ಬೆಂಗಳೂರಲ್ಲಿ 5 ಸಾವಿರ ರಸ್ತೆ ಗುಂಡಿಗಳು, ಮುಚ್ಚಲು ಗಡುವು
ಬೆಂಗಳೂರು, ಆಗಸ್ಟ್. 28 : ಬೆಂಗಳೂರು ನಗರದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಗೆ ರಸ್ತೆಗಳು ಹಾಳಾಗಿದ್ದು ಗುಂಡಿಗಳು ಬಾಯ್ತೆರೆದು ನಿಂತಿವೆ. ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಗಡುವು ನೀಡಿದೆ.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಭಾನುವಾರ ರಾತ್ರಿ ನಗರ ಸಂಚಾರ ನಡೆಸಿದರು. ಪಾಲಿಕೆಯ ಇಂಜಿನಿಯರ್‌ಗಳ ಜೊತೆ ರಸ್ತೆ ದುರಸ್ಥಿ ಬಗ್ಗೆ ಮಾತುಕತೆ ನಡೆಸಿದರು.

ನಗರ ರಸ್ತೆಗಳಲ್ಲಿ ಸುಮಾರು 5 ಸಾವಿರ ಗುಂಡಿಗಳಿವೆ ಎಂದು ಬಿಬಿಎಂಪಿ ಅಂದಾಜಿಸಿದೆ. ಈ ಗುಂಡಿಗಳನ್ನು ಮುಚ್ಚಲು ಮಂಜುನಾಥ ಪ್ರಸಾದ್ ಅವರು ಅಧಿಕಾರಿಗಳಿಗೆ ಗುಡುವು ನೀಡಿದರು.
ಮಯೋಹಾಲ್, ಇಂದಿರಾ ನಗರ ಬಿಎಂಟಿಸಿ ಬಸ್ ನಿಲ್ದಾಣ, ನೂರು ಅಡಿ ರಸ್ತೆ ಮುಂತಾದ ಕಡೆ ರಸ್ತೆಗುಂಡಿಗಳನ್ನು ಪರಿಶೀಲಿಸಿದ ಆಯುಕ್ತರು ಮುಂದಿನ 48 ಗಂಟೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕು ಎಂದು ಆದೇಶ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಆಯುಕ್ತರು, 'ಎರಡು ದಿನಗಳಲ್ಲಿ ಗುಂಡಿಗಳನ್ನು ಮುಚ್ಚಲು ಆಯಾ ವಾರ್ಡ್ ವ್ಯಾಪ್ತಿಯ ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ವಾರ ಮತ್ತೊಮ್ಮೆ ಸ್ಥಿತಿ-ಗತಿ ತಿಳಿಯಲು ಪರಿಶೀಲನೆ ನಡೆಸಲಾಗುತ್ತದೆ' ಎಂದರು.
Recommended Video

ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗಿದೆ. ಇಲ್ಲಿಯ ತನಕ 345.5 ಮಿ.ಮೀ ಮಳೆಯಾಗಿದೆ. ಇದರಿಂದಾಗಿ ನಗರದ ರಸ್ತೆಗಳಲ್ಲಿ ನೀರು ನಿಂತು ಗುಂಡಿಗಳು ನಿರ್ಮಾಣವಾಗಿವೆ. ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications