ಬೆಂಗಳೂರಿನಲ್ಲಿ ಭಾಗಶಃ ಲಾಕ್‌ಡೌನ್?; ಬಿಬಿಎಂಪಿ ಆಯುಕ್ತರು ಹೇಳುವುದೇನು?
ಬೆಂಗಳೂರು, ಮಾರ್ಚ್ 20: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಶುಕ್ರವಾರ ಬೆಂಗಳೂರು ಒಂದರಲ್ಲಿಯೇ 925 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾದಂತಾಗಿದೆ.
ಮಾರ್ಚ್ 17ರಂದು ಪ್ರಧಾನಿ ಮೋದಿ ಅವರ ಸಭೆಯಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪ, ರಾಜ್ಯದಲ್ಲಿ ಲಾಕ್‌ಡೌನ್, ಕರ್ಫ್ಯೂ, ನೈಟ್ ಕರ್ಫ್ಯೂ ಯಾವುದೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಆತಂಕಕಾರಿ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮತ್ತೆ ಕೆಲವು ಕಡೆ ಲಾಕ್ ಡೌನ್ ಹೇರುವ ಸಾಧ್ಯತೆಗಳ ಕುರಿತು ಚರ್ಚಿಸಲಾಗುತ್ತಿದೆ. ನಗರದಲ್ಲಿ ಈಗಾಗಲೇ ಹನ್ನೆರಡು ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಕೂಡ ಬೆಂಗಳೂರಿನಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳು ಹಾಗೂ ಲಾಕ್‌ಡೌನ್ ಕುರಿತು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಬೆಂಗಳೂರಿನಲ್ಲಿ ಭಾಗಶಃ ಲಾಕ್‌ಡೌನ್?
ಜನರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದರೆ ನಗರದಲ್ಲಿ ಭಾಗಶಃ ಲಾಕ್ ಡೌನ್ ಹೇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮಂಜುನಾಥ್ ಪ್ರಸಾದ್ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ತಗ್ಗಿಸಲು ಯಾವ್ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, "ಜಿಮ್‌ಗಳನ್ನು, ಸ್ವಿಮ್ಮಿಂಗ್ ಪೂಲ್‌ಗಳನ್ನು, ಸಮುದಾಯ ಭವನಗಳನ್ನು, ಉದ್ಯಾನಗಳಲ್ಲಿನ ತೆರೆದ ಜಿಮ್‌ಗಳನ್ನು ಹಾಗೂ ಸಿನಿಮಾ ಮಂದಿರಗಳನ್ನು ಕೆಲವು ಕಾಲ ಮುಚ್ಚುವಂತೆ ಕೋರಿ ಸಿಎಂ ಯಡಿಯೂರಪ್ಪ ಅವರಿಗೆ ಶಿಫಾರಸ್ಸು ಮಾಡಲು ಆಲೋಚಿಸಿರುವುದಾಗಿ ತಿಳಿಸಿದ್ದಾರೆ.

ಸಿನಿಮಾ ಮಂದಿರಗಳ ಮೇಲೆ ಯಾವುದೇ ನಿರ್ಬಂಧವಿಲ್ಲ
ಸಿನಿಮಾ ಮಂದಿರಗಳಲ್ಲಿ ಆಸನ ಸಾಮರ್ಥ್ಯವನ್ನು ಶೇ 50ರಷ್ಟು ತಗ್ಗಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಾಗರಿಕ ಸೇವೆ ಉನ್ನತ ಅಧಿಕಾರಿಗಳ ನಡುವೆ ಆರಂಭಿಕ ಸುತ್ತಿನ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ. ಆದರೆ ಈ ಕುರಿತು ಸಿಎಂ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದು, ಸಿನಿಮಾ ಮಂದಿರಗಳಲ್ಲಿ ಆಸನ ಸಾಮರ್ಥ್ಯ ತಗ್ಗಿಸುವುದಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ 12 ಕಂಟೇನ್ಮೆಂಟ್ ವಲಯ
ಬೆಂಗಳೂರಿನಲ್ಲಿ ಪೂರ್ವ, ಪಶ್ಚಿಮ, ಉತ್ತರ, ಮಹದೇವಪುರ ಹಾಗೂ ಬೊಮ್ಮನಹಳ್ಳಿಯ ಐದು ವಲಯಗಳಲ್ಲಿ ಪ್ರತಿನಿತ್ಯ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಈ ಪ್ರದೇಶಗಳಲ್ಲಿ ನಿಗಾ ಇಡಲಾಗಿದೆ. ಶುಕ್ರವಾರ ಬಿಬಿಎಂಪಿ ನಗರದಲ್ಲಿ ಇನ್ನೂ ಐದು ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯ ಎಂದು ಗುರುತಿಸಿದೆ. ಗೋವರ್ಧನ ರೆಸಿಡೆನ್ಸಿ, ಬಿಇಎಲ್ ಲೇಔಟ್‌ನಲ್ಲಿನ ಅಭಿಜ್ಞಾ ಬಿಲ್ಡಿಂಗ್, ಚಿಕ್ಕಬೊಮ್ಮಸಂದ್ರದ 1ನೇ ಮುಖ್ಯರಸ್ತೆ, ಅಡ್ಮಿರಾಲ್ಟಿ ಅವೆನ್ಯೂ, ಶಿವಕೃಪಾ ನಿಲಯ (ದಾಸರಹಳ್ಳಿ) ಗಳನ್ನು ಕಂಟೇನ್ಮೆಂಟ್ ವಲಯ ಎಂದು ಹೇಳಿದೆ. ನಗರದಲ್ಲಿ ಒಟ್ಟು 12 ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯ ಎನ್ನಲಾಗಿದೆ.

ಸೋಂಕಿನ ಬಗ್ಗೆ ತಜ್ಞರು ಹೇಳುತ್ತಿರುವುದೇನು?
ಬೆಂಗಳೂರು ಪ್ರಸ್ತುತ ಸೋಂಕಿನ ಅಪಾಯದಲ್ಲಿದ್ದು, ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಕಠಿಣ ಕ್ರಮ ತೆಗೆದುಕೊಳ್ಳುವುದು ಅವಶ್ಯಕ. ಪರಿಸ್ಥಿತಿ ಹೀಗೇ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ನಗರದಲ್ಲಿ ಪ್ರತಿನಿತ್ಯ ಸಾವಿರ ಪ್ರಕರಣಗಳು ದಾಖಲಾಗುವ ದಿನಗಳು ಮರುಕಳಿಸಲಿವೆ ಎಂದು ಕೊರೊನಾ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ಎಚ್ಚರಿಕೆ ನೀಡಿದ್ದಾರೆ.











Click it and Unblock the Notifications