ಮದುವೆ ಫಿಕ್ಸ್ ಆಗಿದ್ದ ಜ್ಯೋತಿಯ ಬದುಕನ್ನೇ ಕತ್ತಲು ಮಾಡಿದ ಬಿಬಿಎಂಪಿ ಅಗ್ನಿ ಅವಘಡ
ಬೆಂಗಳೂರು, ಆಗಸ್ಟ್ 19: ಬಿಬಿಎಂಪಿ ಅಗ್ನಿ ಅವಘಡ ಹಲವರ ಬದುಕನ್ನು ಕಸಿದು ಕೊಂಡಿದೆ. ಗಾಯಾಳುವಲ್ಲಿ ಓರ್ವ ಗಾಯಾಳುವಿಗೆ ಮದುವೆ ಫಿಕ್ಸ್ ಆಗಿತ್ತು, ಇನ್ನೇನು ವೈವಾಹಿಕ ಜೀವನಕ್ಕೆ ಕಾಲಿಡಬೇಕು ಅನ್ನುವಾಗ ಅಗ್ನಿ ಅವಘಡ ಬದುಕಿಗೆ ಕೊಳ್ಳಿ ಇಟ್ಟಿದೆ. ಸದ್ಯ ಆಕೆಯ ಬದುಕಿಗೆ ಬೆಳಕಾಗಲು ಬಿಬಿಎಂಪಿ ಮುಂದಾಗಿದೆ, ಹೊಸ ಪ್ಲಾನ್ ಹಾಕಿ ಕೊಳ್ಳುತ್ತಿದೆ.
ಬಿಬಿಎಂಪಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಅಗ್ನಿ ಅವಘಡ ಜ್ಯೋತಿಯ ಬದುಕನ್ನೇ ಕತ್ತಲು ಮಾಡಿದೆ. ಹೀಗೆ ಅವಘಡದ ಬೆಂಕಿಯಲ್ಲಿ ಬೆಂದಾಕೆಯ ಬದುಕಿನಲ್ಲಿ ಹೊಸ ಬೆಳಕು ಮೂಡಿಸಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಆಗಸ್ಟ್ 11ರಂದು ನಡೆದ ಅವಘಡದಲ್ಲಿ, ಲ್ಯಾಬ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಜ್ಯೋತಿ ಗಂಭೀರ ಗಾಯಗೊಂಡಿದ್ದರು. ಜ್ಯೋತಿಯ ಮುಖ ಹಾಗೂ ಎದೆ ಭಾಗಗಳಿಗೆ ಸುಟ್ಟಗಾಯವಾಗಿದ್ದು, ಸದ್ಯ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂತಹ ಜ್ಯೋತಿಯ ಬಾಳಿನಲ್ಲಿ ಸಂತೋಷದ ಹೊಸ ಬೆಳಕು ಮೂಡಿಸಲು ಮುಂದಾಗಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿಯಲ್ಲಿ ಖಾಯಂ ಹುದ್ದೆ ಕೊಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಜ್ಯೋತಿ
ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಜ್ಯೋತಿ ತಿಂಗಳಿಗೆ 12 ಸಾವಿರ ಸಂಬಳ ಪಡೆಯುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಜ್ಯೋತಿ ಇನ್ನು ಕೆಲದಿನಗಳಲ್ಲಿಯೇ ಹೊಸ ಕನಸಿಗೆ ಕಣ್ಣು ಬಿಡಬೇಕಿತ್ತು. ಬಟ್ ಅಷ್ಟರಲ್ಲಿಯೇ ಅಗ್ನಿ ಅವಘಡ ಸಂಭವಿಸಿದ್ದು, ಜ್ಯೋತಿ ಮುಖ ಬೆಂಕಿಯಲ್ಲಿ ಬೆಂದು ವಿರೂಪಗೊಂಡ ಪರಿಣಾಮ, ಕೆಲ ದಿನದಲ್ಲಿ ನಡೆಯಬೇಕಿದ್ದ ಎಂಗೇಜ್ ಮೆಂಟ್ ಕೂಡ ಕ್ಯಾನ್ಸಲ್ ಆಗಿದೆ.
ಇದನ್ನರಿತ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಜ್ಯೋತಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಕ್ಕೆ ಪ್ಲಾನ್ ಮಾಡಿದ್ದು, ಪಾಲಿಕೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಒಂದು ಸುತ್ತಿನ ಮತುಕತೆ ಕೂಡ ನಡೆಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಚರ್ಚೆ
ಈ ಬಗ್ಗೆ ಬಿಬಿಎಂಪಿ ಆಯುಕ್ತರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಕೂಡ ಚರ್ಚೆ ನಡೆಸಿದ್ದು, ಡಿಸಿಎಂ ಗ್ರೀನ್ ಸಿಗ್ನಲ್ ಕೊಟ್ಟರೆ ಬೆಂಕಿಯಲ್ಲಿ ಬೆಂದ ಜ್ಯೋತಿಗೆ ಸರ್ಕಾರಿ ಉದ್ಯೋಗ ಫಿಕ್ಸ್ ಆಗಲಿದೆ. ಒಟ್ಟಿನಲ್ಲಿ ದುರಂತದಿಂದ ಸಾಲು ಸಾಲು ಸಮಸ್ಯೆಗಳ ಸರಮಾಲೆಯಲ್ಲಿ ಸಿಲುಕಿ ಒದ್ದಾಡುತ್ತಿರುವ ಜ್ಯೋತಿ ಬದುಕಿನಲ್ಲಿ ಹೊಸ ಬೆಳಕು ಮೂಡಲಿ ಅನ್ನೋದೆ ಈಕೆಯ ಕುಟುಂಬಸ್ಥರ ಆಶಯ.












Click it and Unblock the Notifications