ವಾಹನ ಸವಾರರಿಗೆ ಶುಭ ಸುದ್ದಿ,ಬಳ್ಳಾರಿ ರಸ್ತೆಯಲ್ಲಿನ್ನು ಸಂಚಾರ ಸಲೀಸು
ಬೆಂಗಳೂರು, ಜನವರಿ 22; ಪ್ರತಿದಿನ ಬೆಂಗಳೂರು ಹೊರವಲಯದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಒಂದು ಶುಭ ಸುದ್ದಿ ಇದೆ.
ದಿನವೂ ವಾಹನ ದಟ್ಟಣೆಯಿಂದ ನೀವು ಹೈರಾಣಾಗಿದ್ದೀರಾ?, ಹಾಗಿದ್ದರೆ ಇನ್ನು ಮುಂದೆ ಆ ರಸ್ತೆಯಲ್ಲಿನ ದೊಡ್ಡ ಅಡ್ಡಿ ನಿವಾರಣೆಯಾಗಲಿದೆ. ಅದೆಂದರೆ ಮೇಖ್ರಿ ವೃತ್ತದಿಂದ ಕಾವೇರಿ ಜಂಕ್ಷನ್ ತನಕ ರಸ್ತೆ ಅಗಲೀಕರಣ ಕಾರ್ಯವನನ್ನು ಬಿಬಿಎಂಪಿ ಕೈಗೊಂಡಿದೆ. ಹಾಗಾಗಿ ಆ ಮಾರ್ಗದಲ್ಲಿ ಸಂಚಾರ ಸಲೀಸಲಾಗಲಿದೆ.
ಈ ಕುರಿತಂತೆ ಬಿಬಿಎಂಪಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರಿಯದರ್ಶಿನಿ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅವರು ಬಿಬಿಎಂಪಿ ಕ್ರಮ ಕೈಗೊಂಡು ಈಗಾಗಲೇ ಕಾಮಗಾರಿ ಕೈಗೆತ್ತಿಕೊಂಡಿದೆ. ಹಾಲಿ ಎರಡು ಪಥದ ರಸ್ತೆಯು ಮೂರು ಪಥದ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಅದಕ್ಕಾಗಿ 53 ಮರಗಳನ್ನು ತೆರವುಗೊಳಿಸಲಾಗಿದ್ದು, ಎರಡು ಮರಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬಳ್ಳಾರಿ ರಸ್ತೆ ಅಗಲೀಕರಣ ಮಾಡಲು ನಿರ್ದೇಶನ ನೀಡುವಂತೆ ರಾಜಾಜಿನಗರದ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಿಬಿಎಂಪಿ ಪರ ವಕೀಲರು ಸಲ್ಲಿಸಿದ ಪ್ರಮಾಣ ಪತ್ರವನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಇದೇ ಜನವರಿ 30ಕ್ಕೆ ಮುಂದೂಡಿದೆ.
ಪ್ರಮಾಣ ಪತ್ರದಲ್ಲೇನಿದೆ?; ಹೈಕೋರ್ಟ್ ನೀಡಿದ್ದ ಸೂಚನೆಯಂತೆ ಬಳ್ಳಾರಿ ರಸ್ತೆ ಅಗಲೀಕರಣದ ಭಾಗವಾಗಿ ಮೇಖ್ರಿ ವೃತ್ತದಿಂದ ಕಾವೇರಿ ಚಿತ್ರಮಂದಿರದವರೆಗೂ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಲಾಗಿದ್ದು, ಅದು ಪ್ರಗತಿಯಲ್ಲಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ರಸ್ತೆ ಮತ್ತು ಮೂಲಸೌಲಭ್ಯಗಳ ವಿಭಾಗದ ಕಾರ್ಯನಿರ್ವಾಹಕ ಎಂಜನಿಯರ್ ಎಚ್. ಎಸ್. ಪ್ರಿಯದರ್ಶಿನಿ ಪ್ರಮಾಣ ಪತ್ರದಲ್ಲಿ ಹೇಳಿದ್ದಾರೆ.
ಸುಮಾರು 1260 ಮೀಟರ್ ಉದ್ದವಿರುವ ಈ ಮಾರ್ಗ ಮೇಖ್ರಿ ವೃತ್ತದಿಂದ ಆರು ಪಥಗಳ ರಸ್ತೆಯಿದ್ದು, ಗಾಯಿತ್ರಿ ವಿಹಾರ್ ಬಳಿಯಲ್ಲಿ ಸಣ್ಣದಾಗಿ ಕೇವಲ ಎರಡು ಪಥಗಳಾಗಿದೆ. ಅರಮನೆ ಮೈದಾನದ 4ನೇ ದ್ವಾರದಿಂದ ಕಾವೇರಿ ಚಿತ್ರಮಂದಿರದವರೆಗೂ ಕೇವಲ ಎರಡು ಪಥಗಳಾಗಿದೆ. ಈ ಭಾಗದ ಉದ್ದ 630 ಮೀಟರ್ ಗಳಾಗಿದ್ದು, ಅಗಲ 3 ರಿಂದ 3.5 ಮೀಟರ್ ನಷ್ಟಿದೆ. ಇದೀಗ ರಸ್ತೆ ಅಗಲೀಕರಣ ಮಾಡುತ್ತಿದ್ದು ಕಾಮಗಾರಿ ಪೂರ್ಣಗೊಂಡ ಬಳಿಕ ಅಗಲ 7.5 ರಿಂದ 9.5ಕ್ಕೆ ಹೆಚ್ಚಳವಾಗಲಿದೆ. ಇದರಿಂದಾಗಿ ಈವರೆಗೂ ಎರಡೂ ಮಾರ್ಗಗಗಳಲ್ಲಿ ಕೇವಲ ಎರಡು ಪಥಗಳಿರುವ ರಸ್ತೆ ಮೂರು ಪಥಗಳಾಗಿ ಬದಲಾಗಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ತೆರವು ಮಾಡುವುದು ಮತ್ತು ಸ್ಥಳಾಂತರ ಮಾಡುವುದರ ಸಂಬಂಧ ಉಪಅರಣ್ಯ ಸಂರಕ್ಷ ಣಾಧಿಕಾರಿಯವರಿಗೆ ಅರ್ಜಿ ಕಳುಹಿಸಲಾಗಿದ್ದು, ಅರಣ್ಯ ಸಂರಕ್ಷ ಣಾಧಿಕಾರಿಗಳು 2022ರ ಡಿಸೆಂಬರ್ 12ರಂದು ಮರಗಳ ತೆರವು ಮತ್ತು ಸ್ಥಳಾಂತರಕ್ಕೆ ಅನುಮತಿ ನೀಡಿದ್ದಾರೆ.
ಹಾಗಾಗಿ ಎರಡು ಮರಗಳನ್ನು ಸ್ಥಳಾಂತರ ಮಾಡಿದ್ದು, ಇನ್ನುಳಿದ 53 ಮರಗಳನ್ನು ತೆರವು ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಮೇಖ್ರಿ ವೃತ್ತದಿಂದ ಜಯಮಹಲ್ ಮಾರ್ಗದ ರಸ್ತೆಯ ಅಗಲೀಕರಣಕ್ಕೆ ಕಾಮಗಾರಿ ಆರಂಭವಾಗಬೇಕಿದ್ದು, ಈ ಸಂಬಂಧ ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಲಾಗುವುದು ಹಾಗೂ ಹೈಕೋರ್ಟ್ ನೀಡುವ ಎಲ್ಲಆದೇಶಗಳನ್ನು ಬಿಬಿಎಂಪಿ ತಪ್ಪದೇ ಪಾಲಿಸಲಿದೆ ಎಂದು ಬಿಬಿಎಂಪಿ ಸಲ್ಲಿಸಿರುವ ಅನುಪಾಲನಾ ವರದಿಯಲ್ಲಿ ವಿವರಿಸಿದೆ.












Click it and Unblock the Notifications