BBMP Property Tax: ಬೆಂಗಳೂರಿನ ಒಂದೇ ವಲಯದಲ್ಲಿ ದಾಖಲೆಯ ಆಸ್ತಿ ತೆರಿಗೆ ಸಂಗ್ರಹ
ಬೆಂಗಳೂರು, ಡಿಸೆಂಬರ್ 09: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಎಲ್ಲ ಎಂಟು ವಲಯಗಳಲ್ಲಿ ದಾಖಲೆ ಮಟ್ಟದಲ್ಲಿ ಆಸ್ತಿ ಸಂಗ್ರಹಿಸಿದೆ. ಆಸ್ತಿ ಬಾಕಿ ಉಳಿಸಿಕೊಂಡವರಿಗೆ ಒಟಿಎಸ್ ಯೋಜನೆ ಇನ್ನಿತರ ಉಪಕ್ರಮಗಳ ಮೂಲಕ ವಸೂಲಿಗೆ ಕ್ರಮ ವಹಿಸಿದೆ. ಪರಿಣಾಮವಾಗಿ ಎಂಟು ವಲಯಗಳ ಪೈಕಿ ಮಹಾದೇವಪುರ ವಲಯ ವ್ಯಾಪ್ತಿಯಲ್ಲಿ ಭರ್ಜರಿ ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಅಧಿಕೃತ ಮಾಹಿತಿ ನೀಡಿದರು.
ಪಾಲಿಕೆಯ ಎಂಟು ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಆಸ್ತಿ-ತೆರಿಗೆಯನ್ನು ಸಂಗ್ರಹಿಸಲಾಗಿದೆ. ಪಸಕ್ತ ಆರ್ಥಿಕ ಸಾಲಿನಲ್ಲಿ ಮಹದೇವಪುರ ವಲಯಕ್ಕೆ ನಿಗದಿಪಡಿಸಿದ ಆಸ್ತಿ ತೆರಿಗೆ ಮೊತ್ತ ರೂ.1309.04 ಕೋಟಿಗಳಾಗಿದೆ. ಈ ಪೈಕಿ ನವೆಂಬರ್ ಮಾಸಾಂತ್ಯಕ್ಕೆ ರೂ 1154.49 ಕೋಟಿಗಳನ್ನು ಸಂಗ್ರಹಿಸುವ ಮೂಲಕ ಮಹದೇವಪುರ ವಲಯದಲ್ಲಿ ಗರಿಷ್ಠ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಾರಿಗೆ ತರಲಾದ ಒಂದು ಬಾರಿ ಪರಿಹಾರ (ಓಟಿಎಸ್) ಯೋಜನೆಯನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಸಲುವಾಗಿ ಉಪ-ವಿಭಾಗ ಮತ್ತು ವಾರ್ಡ್‌ಗಳಳ ಮಟ್ಟದಲ್ಲಿ ಆಸ್ತಿ ಮಾಲೀಕರೊಂದಿಗೆ ನಿರಂತರ ಜನ ಸಂಪರ್ಕ ಸಭೆ ನಡೆಸಲಾಗಿದೆ.
ಆಸ್ತಿ ತೆರಿಗೆ ಸಂಗ್ರಹದಲ್ಲಿ ಶೇ.88 ಗುರಿ ಸಾಧನೆ
ಮಹದೇವಪುರ ವಲಯ ವ್ಯಾಪ್ತಿಯ ಕೆ.ಆರ್ ಪುರ ಉಪ-ವಿಭಾಗ ಹಾಗೂ ಹೂಡಿ ಉಪ-ವಿಭಾಗಗಳೆರಡೂ ಆಸ್ತಿ-ತೆರಿಗೆ ವಸೂಲಾತಿಯಲ್ಲಿ ಶೇಕಡಾ 90ರಷ್ಟು ಪ್ರಗತಿ ಸಾಧಿಸಿದ್ದೇವೆ. ಒಟ್ಟಾರೆಯಾಗಿ ಮಹದೇವಪುರ ವಲಯವು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶೇಕಡಾ 88.19 ರಷ್ಟು ಗುರಿ ಸಾಧಿಸಿರುತ್ತದೆ.
ಅತಿ ಹೆಚ್ಚು ಬಾಕಿ ಉಳಿಸಿಕೊಂಡಿದ್ದ ಸುಸ್ತಿದಾರರು, ಆಸ್ತಿ-ತೆರಿಗೆ ಪರಿಷ್ಕರಣೆಗೊಂಡಿರುವ ಪ್ರಕರಣಗಳು ಹಾಗೂ ತೆರಿಗೆ ಜಾಲಕ್ಕೆ ಒಳಪಡೆ ಇದ್ದಂತಹ ಆಸ್ತಿ ಮಾಲೀಕರೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುವ ಮೂಲಕ ಜನರಿಗೆ ಓಟಿಸ್ ಬಗ್ಗೆ ಮಾಹಿತಿ ನೀಡಲಾಯಿತು. ಮಾಹಿತಿ ಅರಿತ ಜನರು ಕ್ರಮೇಣ ಆಸ್ತಿ-ತೆರಿಗೆ ಪಾವತಿಸಲು ಮುಂದಾದರು.
ವಲಯ ಮಟ್ಟದಲ್ಲಿ ವಲಯ ಆಯುಕ್ತರು, ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಕಂದಾಯ ವಿಭಾಗದ ಅಧಿಕಾರಿ ಮತ್ತು ನೌಕರರು, ಬಿಬಿಎಂಪಿಯ ಓಟಿಎಸ್ ಯೋಜನೆ ಜನರಿಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ ಎಂದರು.
ಇ-ಖಾತಾ ತ್ವರಿತಗತಿ ವಿತರಣೆ: ವಲಯ ಆಯುಕ್ತ
ಬಿಬಿಎಂಪಿ ಕಂದಾಯ ವಿಭಾಗದಿಂದ ಸ್ವತ್ತಿನ ಮಾಲೀಕರಿಗೆ ಇ-ಆಸ್ತಿ ತಂತ್ರಾಂಶದ ಮೂಲಕ ತ್ವರಿತಗತಿಯಲ್ಲಿ ಇ-ಖಾತಾ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಹಾದೇವಪುರ ವಲಯ ಆಯುಕ್ತರು ಮಾಹಿತಿ ನೀಡಿದರು.
ಕಂದಾಯ ವಿಭಾಗದ ವಿಶೇಷ ಆಯುಕ್ತರು ನಿರ್ದೇಶನದಂತೆ 3-ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿ ಮತ್ತು 47-ಹೆಚ್ಚುವರಿ ವಿಷಯ ನಿರ್ವಾಹಕರ ಲಾಗಿನ್‌ಗಳನ್ನು ಸೃಜಿಸಲಾಗುವುದು. ಈ ಮೂಲಕ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಶೀಘ್ರವೇ ಅಂತಿಮ ಇ-ಖಾತಾ ವಿತರಿಸಲಾಗುವುದು ಎಂದು ತಿಳಿಸಿದರು.
3851 ಇ-ಖಾತಾ ವಿತರಣೆ
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒಟ್ಟು 4.29 ಲಕ್ಷ ಸ್ವತ್ತುಗಳಿದ್ದು, ಅಂತಿಮ ಇ-ಖಾತಾ ಕೋರಿ 6012 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 3851 ಸ್ವತ್ತುಗಳು ಇ-ಖಾತಾ ಅನುಮೋದಿಸಿ ಅಂತಿಮ ಖಾತಾ ವಿತರಿಸಲಾಗಿರುತ್ತದೆ. ಕಳೆದ 24 ಘಂಟೆಗಳಲ್ಲಿ 445 ಸ್ವತ್ತುಗಳ ಅಂತಿಮ ಇ-ಖಾತಾ ವಿತರಿಸಲಾಗಿದೆ ಎಂದು ವಿವರಿಸಿದರು.
ಅಭಿಯಾನ ಆರಂಭಿಸಿ ವಿತರಣೆ: ಸಹಾಯವಾಣಿ ಶುರು
ಎಲ್ಲ ಆಸ್ತಿಗಳಿಗೆ ಇ-ಖಾತಾ ವಿತರಿಸುವ ಸಂಬಂಧ ಮುಂದಿನ ದಿನಗಳಲ್ಲಿ ವಸತಿ ಸಮುಚ್ಚಯಗಳು, ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಹಾಗೂ ಬಡಾವಣೆಗಳಲ್ಲಿ ವಿಶೇಷ ಅಭಿಯಾನ ನಡೆಸಲಾಗುವುದು. ಅಭಿಯಾನದಡಿ ಬೃಹತ್ ಪ್ರಮಾಣದಲ್ಲಿ ಇ-ಖಾತಾ ವಿತರಣೆಗೆ ಮಾಡಲಾಗುವುದು.
ಪಾಲಿಕೆಯಿಂದ ಇ-ಖಾತಾ ಕುರಿತಾಗಿ ನಾಗರೀಕ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಇ-ಖಾತಾ ಪಡೆಯಲು ಯಾವೂದಾದರೂ ಸಮಸ್ಯೆ ಎದುರಿಸುತ್ತಿದಲ್ಲಿ ಅಥವಾ ಕಂದಾಯ ವಿಭಾಗ ಯಾವುದೇ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ನಾಗರಿಕ ಸಹಾಯವಾಣಿ ಸಂಖ್ಯೆ: 94806-83695ನ್ನು ಸಂಪರ್ಕಿಸಬಹುದು ಎಂದು ವಲಯ ಆಯುಕ್ತ ಕೆ.ಎನ್.ರಮೇಶ್ ತಿಳಿಸಿದರು.












Click it and Unblock the Notifications