BBMP: ಪೂರ್ವ ವಲಯದಲ್ಲಿ ಮಳೆ ನೀರುಗಾಲುವೆ ಒತ್ತುವರಿ ತೆರವು, 110 ಹಳ್ಳಿ ನೀರಿನ ಸಮಸ್ಯೆಗೆ ಪರಿಹಾರ ಸೂಚನೆ
ಬೆಂಗಳೂರು, ಜುಲೈ 20: ಮಳೆಗಾಲ ಹಿನ್ನೆಲೆಯಲ್ಲಿ ಬಡಾವಣೆಗಳಲ್ಲಿ, ರಸ್ತೆಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆ ಆಗದಂತೆ ತಡೆಯಲು ಬಿಬಿಎಂಪಿ ರಾಜಕಾಲುವೆ, ಮಳೆ ನೀರುಗಾಲುವೆ ಒತ್ತುವರಿಗೆ ತೆರವು ಕಾರ್ಯ ಮುಂದುವರಿಸಿದೆ. ನಗರದ ಕೆಲವೆಡೆ ಜೆಸಿಬಿ ಘರ್ಜನೆ ಮುಂದುವರಿದಿದೆ.
ಬೆಂಗಳೂರಿನ ನಗರದ ಪೂರ್ವ ವಲಯ ಪುಲಕೇಶಿನಗರ ಕ್ಷೇತ್ರದ ಶಾಂಪುರ ವ್ಯಾಪ್ತಿಯಲ್ಲಿ ಮಳೆ ನೀರುಗಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಆ ಸ್ಥಳಗಳಲ್ಲಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಬುಧವಾರ ಆರಂಭಿಸಿದೆ.

ಪೂರ್ವ ವಲಯದ ಶಾಂಪುರ ವ್ಯಾಪ್ತಿಯಲ್ಲಿ ಸರ್ವೇ ಸಂಖ್ಯೆ 6, 12 ಮತ್ತು 12 ಸೇರಿದಂತೆ ಸುಮಾರು 700 ಮೀಟರ್ ಉದ್ದದ ದ್ವಿತೀಯ ಮಳೆ ನೀರುಗಾಲುವೆಯ ಮೇಲೆ 13 ಕಟ್ಟಗಳನ್ನು ನಿರ್ಮಾಣ ಮಾಡಿಕೊಂಡಿದೆ. ಈಗಾಗಲೇ ಕಂದಾಯ ಇಲಾಖೆಯ ಭೂಮಾಕರಿಂದ ಒತ್ತುವರಿಯಾಗಿರುವ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಒತ್ತುವರಿ ಮಾಡಿರುವವರಿಗೆ ತಹಶೀಲ್ದಾರ್ ರವರಿಂದ ನೋಟೀಸ್ ಸಹ ನೀಡಲಾಗಿದೆ.
ಕಂದಾಯ ಇಲಾಖೆಯ ಭೂಮಾಪಕರು, ವಾರ್ಡ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಬೃಹತ್ ನೀರುಗಾಲುವೆ ವಿಭಾಗದ ಇಂಜಿನಿಯರ್ ರವರ ನೇತೃತ್ವದಲ್ಲಿ ಇಂದು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.

ಸದರಿ ರಾಜಕಾಲುವೆಯ ಪ್ರದೇಶದಲ್ಲಿ ಕಟ್ಟಡಗಳನ್ನು ನಿಮಾರ್ಣ ಮಾಡಿಕೊಂಡಿರುವುದರಿಂದ ಎಲೆಕ್ಟ್ರಾನಿಕ್ ಟೋಟಲ್ ಸ್ಟೇಷನ್ (ETS) ಸರ್ವೇ ಮೂಲಕ ಮತ್ತೊಮ್ಮೆ ಸಮೀಕ್ಷೆ ನಡೆಸಿ ಒತ್ತುವರಿ ಜಾಗವನ್ನು ತೆರವಗೊಳಿಸಬೇಕು. ಈ ಸಂಬಂಧ ನಾಳೆಯಿಂದ ETS ಸಮೀಕ್ಷೆ ನಡೆಸಿ ಒತ್ತುವರಿ ತೆರವು ಕಾರ್ಯ ಮುಂದುವರಿಸಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.
ಚೆನ್ನಸಂದ್ರದಲ್ಲಿ ಕಾರ್ಯಾಚರಣೆ: ಮಾಲೀಕರಿಂದ ಒತ್ತುವರಿ ತೆರವು
ಈಗಾಗಲೇ ಗುರುತಿಸರುವಂತಹ ಒತ್ತುವರಿ ಪ್ರದೇಶದಲ್ಲಿ ಮನೆಯ ಮಾಲೀಕರೇ ಸ್ವಯಂಪ್ರೇರಿತವಾಗಿ ತೆರವು ಮಾಡಿಕೊಳ್ಳುತ್ತಿದ್ದಾರೆ. ETS ಸಮೀಕ್ಷೆ ಪೂರ್ಣಗೊಂಡ ಬಳಿಕ ಸಂಪೂರ್ಣ ಒತ್ತುವರಿಯನ್ನು ತೆರವುಗೊಳಿಸಿ ದ್ವಿತೀಯ ಮಳೆ ನೀರುಗಾಲುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ.
ಮಹದೇವಪುರ ವಲಯ ಕಾಡುಗೋಡಿ ವಾರ್ಡ್ ಚೆನ್ನಸಂದ್ರ ವ್ಯಾಪ್ತಿಯಲ್ಲಿ ಸುಮಾರು 30 ಮೀಟರ್ ಉದ್ದದ ರಾಜಕಾಲುವೆಯಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ಮಳಿಗಳನ್ನು ಸ್ವಯಂ ಪ್ರೇರಿತವಾಗಿ ಅವರೇ ತೆರವುಗೊಳಿಸಿ ಬಿಬಿಎಂಪಿಗೆ ಸಹಕರಿಸುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ
ಇನ್ನೂ ಮಹದೇವಪುರ ವಲಯ ವ್ಯಾಪ್ತಿಯ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿದ ಜಂಟಿ ಆಯಕ್ತೆ ಡಾ. ದಾಕ್ಷಾಯಿಣಿ ಅವರು, ಕೂಡಲೇ ಬೋರ್ ವೆಲ್ ಕೊರೆದು ನೀರಿನ ವ್ಯವಸ್ಥೆ ಕಲ್ಪಿಸಲು ವಲಯ ಜಂಟಿ ಆಯುಕ್ತರಾದ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಲಯದ ಹಗದೂರು ವಾರ್ಡ್ ಹಾಗೂ ಹೂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 110 ಹಳ್ಳಿಗಳ ಪೈಕಿ ಬರುವ ಹಳ್ಳಿಗಳಿಗೆ ಭೇಟಿ ನೀಡಿ ಸ್ಥಳಿಯ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿದರು. ವಾರ್ಡ್‌ನ ರಾಮಗೊಂಡನಹಳ್ಳಿ, ನಲ್ಲೂರಹಳ್ಳಿ, ಪಟ್ಟಂದೂರು ಅಗ್ರಹಾರ, ಗಾಂಧಿಪುರ ಗ್ರಾಮಗಳಿಗೆ ಭೇಟಿ ನೀಡಿ, ರಾಮಗೊಂಡನಹಳ್ಳಿ ಹಾಗೂ ಗಾಂಧಿ ಪುರದಲ್ಲಿ ತಲಾ 2 ಬೋರ್ ವೆಲ್ ಕೊರೆಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಈ ವೇಳೆ ಬಿಬಿಎಂಪಿ ಇಂಜಿನಿಯರ್ಗಳು, ಜಲಮಂಡಳಿಯ ಇಂಜಿನಿಯರ್ ಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications