನರು ಅಪ್ಲಿಕೇಶನ್‌ನಲ್ಲಿ ಗುಂಡಿಗಳ ಬಗ್ಗೆ ದೂರನ್ನು ಕಳುಹಿಸಲು ಪ್ರಾರಂಭಿಸಿದರೆ, ಅದನ್ನು ಆ ವ್ಯಾಪ್ತಿಯ ಸಹಾಯಕ ಎಂಜಿನಿಯರ್ ಪ್ರಮಾಣೀಕರಿಸಬೇಕು. ಒಮ್ಮೆ ಪ್ರಮಾಣೀಕರಿಸಿದ ನಂತರ, ಕೆಲಸದ ಆದೇಶವು ಸ್ವಯಂಚಾಲಿತವಾಗಿ ನಡೆಯುತ್ತದೆ. ಕೆಲವು ತಾಂತ್ರಿಕ ದೋಷಗಳನ್ನು ಅಧಿಕಾರಿಗಳು ಸರಿಪಡಿಸುತ್ತಿದ್ದಾರೆ ಎಂದು ಆಯುಕ್ತರು ತಿಳಿಸಿದ್ದರು.

ಐದು ವರ್ಷಗಳ ಹಿಂದೆ ಪ್ರಾರಂಭಿಸಲಾದ ಫಿಕ್ಸ್ ಮೈ ಸ್ಟ್ರೀಟ್ ಮೊಬೈಲ್ ಅಪ್ಲೀಕೇಶನ್ ಅನ್ನು ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ 2019 ರಲ್ಲಿ ಸ್ಥಗಿತ ಮಾಡಲಾಗಿತ್ತು. ಅಂದಿನಿಂದ, ಇದನ್ನು ಬಿಬಿಎಂಪಿ ಅಧಿಕಾರಿಗಳು ಮಾತ್ರ ಬಳಸುತ್ತಿದ್ದರು. ಈಗ ಎಲ್ಲಾ ತಂತ್ರಿಕ ಅಡಚಣೆ ಸರಿಪಡಿಸಿ ಸಾರ್ವಜನಿಕರ ಮುಂದೆ ಇಡಲಾಗಿದೆ.












Click it and Unblock the Notifications