Bengaluru: ಅನಧಿಕೃತ ಜಾಹೀರಾತು ತೆರವಿಗೆ ಕೈ ಜೋಡಿಸುವಂತೆ ಬಿಬಿಎಂಪಿ ಮನವಿ
ಬೆಂಗಳೂರು, ಜೂನ್ 06: ಬೆಂಗಳೂರಿನಲ್ಲಿ ಎಷ್ಟೇ ಕಠಿಣ ಕ್ರಮ ಕೈಗೊಂಡರು ಸಹ ಅನಧಿಕೃತ ಜಾಹೀರಾತು, ಫ್ಲೆಕ್ಸ್, ಕಟೌಟ್‌ಗಳ ರಾರಾಜಿಸುತ್ತಲೇ ಇವೆ. ಈ ಸಂಬಂಧ ಬಿಬಿಎಂಪಿ ಜಾಹೀರಾತು ಮುಕ್ತಗೊಳಿಸುವ ಅಭಿಯಾನದಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿದೆ.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ಮುಕ್ತಗೊಳಿಸುವ ಅಭಿಯಾನವನ್ನು ಬಿಬಿಎಂಪಿ ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ಕೈ ಜೋಡಿಸಿ ಸಹಕರಿಸುವಂತೆ ಸರ್ಕಾರೇತರ ಸಂಘ-ಸಂಸ್ಥೆಗಳು ಹಾಗೂ ನಾಗರೀಕರಲ್ಲಿ ಮನವಿ ಮಾಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018' ಜಾರಿಯಲ್ಲಿದೆ. ಅದರಲ್ಲಿ ಅಂಗಡಿ ಮುಂಗಟ್ಟು ಜಾಹೀರಾತುಗಳು, ವಾಹನ ಸ್ವ-ಜಾಹೀರಾತು ಇನ್ನಿತರೆ ಸಣ್ಣಪುಟ್ಟ ಜಾಹೀರಾತುಗಳನ್ನು ಸೀಮಿತ ಅವಧಿಗೆ ಮತ್ತು ಸೀಮಿತ ಅಳತೆಗೆ (ಪಿಪಿಪಿ ಯೋಜನೆಗಳು ಸೇರಿದಂತೆ) ಅನುಮತಿಸಲು ಮಾತ್ರ ಅವಕಾಶವಿರುತ್ತದೆ.
ವಿವಿಧ ಬಗೆಯ ಜಾಹೀರಾತುಗಳು ನಿಷಿದ್ಧ
ಈ ಮೇಲಿನ ನಿಯಮ ಹೊರತುಪಡಿಸಿ ಇತರೆ ಯಾವುದೇ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು, LED ಜಾಹೀರಾತುಗಳನ್ನು ಪ್ರದರ್ಶನ ನಿಷೇಧಿಸಲಾಗಿದೆ.

ಇದರೊಂದಿಗೆ ಸಾರ್ವಜನಿಕ ಮತ್ತು ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ ಸಮಾರಂಭಗಳು ಕುರಿತ ಜಾಹೀರಾತು/ಪ್ರಕಟಣೆಗಳ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬಾವುಟಗಳು ಇತ್ಯಾದಿ ಅಳವಡಿಸುವುದನ್ನು ನಿಷೇದಿಸಲಾಗಿದೆ. ಹೀಗಿದ್ದರೂ ಸಹ ಮತ್ತೆ ಮತ್ತೆ ಅಳವಡಿಸಲಾಗುತ್ತಿದೆ. ಇದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಅಲ್ಲದೇ ನಗರದ ಸೌಂದರ್ಯ ಹಾಳಾಗುತ್ತಿದೆ ಮತ್ತು ಪರಿಸರಕ್ಕೆ ಮಾರಕವಾಗಿರುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.
ರಾಜ್ಯ ಸರ್ಕಾರವು ಪರಿಸರ (ಸಂರಕ್ಷಣೆ), ಕಾಯಿದೆ 1986ರ ಸೆಕ್ಷನ್ 5ರ ಅಡಿಯಲ್ಲಿ 11-03-2016 ರಂತೆ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಿದೆ. ಪ್ಲಾಸ್ಟಿಕ್ ಬಳಕೆ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಅನಧಿಕೃತ ಜಾಹೀರಾತು ತೆರವಿಗೆ ಈ ನಂಬರ್‌ರೆ ಕರೆ ಮಾಡಿ
ಇನ್ನೂ ನಗರದ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ, ಅನಧಿಕೃತ ವಾಣಿಜ್ಯ ಜಾಹೀರಾತುಗಳು, ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು, ಇನ್ನಿತರೆ ಮುದ್ರಣ ಪ್ರಕಟಣೆ/ಜಾಹೀರಾತು ಹಾಗೂ ಖಾಸಗಿ ಸ್ವತ್ತುಗಳಲ್ಲಿ ಅಳವಡಿಸಿರುವ ವಾಣಿಜ್ಯ ಜಾಹೀರಾತುಗಳು, ಬೃಹತ್ ಎಲ್.ಇ.ಡಿ ಜಾಹೀರಾತುಗಳು, ಸೈಕಲ್ ಜಾಹೀರಾತುಗಳು, ವಾಣಿಜ್ಯ ಜಾಹೀರಾತುಗಳು, ವಾಹನ ಜಾಹೀರಾತುಗಳು ಇತರೇ ಜಾಹೀರಾತುಗಳು ಕಂಡು ಬಂದರೆ ದಕ್ಷಿಣ ವಲಯದ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 080-26566362/22975704 ಕ್ಕೆ ಸಂಪರ್ಕಿಸಲು ಬಿಬಿಎಂಪಿ ನಾಗರಿಕರಲ್ಲಿ ಮನವಿ ಮಾಡಿದೆ.
ದಕ್ಷಿಣ ವಲಯ ನಾಗರಿಕರು ನೀವು ಮಾಹಿತಿ ನೀಡಿದಸ್ಥಳದಲ್ಲಿ ಯಾವುದೇ ಅನಧಿಕೃತ ಜಾಹೀರಾತು ಪ್ರದರ್ಶನ ಮತ್ತು ಜಾಹೀರಾತು ಫಲಕಗಳಿದ್ದರೆ ಅದು ಯಾರಿಗೆ ಸಬಂಧಿಸಿದೆ ಎಂದು ಪತ್ತೆ ಮಾಡಲಾಗುವುದು. ನಂತರ ಸಂಬಂಧಪಟ್ಟವರಿಗೆ ದಂಡ ವಿಧಿಸಿ ತಕ್ಷಣವೇ ತೆರವುಗೊಳಿಸುತ್ತೇವೆ.
ಇನ್ನು ಈ ಜಾಹೀರಾತು ವಿಚಾರದಲ್ಲಿ ಅಪರಾಧ ಎಸಗಿರುವವರಿಗೆ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಅಡಿಯಲ್ಲಿ ಸದರಿಯವರ ವಿರುದ್ಧ FIR ದಾಖಲು ಮಾಡಿ, ಕಾನೂನು ರೀತಿಯ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಬಿಎಂಪಿಯ ಅನಧಿಕೃತ ವಿವಿಧ ಜಾಹೀರಾತುಗಳನ್ನು ನಿಯಂತ್ರಿಸುವ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿ ಬೆಂಬಲಿಸಲು ವಲಯ ಜಂಟಿ ಆಯುಕ್ತರಾದ ಡಾ. ಕೆ. ಜಗದೀಶ್ ನಾಯಕ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications