ಪ್ರಾಣಿ ಪ್ರಿಯರಿಗೆ ಗುಡ್‌ನ್ಯೂಸ್ ಕೊಟ್ಟ ಬಿಬಿಎಂಪಿ!
ಬೆಂಗಳೂರಿನಲ್ಲಿ ಪ್ರಾಣಿ ಪ್ರಿಯರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬಿಗ್‌ಗುಡ್ ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಸಂರಕ್ಷಣೆಗೆ ವಿಶೇಷ ಯೋಜನೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪರಿಚಯಿಸುತ್ತಿದೆ. ಇದೀಗ ಬೆಂಗಳೂರಿನಲ್ಲಿ ಪ್ರಾಣಿಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಭಾಗವಹಿಸುವುದಕ್ಕೆ ನೋಂದಾಯಿತ ಕಲ್ಯಾಣ ಸಂಸ್ಥೆಗಳು/ ಪ್ರಾಣಿ ಪ್ರಿಯರಿಂದ ಅರ್ಜಿ ಆಹ್ವಾನಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕರ ಆರೋಗ್ಯ, ಸಹಬಾಳ್ವೆ(Co-existence) ಬಗ್ಗೆ ಶಾಲೆಗಳಲ್ಲಿ ಅರಿವು, ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳಲು ನೋಂದಾಯಿತ ಆಸಕ್ತಿಯುಳ್ಳ ಕಲ್ಯಾಣ ಸಂಸ್ಥೆಗಳು/ ಪ್ರಾಣಿ ಪ್ರಿಯರನ್ನು ಆಹ್ವಾನಿಸಲಾಗಿದೆ. ಈ ಮೂಲಕ ವಿನೂತನ ಪ್ರಯತಕ್ಕೆ ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿಯ ಪಶುಪಾಲನ ವಿಭಾಗದ ವತಿಯಿಂದ ಪಾಲಿಕೆಯ ವ್ಯಾಪ್ತಿಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಿಯಮಗಳು 2023(ABC Rules 2023)ರ ಪ್ರಕಾರ ಕೆಲವೊಂದು ಪ್ರಮುಖ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.
1. ಬೆಂಗಳೂರಿನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ನಿಯಮನುಸಾರ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಹಾಗೂ ರೇಬಿಸ್ ರೋಗವನ್ನು ತಡೆಗಟ್ಟಲು ARV ಕಾರ್ಯಕ್ರಮವನ್ನು ನಿರ್ವಹಿಸಲಾಗುತ್ತಿದೆ.
2. ಸಾರ್ವಜನಿಕರು ಬೀದಿ / ಸಮುದಾಯ ನಾಯಿಗಳ ಜೊತೆಯಲ್ಲಿ ಯಾವ ರೀತಿ ಸ್ಪಂದಿಸುವುದು ಹಾಗೂ ಅವುಗಳಿಗೆ ಆಹಾರ ನೀಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

3. ಮೂಲವಾಸ ಸ್ಥಳದಿಂದ ಸಮುದಾಯ ನಾಯಿಗಳ ಸ್ಥಳಾಂತರವನ್ನು ನಿಷೇದಿಸಿರುವ ಬಗ್ಗೆ ಹಾಗೂ ಗಾಯಗೊಂಡ ಸಮುದಾಯ ನಾಯಿಗಳ ಆರೈಕೆ ಹಾಗೂ ನಿರ್ವಹಣೆ ಮಾಡಲಾಗುತ್ತಿದೆ.
ಈ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಹಾಗೂ ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕರ ಆರೋಗ್ಯ, ಸಹಬಾಳ್ವೆ(Co-existence) ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರ್ವಹಿಸಬೇಕಾದ ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿಯೂ ವಲಯಕ್ಕೆ 100 ಕಾರ್ಯಕ್ರಮಗಳಂತೆ ಒಟ್ಟು 800 ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದುವರಿದು ಶಾಲೆಗಳಲ್ಲಿ IEC ಕಾರ್ಯಕ್ರಮವನ್ನು ಕೈಗೊಳ್ಳಲು THE KARNATAKA SOCIETIES REGISTRATION ACT, 1960 ರಡಿ ನೋಂದಾಯಿತ ಪ್ರಾಣಿ ಕಲ್ಯಾಣ ಸಂಸ್ಥೆ /ಪ್ರಾಣಿ ಪ್ರಿಯರು ಇದರಲ್ಲಿ ಭಾಗವಹಿಸಲು ಪಾಲಿಕೆಯ ಪಶು ಸಂಗೋಪನೆ ವಿಭಾಗದಿಂದ ಆಸಕ್ತಿ ವ್ಯಕ್ತಪಡಿಸುವಿಕೆ(EOI)ಗೆ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ನೋಂದಾಯಿತ ಪ್ರಾಣಿ ಕಲ್ಯಾಣ ಸಂಸ್ಥೆ/ಪ್ರಾಣಿ ಪ್ರಿಯರು ಪಾಲಿಕೆ ಕೇಂದ್ರ ಕಛೇರಿಯ ಅನೆಕ್ಸ್-03 ಕಟ್ಟಡದಲ್ಲಿರುವ ಪಶು ಸಂಗೋಪನಾ ಕಛೇರಿಗೆ 21ನೇ ಫೆಬ್ರವರಿ 2025 ರಂದು ಸಂಜೆ 4ಗಂಟೆಯ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ದಾಖಲಾತಿಗಳನ್ನು ಸಲ್ಲಿಸಲು ಪಶು ಸಂಗೋಪನೆ ವಿಭಾಗದ ಜಂಟಿ ನಿರ್ದೇಶಕ ಮನವಿ ಮಾಡಿದ್ದಾರೆ.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಡಾ. ಚಂದ್ರಯ್ಯ, ಜಂಟಿ ನಿರ್ದೇಶಕರು(ಪಶು ಸಂಗೋಪನೆ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.
ಮೊ.ಸಂ: 99020 41310ಕ್ಕೆ ಕರೆ ಮಾಡಬಹುದಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.












Click it and Unblock the Notifications