BBMP: ಶೇ.60ರಷ್ಟು ಕನ್ನಡ ಕಡ್ಡಾಯ ಗಡುವು ಅಂತ್ಯ: ಉದ್ದಿಮೆದಾರರ ವಿರುದ್ಧ ಕ್ರಮಕ್ಕೆ ಸೂಚನೆ
ಬೆಂಗಳೂರು, ಫೆಬ್ರವರಿ 28: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಲಾಗಿದೆ. ಇದೀಗ ನಿಯಮ ಪಾಲಿಸಲು ಗಡುವು ನೀಡಿದ್ದರೂ ಸಹಿತ, ಕನ್ನಡ ಬಳಸದ ಅಂಗಡಿಗಳ ವಿರುದ್ಧ ಅಧಿಕಾರಿಗಳು ಗುರುವಾರ ಫೆಬ್ರವರಿ 29ರಿಂದ ಕ್ರಮ ಕೈಗೊಳ್ಳಲಿದ್ದಾರೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಅಧಿನಿಯಮ 2024' ಜಾರಿಗೆ ತಂದಿದೆ. ಇದರಡಿ ರಾಜ್ಯದಲ್ಲಿ ಶೇಕಡಾ 60ರಷ್ಟು ಕನ್ನಡ ಬಳಕೆ ಕಡ್ಡಾಯವಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇಕಡಾ 60ರಷ್ಟು ಬಳಕೆಗೆ ಸೂಚಿಸಿತ್ತು. ಈ ಸಂಬಂಧ ಗಡುವು ನೀಡಲಾಗಿತ್ತು. ಆ ಗಡುವು ಗುರುವಾರಕ್ಕೆ (ಫೆ.29ಕ್ಕೆ) ಅಂತ್ಯಗೊಳ್ಳಲಿದೆ. ಹೀಗೆ ಗಡುವು ಮೀರಿದರೂ ಸಹಿತ ಅಷ್ಟಾಗಿ ನಿಯಮ ಪಾಲನೆ ಆಗಿಲ್ಲ ಎಂದು ತಿಳಿದು ಬಂದಿದೆ.
ಗುರುವಾರದಿಂದ ಮಳಿಗೆ ವಿರುದ್ಧ ಕ್ರಮ?
ಹೀಗಾಗಿ ಬಿಬಿಎಂಪಿಯು ಬುಧವಾರ ಸುತ್ತೋಲೆ ಹೊರಡಿಸಿರುವ ಬಿಬಿಎಂಪಿಯು, ಗುರುವಾರ ಫೆಬ್ರವರಿ 29 ರಿಂದ ಅನ್ವಯವಾಗುವಂತೆ ವಾಣಿಜ್ಯ ಉದ್ದಿಮೆಗಳು ನಿಯಮ ಪಾಲಸದೇ, ಶೇಕಡಾ 60ರಷ್ಟು ಕನ್ನಡ ಕಡ್ಡಾಯವಾಗಿ ಬಳಸದ ಅಂಗಡಿ ಮುಂಗಟ್ಟು ಮಾಲೀಕರ ವಿರುದ್ಧ ಸಮರ ಸಾರಲು ತಿಳಿಸಿದೆ.
ಅಂದರೆ ಅಂತಹ ಮಳಿಗೆಗಳ ಪರವಾನಿಗೆಯನ್ನು ಅಮಾನತ್ತು ಮಾಡಲಾಗುವುದು. ಅಲ್ಲದೇ ವಾಣಿಜ್ಯ ಮಳಿಗೆಗಳಿಗೆ ಬೀಗ ಮುದ್ರೆ (ಸೀಲ್) ಹಾಕುವಂತೆ ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ: ಆರ್ ಅಶೋಕ್ ಕಿಡಿ
ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಸ್ಥೆಗಳು, ಉದ್ದಿಮೆಗಳು ಮತ್ತು ಕೈಗಾರಿಕೆಗಳ ನಾಮಫಲಕಗಳಲ್ಲಿ ಶೇಕಡ 60 ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕೆಂಬ ನಿಯಮ ಜಾರಿಗೊಳಿಸಲು ನೀಡಲಾಗಿದ್ದ ಗಡುವು ನಾಳೆಗೆ ಮುಕ್ತಾಯವಾಗಲಿದೆ. ಇನ್ನೂ ಅನೇಕ ಕಡೆಗಳಲ್ಲಿ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವಂತೆ ಅನ್ಯಭಾಷೆಯ ನಾಮಫಲಕಗಳು ರಾರಾಜಿಸುತ್ತಿವೆ ಎಂದು ವಿಪಕ್ಷ ಅರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಅನ್ಯ ಭಾಷೆಯ ಫಲಕಗಳನ್ನು ತೆರವುಗೊಳಿಸಲು ಹೋರಾಟ ಮಾಡುತ್ತಿದ್ದ ಕನ್ನಡ ಪರ ಹೋರಾಟಗಾರರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಅವರ ಮೇಲೆ ಲಾಠಿ ಪ್ರಹಾರ ಮಾಡಿ, ಕೇಸು ಹಾಕಿ ಅವರನ್ನು ಬಂಧಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರ ಈಗ ಕಾನೂನು ಜಾರಿಗೆ ತರಲು ಸಂಪೂರ್ಣ ನಿರಾಸಕ್ತಿ ತೋರುತ್ತಿದೆ ಎಂದು ದೂರಿದರು.
ಹೋರಾಟದ ಎಚ್ಚರಿಕೆ ಕೊಟ್ಟ ಬಿಜೆಪಿ
ಕನ್ನಡ ಕಡ್ಡಾಯ ಮಾಡುವ ನಿಯಮ ಕೇವಲ ಕಡತಕ್ಕೆ ಸೀಮಿತವಾಗದೆ, ಪ್ರಚಾರದ ವಸ್ತುವಾಗಿದೆ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ ಮೇಲಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಕನ್ನಡಕ್ಕೆ ದ್ರೋಹ ಬಗೆದರೆ, ಕನ್ನಡದ ಬಗ್ಗೆ ಅಸಡ್ಡೆ ತೋರಿದರೆ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿಯು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications