Wayanad Landslide: ಬೆಂಗಳೂರಿನಿಂದ ಸಂತ್ರಸ್ತರಿಗೆ 25 ಲಕ್ಷ ರೂ. ಮೌಲ್ಯದ ದಿನಸಿ ರವಾನೆ
ಬೆಂಗಳೂರು, ಆಗಸ್ಟ್ 02: ಕೇರಳ ರಾಜ್ಯದ ವಯನಾಡಿನಲ್ಲಿ ಉಂಟಾದ ಭೂಕುಸಿತ ಘಟನೆಗೆ ದೇಶವೇ ಮಮ್ಮಲ ಮರಗುತ್ತಿದೆ. ಗ್ರಾಮಗಳೇ ಕಾಣದಾಗಿದ್ದು, ಸಾವಿನ ಸಂಖ್ಯೆ 308ಕ್ಕೆ ಏರಿಕೆ ಆಗಿದೆ. ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ತಂಡ ಬೀಡು ಬಿಟ್ಟಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಾಜಕೀಯ ನಾಯಕರು ಸ್ಥಳಕ್ಕೆ ಭೇಟಿ ಕೊಟ್ಟು ನಿವಾಸಿಗಳ ಅಳಲು ಆಲಿಸುತ್ತಿದ್ದಾರೆ. ಇದೀಗ ವಯನಾಡಿನ ಸಂತ್ರಸ್ತರ ನೆರವಿಗೆ ಕರ್ನಾಟಕ ರಾಜಧಾನಿ ಬೆಂಗಳೂರು ಸಹ ಕೈ ಜೋಡಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಿಬಿಎಂಪಿ ನೌಕರರ ಸಹಕಾರ ಸಂಘವು ವಯನಾಡ್ ನಲ್ಲಿ ಮಳೆ ಪ್ರವಾಹ, ಭೂಕುಸಿತದಿಂದ ಸಂಕಷ್ಟದಲ್ಲಿರುವ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿದೆ.

ಸಂತ್ರಸ್ತರಿಗೆ ಅಗತ್ಯವಾದ ಸುಮಾರು 25 ಲಕ್ಷ ರೂ. ಮೌಲ್ಯದ ವಸ್ತುಗಳ ನೆರವು ಮತ್ತು ದಿನಸಿ ಸಾಮಾಗ್ರಿಗಳನ್ನು ಹೊತ್ತ 2 ಟ್ರಕ್‌ಗಳಿಗೆ ಶುಕ್ರವಾರ ಬಿಬಿಎಂಪಿ ಮುಖ್ಯ ಆಯುಕ್ ತುಷಾರ್ ಗಿರಿನಾಥ್ ರವರು ಚಾಲನೆ ನೀಡಿದರು. ಈ ಟ್ರಕ್‌ಗಳು ವಾಯನಾಡಿನ ಸಂತ್ರಸ್ತರ ಸ್ಥಳ ತಲುಪಲಿದ್ದು, ವಯನಾಡಿನತ್ತ ಟ್ರಕ್‌ಗಳು ಪ್ರಯಾಣ ಬೆಳೆಸಿವೆ.
ಬಿಬಿಎಂಪಿ ನೌಕರರ ಸಂಘದಿಂದ ಸಹಾಯ
ಚಾಲನೆ ನೀಡಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ತುಷಾರ್ ಗಿರಿನಾಥ್ ಅವರು, ಕೇರಳದ ವಯಾನಾಡ್ ನಲ್ಲಿ ಆಗಿರುವ ದುರಂತದಿಂದ ಸಾಕಷ್ಟು ನಷ್ಟವುಂಟಾಗಿದೆ. ಆ ಸಮಸ್ಯೆಗೆ ಎಲ್ಲಾ ಕಡೆಯಿಂದ ಸ್ಪಂದಿಸಿ ನೆರವು ನೀಡುತ್ತಿದ್ದಾರೆ ಎಂದರು.

ಜನರಿಗೆ ಸಮಸ್ಯೆ ಮತ್ತು ಸಂಕಷ್ಟಗಳು ಎದುರಾದಾಗ ಬಿಬಿಎಂಪಿ ನೌಕರರ ಸಂಘವು ಸಹಾಯ, ಸಹಕಾರ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ವಯನಾಡ್ ದುರಂತದಲ್ಲಿ ಪಾಲಿಕೆ ನೌಕರರ ಸಂಘವು 2 ಟ್ರಕ್‌ಗಳಲ್ಲಿ 25 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಅಧಿಕೃತ ಮಾಹಿತಿ ನೀಡಿದರು.
ವಯನಾಡ್ ನಲ್ಲಿದ ಪ್ರಾಕೃತಿ ದುರಂತ ಅತೀವ ನೋವು ತಂದಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರದ ಅಧಿಕಾರಿಗಳ ಜೊತೆಯಲ್ಲಿ ಸಂಘ, ಸಂಸ್ಥೆಗಳು ಸಹಕಾರ ನೀಡುತ್ತಿದೆ ಎಂದರು.
ನೌಕರರ ಸಂಘದ ಅಧ್ಯಕ್ಷರ ಕಳಕಳಿ ಏನು?
ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ಅವರು ಮಾತನಾಡಿ, ಕೇರಳ ವಯನಾಡ್ ನಲ್ಲಿ ಮಳೆ ಪ್ರವಾಹ ದುರಂತದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಜೊತೆಯಲ್ಲಿ ಸಂಘ, ಸಂಸ್ಥೆಗಳು ಸಾರ್ವಜನಿಕರು ಸಹಕಾರ ನೀಡಿದಾಗ ಬಂದ ಸಂಕಷ್ಟಗಳಿಗೆ ಸುಲಭ ಪರಿಹಾರ ನೀಡಬಹುದಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ನೌಕರರ ಸಂಘವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಪಾಲಿಕೆಯ ಅಧಿಕಾರಿ/ನೌಕರರಿಂದ ಆರ್ಥಿಕ ನೆರವಿನಿಂದ ದಿನಸಿ ಸಾಮಗ್ರಿಗಳಾದ ರವೆ, ಎಣ್ಣಿ, ಅಕ್ಕಿ, ಗೋದಿ, ಸಕ್ಕರೆ ಹಾಗೂ ದಿನ ನಿತ್ಯ ಬಳಕೆಯ ವಸ್ತುಗಳಾದ ಹಾಸಿಗೆ, ದಿಂಬು, ಬೆಡ್ ಶಿಟ್, ಸ್ವೆಟರ್, ಜರ್ಕಿನ್ ಸೇರಿದಂತೆ ಸುಮಾರು 11 ಟನ್ ಸಾಮಗ್ರಿಗಳನ್ನು ನೀಡಲಾಗುತ್ತಿದೆ ಎಂದು ಅವರು ಅಂಕಿ-ಸಂಖ್ಯೆ ವಿವರಿಸಿದರು.
ದಿನಸಿ ಸಾಮಗ್ರಿಗಳು ಹಾಗೂ ಅಗತ್ಯ ವಸ್ತುಗಳ ಟ್ರಕ್‌ಗಳ ಜೊತೆಗೆ 20ಕ್ಕೂ ಹೆಚ್ಚು ಅಧಿಕಾರಿ/ನೌಕರರು ವಯನಾಡ್ ಗೆ ತೆರಳಿದ್ದು, ಸಂತ್ರಸ್ತರಿಗೆ ಎಲ್ಲಾ ಸಾಮಗ್ರಿಗಳನ್ನು ಹಸ್ತಾಂತರ ಮಾಡಿ ಹಿಂತಿರುಗಲಿದ್ದಾರೆ ಎಂದರು.












Click it and Unblock the Notifications